ರಮಳಾನ್ ವಿಶೇಷ(ವಿಶ್ವಕನ್ನಡಿಗ ನ್ಯೂಸ್): ಉಪವಾಸ. ಇದೊಂದು ಪರಿಕಲ್ಪನೆಯಂತೆ ಸಾಮಾನ್ಯವಾಗಿ ಎಲ್ಲಾ ಧರ್ಮಗಳಲ್ಲೂ ಇರುತ್ತದೆ. ಉದಾಹರಣೆಗೆ ಹಿಂದೂ ಧರ್ಮದಲ್ಲಿ ಬಹುತೇಕ ಸಂದರ್ಭಗಳಲ್ಲಿ ಉಪವಾಸ ಆಚರಿಸುವುದು ಸಾಮಾನ್ಯ. ಕ್ರಿಶ್ಚಿಯನ್ ಜನಾಂಗದಲ್ಲೂ ಸಾಮಾನ್ಯ. ಆದರೆ ಮುಸ್ಲಿಂ ಜನಾಂಗದಲ್ಲಿ ಉಪವಾಸದ ಆಚರಣೆಯು ವಿಭಿನ್ನವಾಗಿದೆ. ರಮಳಾನ್ ತಿಂಗಳ ಉಪವಾಸ ಕೇವಲ ಆಹಾರಗಳಿಂದ ದೂರವಿರುವುದು ಮಾತ್ರವಲ್ಲ. ಜೀವಮಾನದ ಅವಧಿಯಲ್ಲಿ ಪ್ರತೀ ಮಾನವನು ಎದುರಿಸಬೇಕಾದ ಪಿಡುಗುಗಳು ಮತ್ತು ಅನಿಷ್ಠಗಳಿಂದ ದೂರವಿರಬೇಕೆಂಬುದಾಗಿದೆ. ಈ ಸಮಯದಲ್ಲಿ ಮನುಷ್ಯನು ಎಲ್ಲಾ ರೀತಿಯ ದುರಭ್ಯಾಸಗಳು, ಲೈಂಗಿಕ ಚಟುವಟಿಕೆಗಳಿಂದ ದೂರವಿದ್ದು ತನ್ನ ಜೀವನದಲ್ಲಿ ಶೋಚನೀಯ ಪರಿಸ್ಥಿತಿ ಉಂಟಾಗುವುದನ್ನು ತಡೆಯಬೇಕು. ರಮಳಾನ್ ತಿಂಗಳಲ್ಲಿ ಅಲ್ಲಾಹನ ಮೇಲೆ ಮತ್ತಷ್ಟು ಪ್ರೀತಿಯಿಟ್ಟು ತಖ್’ವಾದೊಂದಿಗೆ ಆರಾಧನಾ ನಿರತರಾಗಬೇಕು.
ರಮಳಾನ್ ನಮ್ಮದೊಂದು ಯೋಜನೆಯಾಗಬೇಕು. ಖುರ್’ಆನ್ ಪಾರಾಯಣ ಅದರಲ್ಲಿ ಮುಖ್ಯವಾದದ್ದು. ಸತ್ಕರ್ಮಗಳಿಂದ ತುಂಬಿ ತುಳುಕಬೇಕು ನಮ್ಮ ರಮಳಾನ್. ಈ ಯೋಜನೆಯಡಿ ಬರುವ ಎಲ್ಲಾ ಸತ್ಕರ್ಮಗಳು ಕೇವಲ ರಮಳಾನ್ ತಿಂಗಳಿಗಾಗಿ ಮಾತ್ರ ಸೀಮಿತವಾಗಿಡದೇ ಜೀವನಪೂರ್ತಿ ಮುಂದುವರಿಸುವಂತಾಗಬೇಕು. ರಮಳಾನ್ ನಮ್ಮ ಜೀವನದ ಟರ್ನಿಂಗ್ ಪಾಯಿಂಟ್ ಆಗಬೇಕು. ಈ ಯೋಜನೆಗಳಿಗೆ ನಾವು ಮಾನಸಿಕವಾಗಿಯೂ ತಯ್ಯಾರಾಗಬೇಕು. ಆಹಾರ ಸೇವೆನೆಯಲ್ಲೂ ಜಾಗರೂಕತೆ ಇರಬೇಕು. ಕೆಟ್ಟ ಆಲೋಚನೆಗಳು ಒಳ್ಳೆಯ ಆಲೋಚನೆಗಳಾಗಿ ಪರಿವರ್ತನೆಗೊಳ್ಳಬೇಕು. ನಮ್ಮ ಜೀವನದ ಶೈಲಿಯೇ ಬದಲಾಗಬೇಕು.
ದುಆ (ಪ್ರಾರ್ಥನೆ) ನಮ್ಮ ಜೀವನದ ಮುಖ್ಯ ಅಜಂಡಾ ಆಗಬೇಕು. ಅಲ್ಲಾಹನೆಡೆಗೆ ಚಾಚುವ ಕೈಗಳು. ಅದೊಂದು ಸಾಮಾನ್ಯ ಕ್ರಿಯೆಯಲ್ಲ. ಸುಂದರವಾದ ನಮ್ಮ ಜೀವನಕ್ಕೆ ಅಲ್ಲಾಹನಿಗೆ ಕೃತಜ್ಞತೆ ಸಮರ್ಪಿಸುವುದರೊಂದಿಗೆ ಕೆಟ್ಟ, ಅನಿಷ್ಠ ಆಲೋಚನೆಗಳನ್ನು ವರ್ತನೆಗಳನ್ನು ನಮ್ಮ ಜೀವನದಿಂದ ದೂರವಾಗಿರಿಸಿ ನಾವು ಒಳಿತಿನತ್ತ ಸಾಗುವುದರೊಂದಿಗೆ ಇತರರಿಗೂ ಒಳಿತನ್ನು ಬಯಸುವುದಾಗಿದೆ. ರಮಳಾನ್ ಆಧ್ಯಾತ್ಮಿಕತೆಯಿಂದ ಕೂಡಿರಬೇಕು. ಬದಲಾವಣೆಗಳು ಆಗಬೇಕು. ಅದು ಜೀವನದುದ್ದಕ್ಕೂ ರೂಢಿಗೊಳ್ಳಬೇಕು. ನಾವು ಮಾಡುವ ಸತ್ಕರ್ಮಗಳು ನಮ್ಮ ಜೀವನದ ನವ ಮೈಲುಗಲ್ಲುಗಳಾಗಿ ನಮ್ಮ ಇಹಲೋಕ ಜೀವನದ ನಂತರವೂ ಅಮರವಾಗಿ ನಿಲ್ಲುವಂತದ್ದಾಗಬೇಕು.
ಇಲಾಹೀ ಚಿಂತನೆಗೆ ಶ್ರೇಷ್ಠವಾದ ಆರಾಧನೆ ವೃತಾಚರಣೆ ಆಗಿದೆ. ಅಲ್ಲಾಹನ ತೃಪ್ತಿ ಪಡೆಯಲು ಉಪವಾಸ ಒಂದು ವಿಧಾನವಾಗಿದೆ. ಮನುಷ್ಯನೊಬ್ಬನು ಅವನ ಎಲ್ಲಾ ಲೌಖಿಕ ಕಾರ್ಯಗಳನ್ನು ಕಟ್ಟಿಹಾಕಿ ಅಲ್ಲಾಹನೊಂದಿಗಿನ ಯೋಚನೆಗಳಿಗೆ ಸಮಯವಿಲ್ಲದವರೇ ಅಧಿಕರೂ. ಅದಕ್ಕಾಗಿಯೇ ಉಪವಾಸ ಒಂದು ತಪಸ್ಸಿನಂತೆ. ಎಲ್ಲಾ ಲೌಖಿಕ ಕಾರ್ಯಗಳನ್ನು ಅಲ್ಲಾಹನಿಗಾಗಿ ಬದಿಗಿಟ್ಟು ಹೃದಯವನ್ನು ಅವನತ್ತ ಕೇಂದ್ರೀಕರಿಸುವುದಾಗಿದೆ. ತಖ್’ವಾದೊಂದಿಗಿನ ಜೀವನ, ಸಮಯಕ್ಕೆ ಸರಿಯಾಗಿ ನಮಾಝ್, ಖುರ್ಆನ್ ಪಾರಾಯಣ, ಪ್ರವಾದಿ ಮುಹಮ್ಮದುರ್ರಸೂಲುಲ್ಲಾಹಿ ﷺ ರವರ ಮೇಲಿರುವ ಸ್ವಲಾತ್, ದಾನ-ಧರ್ಮಗಳು ಇತ್ಯಾದಿ ನಮ್ಮ ಯೋಜನೆಯಡಿಯಲ್ಲಿ ರೂಪುಗೊಳ್ಳಬೇಕು. ಅದನ್ನು ಜೀವನದುದ್ದಕ್ಕೂ ಸಾಗಿಸುವುದು ನಮ್ಮಲ್ಲಿನ ಕರ್ತವ್ಯದಂತಾಗಬೇಕು. ತಪ್ಪು ಮಾಡುವುದು ಮನುಷ್ಯ ಸಹಜ. ಆದರೆ, ಒಂದು ತಪ್ಪು ಬಂದಲ್ಲಿ ಅದರಿಂದ ಪಾಠ ಕಲಿತು ಮುಂದಕ್ಕೆ ಅದು ಸಂಭವಿಸದಂತೆ ನೋಡಿಕೊಂಡರೆ ನಮ್ಮ ಜೀವನ ಸಾರ್ಥಕ.
ಒಟ್ಟಿನಲ್ಲಿ ಈ ರಮಳಾನ್ ನಮ್ಮದೊಂದು ಯೋಜನೆಯಾಗಬೇಕು. ನಮ್ಮ ಯೋಜನೆ ಎಷ್ಟರ ಮಟ್ಟಿಗೆ ನಮ್ಮಲ್ಲಿ ಪ್ರಾಯೋಗಿಕವಾಗುತ್ತದೆ ಎಂಬ ಪರೀಕ್ಷೆ ಕೂಡಾ. ಪೂರ್ವನಿಯೋಜಿತ ಕಾರ್ಯಗಳಿಂದ ಪ್ಲಾನ್ ಗಳಿಂದ ಎಲ್ಲವನ್ನೂ ಬಲ್ಲವರು ನಾವು ಮತ್ತು ಎಲ್ಲವನ್ನೂ ಮಾಡಿ ಮುಗಿಸಲು ಸಾಧ್ಯವಿರುವವರು ನಾವು. ನಮ್ಮ ಹೃದಯ ಗಟ್ಟಿಯಾಗಬೇಕು. ಖುರ್ಆನ್ ಹೇಳಿದಂತೆ ಒಳಿತಿನ ಪಥದತ್ತ ಸಂಚರಿಸುವ ಹೃದಯಗಳು ನಮ್ಮ ಹೃದಯಗಳಾಗಬೇಕು. ನಮ್ಮ ಯೋಜನೆಯಡಿ ನಾವು ಒಳ್ಳೆಯವರಾಗುವುದೊಂದಿಗೆ ಇತರರ ಜೀವನದಲ್ಲಿ ಒಂದು ಬದಲಾವಣೆಗೆ ಹೇತುವಾಗಬೇಕು. ಸರ್ವದ್ದಕ್ಕೂ ಸೃಷ್ಠಿಕರ್ತನಾದ ಅಲ್ಲಾಹನು ಅನುಗ್ರಹಿಸಲಿ امين.
DARUNNAJATH HADIYA SHAREE’ATH COLLEGE Nellihudhikeri 571253 Kodagu
✍️ ರಾಶಿದಾ ಮುಹಮ್ಮದ್ (ವಿದ್ಯಾರ್ಥಿನಿ, ದಾರುನ್ನಜಾತ್ ಹಾದಿಯಾ ನೆಲ್ಲಿಹುದಿಕೇರಿ)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.