ಕೋಲಾರ (www.vknews.com): ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಕೋವಿಡ್ -19 ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕೋವಿಡ್ -19 ಮುಂಜಾಗ್ರತಾ ಕ್ರಮಗಳ ವ್ಯವಸ್ಥೆಗಾಗಿ 15 ಜನ ಸ್ವಯಂ ಸೇವಕರನ್ನು ಒದಗಿಸುವುದಾಗಿ ತಿಳಿಸಿದರು. ಮಾರುಕಟ್ಟೆ ಪ್ರಾಂಗಣದ ಸ್ಥಳಾವಕಾಶದ ಕೊರತೆಯನ್ನು 15 ದಿನಗಳ ಒಳಗೆ ಸಂಸತ್ ಸದಸ್ಯರು ಹಾಗೂ ಶಾಸಕರೊಂದಿಗೆ ಅಧಿಕಾರಿಗಳ ಸಭೆ ಕರೆದು ಕ್ರಮಕೈಗೊಳ್ಳುವುದಾಗಿ ಎಂದು ಅರಣ್ಯ , ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಅರವಿಂದ ಲಿಂಬಾವಳಿ ಅವರು ತಿಳಿಸಿದರು.
ಇಂದು ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಭೇಟಿ ನೀಡಿ ಪರಿಶೀಲನೆ ಮತ್ತು ಕೋವಿಡ್ ಲಸಿಕೆ ನೀಡುತ್ತಿರುವುದನ್ನು ಪರಿಶೀಲನೆ ನಡೆಸಿ ಅವರು ಮಾತನಾಡಿದರು . ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ ಅವರು ಮಾತನಾಡಿ , ಹಮಾಲರಿಗೆ ಕೈಗವಸುಗಳನ್ನು ದಲ್ಲಾಲಿ ಮಂಡಿಯವರು ನೀಡಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷರು ಕೋವಿಡ್ -19 ಮುಂಜಾಗ್ರತಾ ಕ್ರಮಗಳ ಬಗ್ಗೆ ಈಗಾಗಲೇ ಪ್ರಾಂಗಣದಲ್ಲಿ ಮೈಕ್ ಮೂಲಕ ಪ್ರಚಾರ ಪಡಿಸಲಾಗುತ್ತಿದೆ , ಮೆಗಾ ಫೋನ್ ಮೂಲಕ ವಹಿವಾಟು ನಡೆಯುವ ಸ್ಥಳಗಳಲ್ಲಿ ಅರಿವು ಮೂಡಿಸಲಾಗುತ್ತಿದೆ , ಬ್ಯಾನರ್ಗಳನ್ನು ಅಳವಡಿಸಲಾಗಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುತ್ತಿದ್ದಾರೆಂದು ತಿಳಿಸಿದರು. ಉತ್ಪನ್ನಗಳ ಲೋಡಿಂಗ್ ಮತ್ತು ಅನ್ಲೋಡಿಂಗ್ ಸಮಯದಲ್ಲಿ ಹಮಾಲರು ಒಬ್ಬರಿಗೊಬ್ಬರ ಸಹಕಾರದಿಂದ ಕ್ರೇಟುಗಳನ್ನು ಲೋಡಿಂಗ್ ಮತ್ತು ಅನ್ಲೋಡಿಂಗ್ ಮಾಡಬೇಕಾಗಿರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಷ್ಟಕರವಾಗಿರುತ್ತದೆ, ಆದಾಗ್ಯೂ ಈ ಬಗ್ಗೆ ತಿಳುವಳಿಕೆ ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ಮಾರುಕಟ್ಟೆ ಪ್ರಾಂಗಣದಲ್ಲಿ ಸ್ಥಳಾವಕಾಶದ ಕೊರತೆ ಇದ್ದು ಮಡೇರಹಳ್ಳಿ ಬಳಿ ಅರಣ್ಯ ಇಲಾಖೆಗೆ ಸೇರಿದ 35 ಎಕರೆ ಜಮೀನನ್ನು ಮಂಜೂರಾತಿ ಪಡೆಯಲು ಸಮಿತಿಯು ಕ್ರಮಕೈಗೊಂಡಿದ್ದು ಇದಕ್ಕೆ ಅರಣ್ಯ ಸಚಿವರಾದ ತಾವು ಆದಷ್ಟೂ ಶೀಘ್ರವಾಗಿ ಮಂಜೂರಾತಿ ದೊರಕಿಸಿಕೊಡಬೇಕಾಗಿ ಸಚಿವರನ್ನು ಕೋರಿದರು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ ಬೆಂಗಳೂರು ಇವರಿಗೆ ಪ್ರಾಂಗಣದಲ್ಲಿ ಸಮಿತಿಯಿಂದ ಹಂಚಿಕೆಯಾಗಿರುವ 04 ಎಕರೆ ಜಮೀನಿನ ಪೈಕಿ ಉಪಯೋಗವಾಗದೆ ಉಳಿದಿರುವ 02 ಎಕರೆ ಜಮೀನನ್ನು ಸಮಿತಿಯ ವಶಕ್ಕೆ ಪಡೆಯಲು ಸದರಿಯವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುತ್ತಾರೆ . ಪ್ರಕರಣವನ್ನು ನ್ಯಾಯಾಲಯದಿಂದ ಹೊರಗೆ ಬಗೆಹರಿಸಿಕೊಳ್ಳಲು ಸಮಿತಿ ಸಭೆಯಲ್ಲಿ ನಿರ್ಣಯಿಸಿ ಎಕರೆಗೆ 1 ಕೋಟಿ ರೂಪಾಯಿಗಳಂತೆ 03 ಎಕರೆ ಖರೀದಿಸಲು ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದ್ದು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಮಂಜೂರಾತಿ ದೊರಕಿಸಿಕೊಟ್ಟಲ್ಲಿ ತರಕಾರಿಗಳ ವ್ಯಾಪಾರ ವಹಿವಾಟಿಗೆ ಅನುಕೂಲವಾಗುವಂತೆ ಸಮಿತಿಯಿಂದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವುದಾಗಿ ಅಧ್ಯಕ್ಷರು ಕೋರಿದರು.
ಕೋಲಾರ ಶಾಸಕರಾದ ಕೆ.ಶ್ರೀನಿವಾಸಗೌಡ ನ್ಯಾಯಾಲಯದಲ್ಲಿರುವ ಕೇಸನ್ನು ಹಿಂಪಡೆಯುವಂತೆ ಮಾರ್ಕೆಟಿಂಗ್ ಫೆಡರೇಶನ್ ಸಭೆಯಲ್ಲಿ ಚರ್ಚಿಸಿ ಪ್ರಕರಣವನ್ನು ಹಿಂತೆಗೆಸುವುದಾಗಿ ತಿಳಿಸಿದರು . ಮಾನ್ಯ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸಮಿತಿಯ ಕಛೇರಿಯಲ್ಲಿ ವರ್ತಕರು, ದಲ್ಲಾಲರು ಹಾಗೂ ಹಮಾಲರಿಗೆ ಕೋವಿಡ್ ಲಸಿಕೆ ಹಾಕಿಸಲಾಗುತ್ತಿರುವುದನ್ನು ಸಚಿವರು ಪರಿಶೀಲಿಸಿದರು. ಲಸಿಕೆ ಪಡೆಯುವಂತೆ ವರ್ತಕರು , ದಲ್ಲಾಲರು ಹಾಗೂ ಹಮಾಲರಿಗೆ ತಿಳಿಸಲಾಗಿದ್ದರೂ ಕೇವಲ 74 ಜನ ಮಾತ್ರ ಲಸಿಕೆಯನ್ನು ಪಡೆದಿರುತ್ತಾರೆ. ಉಳಿದಂತಹವರು ಕಛೇರಿಯಲ್ಲಿ ನೊಂದಾಯಿಸಿಕೊಳ್ಳಬೇಕಾಗಿ ಹಾಗೂ ಅಂತಹವರಿಗೆ ಕೂಡಲೇ ಲಸಿಕೆ ವ್ಯವಸ್ಥೆಯನ್ನು ಜಿಲ್ಲಾಡಳಿತ ಮೂಲಕ ವ್ಯವಸ್ಥೆ ಮಾಡಲಾಗುತ್ತದೆ, ಉದಾಸೀನ ಮಾಡದೆ ಎಲ್ಲರೂ ತಪ್ಪದೆ ಲಸಿಕೆ ಹಾಕಿಸಿಕೊಳ್ಳಬೇಕೆಂದು ಸಮಿತಿ ಅಧ್ಯಕ್ಷರು ಕೋರಿದ್ದಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಎನ್.ಎಂ.ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಕಾರ್ತಿಕ್ ರೆಡ್ಡಿ , ಉಪವಿಭಾಗಾಧಿಕಾರಿಗಳಾದ ಸೋಮಶೇಖರ್ , ತಹಶೀಲ್ದಾರರಾದ ಶೋಭಿತಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.