ಕೋಲಾರ(www.vknews.com):– ಜಿಲ್ಲೆಯ ಕರೋನಾ ಸೋಂಕಿತರಿಗೆ ನೆರವಾಗಲು 14 ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ಎಲ್ಲಾ ತಾಲ್ಲೂಕು ಆಸ್ಪತ್ರೆ ಹಾಗೂ ಎಸ್.ಎನ್.ಆರ್ . ಆಸ್ಪತ್ರೆಗೆ ಅವಶ್ಯಕತೆ ಮೇರೆಗೆ ನೀಡಲಾಗುವುದು ಹಾಗೂ 5000 ಮೆಡಿಕಲ್ ಕಿಟ್ಗಳನ್ನು ನೀಡಿರುವುದರಿಂದ ಕರೋನಾ ಸೋಂಕಿತರಿಗೆ ತುಂಬಾ ಅನುಕೂಲವಾಗುತ್ತದೆ. ಎಲ್ಲರೂ ಒಟ್ಟಾಗಿ ಸೇರಿ ಕರೋನಾ ನಿಯಂತ್ರಿಸುವುದಕ್ಕೆ ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ಕೋಲಾರ ವಿಧಾನ ಪರಿಷತ್ ಶಾಸಕರಾದ ಡಾ//ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಆಕ್ಸಿಜನ್ ಕಾನ್ಸೆಂಟೇಟರ್ ಹಾಗೂ ವೈದ್ಯಕೀಯ ಕಿಟ್ಗಳನ್ನು ಜಿಲ್ಲಾಡಳಿತಕ್ಕೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ವಿಧಾನಪರಿಷತ್ ಶಾಸಕರ ನಿಧಿಯಿಂದ 50 ಲಕ್ಷ ಅನುದಾನದಿಂದ ಜಿಲ್ಲೆಯಲ್ಲಿ ಕರೋನಾ ಸೋಂಕಿತರಿಗೆ ನೆರವಾಗಲು ಖರೀದಿಸಿದ 14 ಆಕ್ಸಿಜನ್ ಕಾನ್ಸೆಂಟೇಟರ್ ಮತ್ತು 5000 ಮೆಡಿಕಲ್ ಕಿಟ್ಗಳನ್ನು ಜಿಲಾಧಿಕಾರಿಗಳಿಗೆ ನೀಡಿದರು.
ಶ್ರೀನಿವಾಸಪುರ ಆಸ್ಪತ್ರೆಗೆ 1 ಸುಸಜ್ಜಿತ ಆಕ್ಸಿಜನ್ ವೆಂಟಿಲೇಟರ್ ಸೌಲಭ್ಯವುಳ್ಳ ಉತ್ತಮ ಆಂಬುಲೆನ್ಸ್ ಖರೀದಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಬೆಂಗಳೂರು ನಂತರ ಕೋಲಾರ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕರೋನಾ ಪಡೆದುಕೊಳ್ಳುತ್ತಿದ್ದಾರೆ . ಲಸಿಕೆ ಮಾತ್ರ ಕರೋನಾ ನಿಯಂತ್ರಿಸುತ್ತದೆ ಎಂಬುದು ಎಲ್ಲರಿಗೂ ಈಗ ತಿಳಿದುಬಂದಿದೆ ಎಂದು ಅವರು ಹೇಳಿದರು. ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 5 ಲಕ್ಷ ಜನ ಲಸಿಕೆ ಪಡೆದಿದ್ದಾರೆ . ಉಳಿದ 7 ಲಕ್ಷ ಜನರಿಗೆ ಒಂದು ತಿಂಗಳ ಒಳಗಡೆ ಲಸಿಕೆಯನ್ನು ನೀಡುವುದಕ್ಕೆ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಅವರು ತಿಳಿಸಿದರು. ಶಿಕ್ಷಣ ಸಂಸ್ಥೆಗಳ ಸಹಕಾರದೊಂದಿಗೆ ಶೇ .100 ರಷ್ಟು ಲಸಿಕೆ ನೀಡುವ ಕಾರ್ಯವನ್ನು ಮುಗಿಸೋಣ ಎಂದು ಹೇಳಿದರು. ಇನ್ನು ಏನಾದರೂ ಅವಶ್ಯಕತೆ ಇದ್ದರೆ ಉಳಿದ 50 ಲಕ್ಷ ಹಣವನ್ನು ವೈದ್ಯಕೀಯ ಸೇವೆಗೆ ಬಳಸಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು. ಜಿಲ್ಲಾಧಿಕಾರಿಗಳಾದ ಡಾ || ಆರ್.ಸೆಲ್ವಮಣಿ ಅವರು ಮಾತನಾಡಿ , 14 ಆಕ್ಸಿಜನ್ ಕಾನ್ಸಂಟ್ರೇಟರ್ , 5000 ಮೆಡಿಕಲ್ ಕಿಟ್ ಮತ್ತು ಆಂಬುಲೆನ್ಸ್ನಿಂದ ಜಿಲ್ಲೆಗೆ ತುಂಬಾ ಅನುಕೂಲವಾಗುತ್ತದೆ ಎಂದು ತಿಳಿಸಿದರು . ಶಿಕ್ಷಣ ಸಂಸ್ಥೆಗಳ ಸಹಯೋಗದಿಂದ ಈ ತಿಂಗಳಲ್ಲಿ 5-6 ಲಕ್ಷ ಜನರಿಗೆ ಲಸಿಕೆ ನೀಡುವ ಕಾರ್ಯ ಮುಗಿಸುತ್ತೇವೆ . ಉತ್ತಮ ರೀತಿಯಲ್ಲಿ ಕರೋನಾ ನಿಯಂತ್ರಿಸಲು ಎಲ್ಲರೂ ಸಹಕರಿಸಿದ್ದಾರೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ವೆಂಕಟಮುನಿಯಪ್ಪ , ಕೆಜಿಎಫ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಸಂಪಂಗಿ , ಪದವಿಪೂರ್ವ ಶಿಕ್ಷಣ ಇಲಾಖೆ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ನಟರಾಜ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.