ಲೇಖನಗಳು(ವಿಶ್ವಕನ್ನಡಿಗ ನ್ಯೂಸ್): ಮಹಾಮಾರಿ ಕೊರೋನ ದೇಶಾದ್ಯಂತ ವ್ಯಾಪಿಸಿ ಅಪಾರ ಸಾವು ನೋವುಗಳು ಸಂಭವಿಸಿವೆ. ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ಸ್ಮಶಾನಗಳಲ್ಲೂ ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂತಹ ವಿಷಮ ಪರಿಸ್ಥಿತಿಯಲ್ಲಿ ಭಾರತೀಯ ಮುಸ್ಲಿಮರು ಸಲ್ಲಿಸುತ್ತಿರುವ ಸೇವೆ ನಿಜಕ್ಕೂ ಶ್ಲಾಘನೀಯ. ಮುಸ್ಲಿಮರು ಅನಾಥ ಶವಗಳಿಗೆ ಅಂತ್ಯಕ್ರಿಯೆ ನಡೆಸುತ್ತಿದ್ದಾರೆ. ಆಕ್ಸಿಜನ್ ಸರಬರಾಜು ಮಾಡುತ್ತಿದ್ದಾರೆ. ಮಸೀದಿ ಮತ್ತು ಮದ್ರಸಗಳು ಕ್ವಾರಂಟೈನ್ ಕೇಂದ್ರಗಳಾಗಿವೆ. ಹಸಿದ ಹೊಟ್ಟೆಗಳನ್ನು ತಣಿಸುತ್ತಿದ್ದಾರೆ. ರೇಷನ್ ಕಿಟ್ ವಿತರಿಸುತ್ತಿದ್ದಾರೆ. ರಕ್ತದಾನಿಗಳಾಗಿ ಹಾಗೂ ಪ್ಲಾಸ್ಮಾದಾನಿಗಳಾಗಿ ಜೀವರಕ್ಷಕರಾಗುತ್ತಿದ್ದಾರೆ. ಕೊರೋನ ರೋಗಿಗಳ ಶುಶ್ರೂಷೆ ಮಾಡುತ್ತಿದ್ದಾರೆ. ಹೀಗೆ ಮುಸ್ಲಿಮರು ಭರವಸೆಯ ಬೆಳಕಾಗಿದ್ದಾರೆ. ಎಲ್ಲೆಡೆಯಿಂದ ಮುಸ್ಲಿಂ ಸಮುದಾಯದ ಬಗ್ಗೆ ಪ್ರಶಂಸೆಯ ಮಾತುಗಳೇ ಕೇಳಿ ಬರುತ್ತಿವೆ. ಅಲ್ ಹಮ್ದುಲಿಲ್ಲಾಹ್.
ಈ ಎಲ್ಲ ಬೆಳವಣಿಗೆಯನ್ನು ಕಾಣುತ್ತಿರುವಾಗ, ನಮ್ಮ ಮಂಗಳೂರಿನ ಕೆಲವೊಂದು ಮಸೀದಿಗಳ ಆಡಳಿತ ಕಮಿಟಿಯವರು ಒಂದೆಡೆ ಸೇರಿದರು. ಕೊರೋನ ಸಂಕಷ್ಟ ಸಮಯದಲ್ಲಿ ನಾವೇನಾದರೂ ಮಾಡಬೇಕು ಎಂದು ಸಮಾಲೋಚಿಸಿದರು. ಅದಕ್ಕಾಗಿಯೇ *ಮಂಗಳೂರು ಮಸ್ಚಿದ್ಸ್ ಅಸೋಸಿಯೇಶನ್* ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು.
ಸೂಕ್ತ ಕಟ್ಟಡವೊಂದು ಸಿಕ್ಕಿದ್ದಲ್ಲಿ *ಕೊರೋನಾ ಕೇರ್ ಸೆಂಟರ್* ತೆರೆದು ಕೊರೋನಾ ರೋಗಿಗಳಿಗೆ ಶುಶ್ರೂಷೆ ಮಾಡಲು ಉದ್ದೇಶಿಸಲಾಗಿದೆ. ಈ ಬಗ್ಗೆ ಸರಕಾರದ ಅನುಮತಿ ಮತ್ತು ಸಹಕಾರಕ್ಕಾಗಿ ಜಿಲ್ಲಾ ಆರೋಗ್ಯ ಅಧಿಕಾರಿ ಗಳನ್ನು ಭೇಟಿ ಮಾಡಿ ವಿನಂತಿಸಲಾಗಿದೆ. ಸೂಕ್ತ ಕಟ್ಟಡಕ್ಕಾಗಿ ವಿವಿಧ ಸಂಸ್ಥೆಗಳನ್ನು ಸಂಪರ್ಕಿಸಲಾಗುತ್ತಿದೆ.
ಮಸೀದಿಗಳಲ್ಲಿ ಕೋವಿಡ್ ಲಸಿಕೆಗಳನ್ನು ಹಾಕುವ ಯೋಜನೆ ಹಾಕಲಾಗಿದೆ. ಇಷ್ಟರಲ್ಲೇ ಲಸಿಕೆ ವಿತರಣೆ ಕಾರ್ಯಕ್ರಮ ನಡೆಯುತ್ತಿದ್ದು ಲಸಿಕೆ ಪಡೆದುಕೊಂಡವರು ಕೂಡಲೇ ರಕ್ತದಾನ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಜಿಲ್ಲೆಯಲ್ಲಿ ರಕ್ತದ ಕೊರತೆಯಾಗುವ ಸಂಭವ ಇದೆ. ಈ ನಿಟ್ಟಿನಲ್ಲಿ ಲಾಕ್ ಡೌನ್ ಅವಧಿಯಲ್ಲಿ ಇಫ್ತಾರ್ ಬಳಿಕ ಮಸೀದಿಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಸದರಿ ಶಿಬಿರವನ್ನು ಆಯೋಜಿಸಲು ಹಾಗೂ ರಕ್ತದಾನಿಗಳಿಗೆ ಬರಲು ವಿಶೇಷ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಮಸೀದಿ ಅಂದರೆ ಅಲ್ಲಾಹನಿಗೆ ಇಬಾದತ್ ಮಾಡುವ ಕೇಂದ್ರ ಮಾತ್ರವಲ್ಲ. ಇಂತಹ ವಿಪತ್ತುಗಳು ಬಂದಾಗ ಪರಿಹಾರ ಕಾರ್ಯಗಳನ್ನು ನಡೆಸುವ ಒಂದು ಕೇಂದ್ರವಾಗಬಹುದು. ಮಸೀದಿ ಒಂದು ಸಹಾಯ ಕೇಂದ್ರ, ಸಾಂತ್ವನ ಕೇಂದ್ರ, ಮಾಹಿತಿ ಕೇಂದ್ರ, ಆರೋಗ್ಯ ಕೇಂದ್ರ ಹೀಗೆ ಸಮುದಾಯದ ಅಭಿವೃದ್ಧಿಯ ಕೇಂದ್ರ. ಅದನ್ನೇ ಇವತ್ತು ದೇಶದಲ್ಲಿ ವಿವಿಧ ಮಸೀದಿ, ಮದ್ರಸಗಳು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿವೆ.
ಆಲ್ ಇಂಡಿಯಾ ಮುಸ್ಲಿಮ್ ಡೆವಲಪ್ ಮೆಂಟ್ ಕೌನ್ಸಿಲ್-ಮಸ್ಜಿದ್ ಒನ್ ಮೂಮೆಂಟ್, ದಕ್ಷಿಣ ಕನ್ನಡ ಜಿಲ್ಲಾ ಚಾಪ್ಟರ್ ವತಿಯಿಂದ ಈ ಎಲ್ಲ ಕಾರ್ಯಕ್ರಮಗಳಿಗೆ ಬೇಕಾದ ಮಾರ್ಗದರ್ಶನವನ್ನು ನೀಡಲಾಗುತ್ತಿದೆ. ಮಸೀದಿಗಳು ಸೇರಿಕೊಂಡು ಮಾಡಲಿರುವ ಈ ಕಾರ್ಯಕ್ರಮಗಳ ಬಗ್ಗೆ ವ್ಯಾಪಕ ಪ್ರಶಂಸೆಗಳು ಕೇಳಿಬರುತ್ತಿವೆ. ಅನೇಕ ಮಸೀದಿಗಳ ಆಡಳಿತ ಸಮಿತಿಯವರು ಕರೆ ಮಾಡಿ ನಾವು ಕೂಡ ಈ ಯೋಜನೆಯಲ್ಲಿ ಸಹ ಭಾಗಿಗಳಾಗುತ್ತೇವೆ ಎಂದು ಪ್ರೀತಿಯಿಂದ ಒಪ್ಪಿಕೊಳ್ಳುತ್ತಿದ್ದಾರೆ. ಇದರಲ್ಲಿ ಸಹಭಾಗಿಗಳಾಗಲು ಎಲ್ಲರಿಗೂ ಅವಕಾಶವಿದೆ.
*ಹೌದು. ನಮ್ಮದು ಒಂದು ಉತ್ತಮ ಸಮುದಾಯ ಎಂದು ಅಲ್ಲಾಹನು ನಮ್ಮನ್ನು ಕುರ್ ಆನ್ ನಲ್ಲಿ ಪರಿಚಯಿಸಿದ್ದಾನೆ.* ಅಂತೆಯೇ ನಾವೆಲ್ಲರೂ ಜಗತ್ತಿಗೆ ಮಾದರಿಗಳಾಗೋಣ. ಸೇವೆಯ ಹರಿಕಾರರಾಗೋಣ. ಜಾತಿ ಮತ ಧರ್ಮ ಭೇದವಿಲ್ಲದೆ ಎಲ್ಲರಿಗೂ ನಮ್ಮ ಸೇವೆಯನ್ನು ವಿಸ್ತರಿಸೋಣ.
ಮಾರಕ ಕೊರೋನ ರೋಗ ಜಗತ್ತಿನಿಂದ ನಿರ್ಮೂಲನವಾಗಲಿ. ಶಾಂತಿ,ಪ್ರೀತಿ, ಸೇವೆ,ಐಕ್ಯತೆ, ಭ್ರಾತೃತ್ವ ಜಗತ್ತಿನಲ್ಲಿ ನೆಲೆಯಾಗಲಿ.
✒️ರಫೀಕ್ ಮಾಸ್ಟರ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.