ಶಿಡ್ಲಘಟ್ಟ,(ವಿಶ್ವಕನ್ನಡಿಗ ನ್ಯೂಸ್): ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಸರ್ಕಾರ ಜನತಾ ಕಫ್ರ್ಯೂ ಜಾರಿಗೊಳಿಸಿದೆ ಇದರ ಪರಿಣಾಮ ಪ್ರತಿನಿತ್ಯ ವ್ಯಾಪಾರ ಮಾಡಿ ಜೀವನ ನಡೆಸುವ ಬಡ ಕುಟುಂಬಗಳು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ ಕೂಲಿ ಕಾರ್ಮಿಕರು ಮತ್ತು ರೈತರು ಸಹ ಸಂಕಷ್ಟದಲ್ಲಿದ್ದು ಸರ್ಕಾರ ಕೂಡಲೇ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಬಡವರು-ಕೂಲಿ ಕಾರ್ಮಿಕರು ಮತ್ತು ರೈತರ ನೆರವಿಗೆ ಧಾವಿಸಬೇಕೆಂದು ಮಾಜಿ ಸಚಿವ ಹಾಗೂ ಹಿರಿಯ ಶಾಸಕ ವಿ.ಮುನಿಯಪ್ಪ ಸರ್ಕಾರವನ್ನು ಆಗ್ರಹಿಸಿದ್ದಾರೆ.
ತಾಲೂಕಿನ ಹಂಡಿಗನಾಳ ಗ್ರಾಮದಲ್ಲಿ ಕೊರೊನಾ ಸೋಂಕು ನಿಯಂತ್ರಿಸುವ ಸಲುವಾಗಿ ಕೊರೊನಾ ಕಾರ್ಯಪಡೆಯ ನೋಡಲ್ ಅಧಿಕಾರಿಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಕೊರೊನಾ ಎಂಬ ಮಹಾಮಾರಿಯಿಂದ ಇಡೀ ಜಗತ್ತು ತಲ್ಲಣಗೊಂಡಿದೆ ಸಕಾಲದಲ್ಲಿ ಚಿಕಿತ್ಸೆ ಲಭಿಸದೆ ಮತ್ತು ಆಮ್ಲಜನಕದ ಕೊರತೆಯಿಂದ ಹಲವರು ಪ್ರಾಣಗಳನ್ನು ಕಳೆದುಕೊಂಡಿದ್ದಾರೆ ಪರಿಸ್ಥಿತಿ ಭೀಕರವಾಗಿದ್ದು ನಾಗರಿಕರು ಗಂಭೀರತೆಯನ್ನು ಅರಿತು ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಶಿಡ್ಲಘಟ್ಟ ತಾಲೂಕಿನಲ್ಲಿ ಜನತಾ ಕಫ್ರ್ಯೂ ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕರು ಅನಗತ್ಯವಾಗಿ ಯಾರು ಸಹ ಮನೆಯಿಂದ ಹೊರ ಬರಬಾರದೆಂದ ಶಾಸಕರು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಆರಂಭಿಸಿರುವ ಕೊರೊನಾ ಕಾರ್ಯಪಡೆ ಸಕ್ರೀಯವಾಗಿ ಕಾರ್ಯನಿರ್ವಹಿಸಬೇಕು ಜೊತೆಗೆ ನೋಡಲ್ ಅಧಿಕಾರಿಗಳು ಸಹ ತಮ್ಮ ಜವಾಬ್ದಾರಿಗಳನ್ನು ಅರಿತು ಜನರಲ್ಲಿ ಕೋವಿಡ್-19 ಸೋಂಕಿನ ಪ್ರಭಾವದಿಂದ ಆಗುತ್ತಿರುವ ತೊಂದರೆಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಲು ಅರಿವು ಮತ್ತು ಜಾಗೃತಿ ಮೂಡಿಸಬೇಕು ಸೋಂಕು ನಿಯಂತ್ರಿಸಲು ನಿರ್ಲಕ್ಷ್ಯವಹಿಸುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ ಶಾಸಕರು ಮುಂದಿನ ಸಭೆಯಲ್ಲಿ ಸೋಂಕು ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸುತ್ತೇನೆ ಎಂದರು.
ಲಸಿಕಾ ಅಭಿಯಾನ ಯಶಸ್ವಿಗೊಳಿಸಿ: ಶಿಡ್ಲಘಟ್ಟ ನಗರಸಭೆಯ ವ್ಯಾಪ್ತಿಯಲ್ಲಿ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಜನರಲ್ಲಿ ವ್ಯಾಪಕವಾಗಿ ಅರಿವು ಮತ್ತು ಜಾಗೃತಿ ಮೂಡಿಸಿ 18 ವರ್ಷದಿಂದ 45 ವರ್ಷದೊಳಗಿನ ಎಲ್ಲರು ಲಸಿಕೆಯನ್ನು ಪಡೆದುಕೊಳ್ಳಲು ಮನವರಿಕೆ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದರು.
ಸಭೆಯಲ್ಲಿ ಶಿಡ್ಲಘಟ್ಟ ತಾಲೂಕು ಕೋವಿಡ್ ನೋಡಲ್ ಅಧಿಕಾರಿ ಮೊಹ್ಮದ್ ಅತೀಖ್ಉಲ್ಲಾ ಶರೀಫ್,ತಹಶೀಲ್ದಾರ್ ಬಿ.ಎಸ್.ರಾಜೀವ್,ತಾಪಂ ಇಓ ಚಂದ್ರಕಾಂತ್,ನಗರಸಭೆಯ ಪೌರಾಯುಕ್ತ ಶ್ರೀನಿವಾಸ್,ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ,ಗ್ರಾಮಾಂತರ ಪೋಲಿಸ್ ಠಾಣೆಯ ಪಿಎಸ್ಐ ಲಿಯಾಖತ್ತುಲ್ಲಾ,ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಸ್.ವಿ.ಮಂಜುನಾಥ್,ನಗರಸಭೆಯ ಸದಸ್ಯ ಕೃಷ್ಣಮೂರ್ತಿ,ಅನಿಲ್ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ವರದಿ: ತೇ.ಮೀಂ.ಅನ್ಸಾರಿ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.