ಮಂಗಳೂರು (www.vknews.com): ಸಮಾಜದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಎಲ್ಲರೊಂದಿಗೆ ಬೆರೆಯಬೇಕು. ಸರ್ಕಾರದಿಂದ ನೀಡಿರುವ ಸೌಲಭ್ಯವನ್ನು ಸದುಪಯೋಗ ಪಡಿಸುವುದರೊಂದಿಗೆ ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿಗಳಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದರು.
ಅವರು ಇತ್ತೀಚೆಗೆ ನಗರದ ತಮ್ಮ ಕಚೇರಿ ಸಭಾಂಗಣದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರಕಾರದಿಂದ ಲಿಂಗತ್ವ ಅಲ್ಪಸಂಖ್ಯಾತರಿಗೆ ಗುರುತಿನ ಚೀಟಿ ನೀಡುವುದರೊಂದಿಗೆ ಸರಕಾರದಿಂದ ಅವರುಗಳಿಗೆ ನೀಡಿರುವ ಮೂಲಭೂತ ಸೌಕರ್ಯಗಳನ್ನು ತಲುಪಿಸುವ ಕೆಲಸವಾಗಬೇಕು ಎಂದರು.
ಅವರುಗಳಿಗೆ ಗುರುತಿನ ಚೀಟಿ ನೀಡಲು ಮಾಹಿತಿಯನ್ನು ಸಂಬಂಧಪಟ್ಟ ಕಚೇರಿಯಲ್ಲಿ ಸಂಗ್ರಹಿಸಿ ನೀಡಬೇಕು ಎಂದ ಅವರು, ಗುರುತಿನ ಚೀಟಿ ನಕಲು ಆಗದಂತೆ ಹಾಗೂ ಇತರರಿಗೆ ಲಭ್ಯವಾಗದಂತೆ ಎಚ್ಚರ ವಹಿಸಬೇಕು ಎಂದರು.
ಸರ್ಕಾರ ಲಿಂಗತ್ವ ಅಲ್ಪಸಂಖ್ಯಾತರಿಗೋಸ್ಕರ ಜಾರಿಗೆ ತಂದಿರುವ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಬಗ್ಗೆ ಅವರಿಗೆ ಅರಿವು ಮೂಡಿಸಿ, ಅವರನ್ನು ಫಲಾನುಭವಿಗಳನ್ನಾಗಿಸಬೇಕು ಎಂದರು.
ಜಿಲ್ಲೆಯಲ್ಲಿ ಮೈತ್ರಿ ಯೋಜನೆಯಡಿ 22 ಫಲಾನುಭವಿಗಳಿದ್ದಾರೆ. ಅವರುಗಳಿಗೆ ಸರಿಯಾಗಿ ಪಿಂಚಣಿ ಬರುತ್ತಿಲ್ಲ ಎಂಬ ಬಗ್ಗೆ ದೂರು ಕೇಳಿ ಬರುತ್ತಿದೆ. ಈ ಬಗ್ಗೆ ಕಂದಾಯ ಇಲಾಖೆಯ ಶಿರಾಸ್ಥಿದಾರರು ಗಮನಹರಿಸುವುದರೊಂದಿಗೆ ಎಲ್ಲಾ ಫಲಾನುಭವಿಗಳಿಗೆ ಪಿಂಚಣಿ ದೊರೆಯುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿನ ಲಿಂಗತ್ವ ಅಲ್ಪಸಂಖ್ಯಾತರಿಗೆ ನಿವೇಶನ ಒದಗಿಸಲು ಜಾಗ ಗುರುತಿಸುವುದರೊಂದಿಗೆ ಅವರುಗಳಿಂದ ಅರ್ಜಿಗಳನ್ನು ಸ್ವೀಕರಿಸಿ ಅರ್ಹರಿಗೆ ನಿವೇಶನ ನೀಡಬೇಕು ಎಂದರು.
ಹಿಂದುಕುಷ್ಟ್ ನಿವಾರಣ್ ಸಂಘ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ದಮನಿತ ಮಹಿಳೆಯರಿಗೆ ಸೂಕ್ತ ಸಲಹೆ ನೀಡಿ ಅವರನ್ನು ಕೌನ್ಸಿಲಿಂಗ್ ನಡೆಸಿ ಅದರಿಂದ ಹೊರತರುವ ಪ್ರಯತ್ನ ನಡೆಸಬೇಕು. ಇದರಲ್ಲಿ 10 ಮಂದಿ ಎಚ್.ಐ.ವಿ ಸೋಂಕಿತರಿದ್ದು, ಅವರನ್ನು ಸರಿಯಾಗಿ ತಪಾಸಣೆ ನಡೆಸಿ ಚಿಕಿತ್ಸೆ ನೀಡಬೇಕು. ಅಲ್ಲದೇ ಎಲ್ಲಾ ಲಿಂಗತ್ವ ಅಲ್ಪ ಸಂಖ್ಯಾತರಿಗೂ ಒಂದು ಶಿಬಿರ ಆಯೋಜಿಸಿ ಅಲ್ಲಿ ಅವರ ಆರೋಗ್ಯ ತಪಾಸಣೆ ನಡೆಸಿ ವರದಿ ಸಲ್ಲಿಸಬೇಕು ಎಂದರು.
ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ದಮನಿತ ಮಹಿಳೆಯರಿಗೆ ಪಡಿತರ ಚೀಟಿಗಳನ್ನು ನೀಡಬೇಕು ಎಂದ ಅವರು, ಈಗಾಗಲೇ ಗುರುತಿಸಿರುವ 17 ದಮನಿತ ಮಹಿಳೆಯರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಬಿ.ಪಿ.ಎಲ್ ಕಾರ್ಡ್ನ್ನು ಶೀಘ್ರವಾಗಿ ನೀಡಬೇಕು ಎಂದರು.
ಪ್ರಸ್ತುತ ಸಾಲಿನಲ್ಲಿ ಧನಶ್ರೀ ಯೋಜನೆಯಡಿ 8 ಜನರಿಗೆ ಸೌಲಭ್ಯಗಳನ್ನು ತಲುಪಿಸುವ ಕಾರ್ಯ ವಿಳಂಬವಿಲ್ಲದೆ ನೀಡಬೇಕು ಎಂದು ತಿಳಿಸಿದರು. ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಾಪ ಭೋವಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗಟ್ರೂಡ್ ವೇಗಸ್, ವೆನ್ಲಾಕ್ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಶಿವಾನಂದ ಶಾನ್ಭೋಗ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.