ಮಂಗಳೂರು (www.vknews.in) : ಶಿಕ್ಷಣವೆಂದರೆ ಕೇವಲ ಪುಸ್ತಕ ಓದುವುದು, ಪರೀಕ್ಷೆಯಲ್ಲಿ ಅಂಕ ಗಳಿಸುವುದು ಮಾತ್ರ ಅಲ್ಲ. ಶಿಕ್ಷಣ ಒಂದು ಪದ ಅಲ್ಲ, ಅದು ಅದ್ಭುತ ಕಲೆ. ಜೀವನದಲ್ಲಿ ಶಿಕ್ಷಣ ಕಲಿತರೆ ಅದು ನಮ್ಮನ್ನೇ ಬದಲಿಸುತ್ತದೆ. ನಮ್ಮ ಯೋಚನೆ, ನಮ್ಮ ನಡತೆ, ನಮ್ಮ ಭವಿಷ್ಯವನ್ನೇ ಬದಲಿಸುವ ಶಕ್ತಿ ಶಿಕ್ಷಣಕ್ಕೆ ಇದೆ.
ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಣ ವಂಚಿತರಾಗಬಾರದು. ಬಡವನಾಗಲಿ, ಶ್ರೀಮಂತನಾಗಲಿ, ಹಳ್ಳಿಯವನಾಗಲಿ, ನಗರದವನಾಗಲಿ – ಎಲ್ಲರಿಗೂ ಶಿಕ್ಷಣ ಸಿಗಲೇಬೇಕು ಎಂದು ಸಾಮಾಜಿಕ ಕಾರ್ಯಕರ್ತ ರಿಯಾಝ್ ಹರೇಕಳ ಆಗ್ರಹಿಸಿದ್ದಾರೆ.
ಶಿಕ್ಷಣ ಇದ್ದರೆ ಸಮಾಜವನ್ನೇ ಬದಲಾಯಿಸಬಹುದು..
ಶಿಕ್ಷಣ ಇದ್ದರೆ ಇಡೀ ಸಮಾಜವನ್ನು ಬದಲಾವಣೆ ಮಾಡುವುದಕ್ಕೆ ಸಾಧ್ಯವಾಗುತ್ತೆ. ಶಿಕ್ಷಣ ಕಲಿತ ಮಗು ನಾಳೆ ತನ್ನ ಕುಟುಂಬವನ್ನು, ತನ್ನ ಊರನ್ನು, ತನ್ನ ದೇಶವನ್ನು ಬದಲಾಯಿಸುತ್ತದೆ. ಬಡತನದಿಂದ ಹೊರಬರಲು ಇರುವ ಅತ್ಯುತ್ತಮ ದಾರಿ ಶಿಕ್ಷಣ. ಅನ್ಯಾಯದ ವಿರುದ್ಧ ಹೋರಾಡಲು ಇರುವ ದೊಡ್ಡ ಅಸ್ತ್ರ ಶಿಕ್ಷಣ. ಮೌಢ್ಯ, ಅಜ್ಞಾನವನ್ನು ಓಡಿಸಲು ಇರುವ ಬೆಳಕು ಶಿಕ್ಷಣ.
ಮೌಲಾನಾ ಆಜಾದ್ ಅವರ ಕನಸು..
ಇಂದು ನವೆಂಬರ್ 11, ರಾಷ್ಟ್ರೀಯ ಶಿಕ್ಷಣ ದಿನ. ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಹುಟ್ಟು ಹಬ್ಬದ ದಿನ. ಅವರು ಕಂಡ ಕನಸು ಅದೇ – “ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ದೊರೆಯಲಿ, ಜ್ಞಾನದಿಂದ ಸಮೃದ್ಧ ಸಮಾಜ ನಿರ್ಮಾಣವಾಗಲಿ.” “ಶಿಕ್ಷಣವೆಂಬುದು ಕೇವಲ ಅಂಕಗಳನ್ನು ಗಳಿಸುವುದಲ್ಲ, ಬದುಕನ್ನು ರೂಪಿಸುವ ಶಕ್ತಿಯಾಗಿದೆ” ಎಂಬ ಅವರ ಮಾತು ಇಂದಿಗೂ ನಮಗೆಲ್ಲರಿಗೂ ದಾರಿದೀಪ.
ಪೋಷಕರಿಗೆ, ಸಮಾಜಕ್ಕೆ ಕರೆ..
ಒಂದು ಮಗುವನ್ನೂ ಶಾಲೆಯಿಂದ ಹೊರಗೆ ಇಡಬೇಡಿ. ಹಣವಿಲ್ಲ ಎಂದು ಓದನ್ನು ನಿಲ್ಲಿಸಬೇಡಿ. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಇನ್ನೂ ಹೆಚ್ಚು ಒತ್ತು ಕೊಡಿ. ಏಕೆಂದರೆ ಒಂದು ಹೆಣ್ಣು ಮಗು ಓದಿದರೆ ಇಡೀ ಕುಟುಂಬವೇ ಓದಿದಂತೆ. ಪ್ರತಿಯೊಬ್ಬರು ಶಿಕ್ಷಣವನ್ನು ಮೈಗೂಡಿಸಿಕೊಳ್ಳಬೇಕು. ಶಿಕ್ಷಣವನ್ನು ಪ್ರೀತಿಸಬೇಕು. ಶಿಕ್ಷಣವನ್ನು ಹಂಚಬೇಕು. ಶಿಕ್ಷಣವೇ ನಮ್ಮ ಭವಿಷ್ಯ. ಶಿಕ್ಷಣವೇ ನಮ್ಮ ಶಕ್ತಿ. ಶಿಕ್ಷಣವೇ ನಮ್ಮ ಬದಲಾವಣೆ.
ರಾಷ್ಟ್ರೀಯ ಶಿಕ್ಷಣ ದಿನದ ಶುಭಾಶಯಗಳು..!
— ರಿಯಾಝ್ ಹರೇಕಳ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.