ಕೋಲಾರ (www.vknews.com):- ಜಾಗತಿಕ ಮಟ್ಟದಲ್ಲಿ ಗಣಿಗಾರಿಕೆ ಸಮೀಕ್ಷೆ ಮಾಡಿಸಿ ಟೆಲ್ಲಿಂಗ್ ಡಾಮ್ ಮತ್ತು ಹೊಸ ಗಣಿಗಾರಿಕೆ ವರದಿ ಬಂದ ನಂತರ ಅದರ ಆಧಾರದ ಮೇಲೆ ಕೇಂದ್ರ ಸಚಿವರೊಂದಿಗೆ ಚರ್ಚಿಸಿ ಬಿ.ಜಿ.ಎಂ.ಎಲ್.ನಲ್ಲಿ ಚಿನ್ನದ ಗಣಿಗಾರಿಕೆಯನ್ನು ಪುನರ್ ಆರಂಭಿಸಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನದ ಸಚಿವರಾದ ಮುರುಗೇಶ್ ಆರ್ . ನಿರಾಣಿ ಅವರು ತಿಳಿಸಿದರು. ಇಂದು ಕೆ.ಜಿ.ಎಫ್ನ ಭಾರತ್ ಗೋಲ್ಡ್ ಮೈನ್ಸ್ಗೆ ಭೇಟಿ ಕೊಟ್ಟು ಅಲ್ಲಿನ ಕಾರ್ಯ ಚಟುವಟಿಕೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು . ಭಾರತ ದೇಶದಲ್ಲಿ ಬಂಗಾರ ಸಿಗುವ ಏಕೈಕ ರಾಜ್ಯ ಕರ್ನಾಟಕ. ಅದರಲ್ಲಿ ಕೆ.ಜಿ.ಎಫ್.ನ ಬಿ.ಜಿ.ಎಂ.ಎಲ್ , ಕೊಡುಗೆ ಸಹ ಇದೆ 12800 ಎಕರೆ ಜಾಗ ಬಿ.ಜಿ.ಎಂ.ಎಲ್ ವ್ಯಾಪ್ತಿಯಲ್ಲಿದ್ದು , ಹತ್ತು ಸಾವಿರ ಎಕರೆ ಜಾಗದ ದಾಖಲೆಗಳನ್ನು ಜಿಲ್ಲಾಧಿಕಾರಿಗಳು ಸರಿಪಡಿಸಿದ್ದಾರೆ. ಉಳಿದ 2000 ಎಕರೆ ಜಾಗವನ್ನು 2-3 , ತಿಂಗಳಲ್ಲಿ ಸರಿಪಡಿಸಲಾಗುವುದು ಎಂದು ತಿಳಿಸಿದರು. ಡಾಮ್ ಕೆಜಿಎಫ್ ಗೋಲ್ಡ್ ಮೈನ್ 20 ವರ್ಷಗಳಿಂದ ಸ್ಥಗಿತಗೊಂಡಿದ್ದು , ಕಳೆದ 100 ವರ್ಷಗಳಲ್ಲಿ ಸುಮಾರು 800 ಟನ್ ಚಿನ್ನ ಉತ್ಪಾದನೆಯಾಗಿತ್ತು . ಚಿನ್ನ ತೆಗೆದ ನಂತರ ತ್ಯಾಜ್ಯ ಉತ್ಪನ್ನವಾದ ಟೆಲ್ಲಿಂಗ್ 32 ಮಿಲಿಯನ್ ಟನ್ ಇದ್ದು , ಅದರಲ್ಲಿ 24 ಟನ್ ಬಂಗಾರ ಸಿಗಬಹುದು ಎಂದು ಅಂದಾಜಿಸಲಾಗುತ್ತಿದೆ . ಇದರ ಜೊತೆಗೆ ಬೇರೆ ಬೇರೆ ನಿಕ್ಷೇಪಗಳು ಸಹ ದೊರೆಯುತ್ತದೆ ಎಂದು ಅವರು ತಿಳಿಸಿದರು .ಜಗತ್ತಿನಲ್ಲಿ ಅತಿ ಹೆಚ್ಚು 3 1/2 ಕಿ.ಮೀ ಆಳವಾದ ಚಿನ್ನದ ಗಣಿ ಇದಾಗಿದೆ . ಕರ್ನಾಟಕದ ಆರ್ಥಿಕ ಜೀವನಾಡಿ ಆಗಿತ್ತು . ಇದು ಸ್ಥಗಿತಗೊಂಡಿದ್ದರಿಂದ ಈ ಭಾಗದ ಜನರು 20 ವರ್ಷಗಳಿಂದ ಹೆಚ್ಚು ನಿರುದ್ಯೋಗ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ .
ಬಿ.ಜಿ.ಎಂ.ಎಲ್.ನಲ್ಲಿ ಕೆಲಸ ಮಾಡುತ್ತಿದ್ದ ನೌಕರರಿಗೆ ಕೊಡಬೇಕಾದ ಬಾಕಿ ಮೊತ್ತವನ್ನು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಕೇಂದ್ರ ಸಚಿವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು . ಇಲ್ಲಿನ ಪರಿಸರದಲ್ಲಿ ಸೈನೈಡ್ ಅಂಶ ಇರುವುದರಿಂದ ನೌಕರರ ಆರೋಗ್ಯದಲ್ಲಿ ತುಂಬಾ ತೊಂದರೆ ಆಗುತ್ತಿತ್ತು . ರಾಸಾಯನಿಕ ವರದಿ ಬಂದ ತಕ್ಷಣ ಎಲ್ಲಾ ಸಮಸ್ಯೆಗಳನ್ನು ಸಾಧ್ಯವಾದಷ್ಟು ಬೇಗ ಬಗೆಹರಿಸಲಾಗುವುದು. ಒಂದು ವೇಳೆ ವರದಿ ಬರದಿದ್ದರೆ ಇಲ್ಲಿನ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಬೇರೆ ಕಂಪನಿಗಳನ್ನು ಸ್ಥಾಪಿಸಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು . ಮುಂದುವರೆದ ದೇಶಗಳು ಸೇರಿದಂತೆ ಜಾಗತಿಕವಾಗಿ ಎಲ್ಲಾ ದೇಶಗಳು ಕರೋನಾದಿಂದ ಸಂಕಷ್ಟವನ್ನು ಎದುರಿಸುತ್ತಿವೆ. ಕರೋನಾ ಕಡಿಮೆಯಾಗುತ್ತಿದೆ ಎನ್ನುವಷ್ಟರಲ್ಲಿ ಈಗ ಎರಡನೇ ಅತಿ ಪ್ರಾರಂಭವಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಸಾರ್ವಜನಿಕರ ಸಹಕಾರದಿಂದ ಕರೋನಾ ನಿಯಂತ್ರಣಕ್ಕೆ ಬರುತ್ತಿದೆ .
ರಾಜ್ಯದಲ್ಲಿ ಲಸಿಕೆ , ಆಕ್ಸಿಜನ್ , ಬೆಡ್ಗಳ ಕೊರತೆ ಇಲ್ಲದೆ ಸೋಂಕಿತರಿಗೆ ಉತ್ತಮವಾದ ಚಿಕಿತ್ಸೆ ನೀಡಲಾಗುತ್ತಿದೆ . ದೇಶದಲ್ಲಿ ಬ್ಲಾಕ್ ಫಂಗಸ್ಗೆ ಸಂಬಂಧಿಸಿದ ಔಷಧಿಗಳನ್ನು ಉತ್ಪಾದಿಸಲು 20 ಕಂಪನಿಗಳಿಗೆ ಅನುಮತಿ ಕೊಟ್ಟಿದ್ದು , ಕರ್ನಾಟಕದಲ್ಲಿ 2 ಕಂಪನಿಗಳಿಗೆ ಅನುಮತಿಯನ್ನು ನೀಡಲಾಗಿದೆ ಎಂದು ತಿಳಿಸಿದರು .
ಈ ಸಂಧರ್ಭದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಎಸ್.ಮುನಿಸ್ವಾಮಿ , ಕೆ.ಜಿ.ಎಫ್ . ಶಾಸಕರಾದ ರೂಪಕಲಾ ಶಶಿಧರ್ , ಜಿಲ್ಲಾ ಪಂಚಾಯತ್ ಸದಸ್ಯರಾದ ಮಹೇಶ್ , ಜಿಲ್ಲಾಧಿಕಾರಿಗಳಾದ ಡಾ | ಆರ್ . ಸೆಲ್ವಮಣಿ , ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಇಲಕ್ಕಿಯಾ ಕರುಣಾಕರನ್ , ಬಿ.ಜೆ.ಎಂ.ಎಲ್ . ಮ್ಯಾನೇಜಿಂಗ್ ಡೈರೆಕ್ಟರ್ ಡಾ || ರಂಜಿತ್ ರಾಥ್ , ಉಪವಿಭಾಗಾಧಿಕಾರಿ ಸೋಮಶೇಖರ್ , ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.