ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ, ಇಲ್ಲಿನ ಒಕ್ಕೆತ್ತೂರು ಸೇತುವೆ ಬಳಿಯಿಂದ ಕೊಡಂಗೆ ಭಾಗಕ್ಕೆ ಸಾಗುವ ರಸ್ತೆಯು ತೀರಾ ಹದಗೆಟ್ಟಿದ್ದನ್ನು ಮನಗಂಡ, ಚೈತನ್ಯ ಫ್ರೆಂಡ್ಸ್ ಸರ್ಕಲ್ ಫೌಂಡೇಷನ್ ಮತ್ತು ಹೆಲ್ಪ್ ಲೈನ್ ಒಕ್ಕೆತ್ತೂರು ಇದರ ಸದಸ್ಯರನ್ನೊಳಗೊಂಡ ಯುವಕರ ತಂಡ ತಮ್ಮ ಸಾಮಾಜಿಕ ಸಂಘಟನೆಯ ವತಿಯಿಂದ ರಸ್ತೆ ದುರಸ್ತಿಗಾಗಿ ಶ್ರಮದಾನ ಕಾರ್ಯವನ್ನು ಕೈಗೆತ್ತಿಕೊಂಡಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.
ವಿಟ್ಲ ಪಟ್ಟಣದಿಂದ ಒಕ್ಕೆತ್ತೂರು ಮೂಲಕ ಕೊಡಂಗೆ ಪ್ರದೇಶಕ್ಕಿರುವ ಪ್ರಧಾನ ಸಂಪರ್ಕವಾಗಿರುವ ಪ್ರಸ್ತುತ ರಸ್ತೆಯ ಬಹುತೇಕ ಭಾಗವು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲೇ ಇದ್ದರೂ, ಪಟ್ಟಣ ಪಂಚಾಯತ್ ನಲ್ಲಿ ತೆರಿಗೆ ಪಾವತಿಸುವ ನೂರಾರು ಮನೆಗಳು ಇದೇ ವ್ಯಾಪ್ತಿಯಲ್ಲೇ ಇದ್ದಾಗ್ಯೂ ವಿಟ್ಲ ಪಟ್ಟಣ ಪಂಚಾಯತ್ ವತಿಯಿಂದ ತೀರಾ ನಿರ್ಲಕ್ಷಿಸಲ್ಪಟ್ಟ ರಸ್ತೆಯೆಂದೇ ಹೇಳಬಹುದಾದ ಇದರಲ್ಲಿನ ಡಾಮರು ಎಂದೋ ಮಾಯವಾಗಿ ಇದೀಗ ಸಂಚಾರ ಯೋಗ್ಯವಲ್ಲದ ಮಟ್ಟಕ್ಕಿಂತಲೂ ಕೆಳಗಿಳಿದಿದ್ದರೂ, ಯಾವುದೇ ಜನಪ್ರತಿನಿಧಿಗಳು ಇತ್ತ ತಿರುಗಿ ನೋಡದಿರುವುದು ಬಹಳ ವಿಷಾದನೀಯವೆಂದು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ದ. ಕ. ಜಿಲ್ಲಾ ಮಾಧ್ಯಮ ವಕ್ತಾರರಾದ ಅಬ್ದುಲ್ ಖಾದರ್ ಕುಕ್ಕಾಜೆಯವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಅದಲ್ಲದೆ ಈ ಮೊದಲಿನ ಪಂಚಾಯತ್ ಅಧ್ಯಕ್ಷೆಯಾಗಿದ್ದವರು ಇದೇ ವಾರ್ಡ್ ನಿಂದ ಚುನಾಯಿತರಾದವರಾಗಿದ್ದು, ಅವರ ಅಧಿಕಾರವಧಿಯಲ್ಲಿಯೇ ಇಲ್ಲಿನ ರಸ್ತೆ ಇಂದಿನ ಸ್ಥಿತಿಗೆ ತಲುಪಿದ್ದರೂ, ಇದಕ್ಕೆ ಕೂಡು ರಸ್ತೆಯಾಗಿರುವ ಮಾಜಿ ಅಧ್ಯಕ್ಷೆಯವರ ಮನೆಗೆ ಹೋಗುವ ಬೀದಿ ದಲಿತ ಕಾಲನಿಯೆಂಬ ನೆಲೆಯಲ್ಲಿ ಕಾಂಕ್ರೀಟ್ ರಸ್ತೆಯಾಗಿ ಬದಲಾದರೂ, ಒಕ್ಕೆತ್ತೂರು ಮತ್ತು ಕೊಡಂಗೆಯನ್ನು ಜೋಡಿಸುವ ಮುಖ್ಯ ರಸ್ತೆಯ ಕಾಯಕಲ್ಪವಾಗಿರಲಿಲ್ಲ. ಮಾತ್ರವಲ್ಲದೆ ಇಲ್ಲಿನ ನಾಗರಿಕರು ಪಂಚಾಯತ್ ಕಚೇರಿಯಲ್ಲಿ ಸತತವಾಗಿ ಮಾಡಿಕೊಂಡ ಮನವಿಯ ಹೊರತಾಗಿಯೂ ಸ್ಪಂದಿಸದಿರುವ ಪಟ್ಟಣ ಪಂಚಾಯತ್ ವೈಖರಿಯಿಂದ ಬೇಸತ್ತ ಇಲ್ಲಿನ ಕ್ರಿಯಾಶೀಲ ಯುವಕರ ತಂಡ ಇದೀಗ ತಾವಾಗಿಯೇ ದುರಸ್ತಿ ಕಾರ್ಯಕ್ಕೆ ಮುಂದಾಗಿ ಸದ್ಯ ಸಂಚಾರ ಯೋಗ್ಯ ಗೊಳಿಸಿರುವುದು ಶ್ಲಾಘನೀಯವೆಂದರಲ್ಲದೆ, ಇನ್ನಾದರೂ ಜನಪ್ರತಿನಿಧಿಗಳು ಇತ್ತ ಕ್ಷಿಪ್ರ ಗಮನಹರಿಸಿ ಇದರ ಡಾಮರೀಕರಣದ ಯೋಜನೆಯನ್ನು ಶೀಘ್ರದಲ್ಲೇ ಕೈಗೆತ್ತಿಗೊಳ್ಳಬೇಕಾಗಿದೆಯೆಂದು ವರು ಇದೇ ಸಂಧರ್ಭದಲ್ಲಿ ಹೇಳಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.