ಜೊತೆಜೊತೆಯಾಗಿ ಸಾಗುವ ಬುನಾದಿ ಗಟ್ಟಿಯಾಗಬೇಕು
ಐದು ವರ್ಷಗಳ ಹಿಂದೆ ಕರೊನಾದ ಬಗ್ಗೆ ಯಾರಿಗೂ ಏನೂ ಗೊತ್ತಿರಲಿಲ್ಲ. ಮುಂದಿನ ಐದು ವರ್ಷಗಳ ನಂತರ ಪ್ರಪಂಚ ಇನ್ನೂ ಯಾವ ದಿಕ್ಕುಗಳಲ್ಲಿ ಸಾಗುತ್ತದೋ ಗೊತ್ತಿಲ್ಲ. ಸಮಯಕ್ಕೆ ತಕ್ಕಂತೆ ಮಾನವ ಪರಿಸ್ಥಿತಿಗೆ ಹೊಂದಿಕೊಂಡು ಹೋಗುವುದನ್ನು ಕಲಿತುಕೊಳ್ಳುತ್ತಿದ್ದಾನೆ.
ಉದಾಹರಣೆಗೆ ಆನ್ಲೈನ್ ಕ್ಲಾಸ್ ಸಾಮಾನ್ಯ ಜನರ ಮಕ್ಕಳಿಗೆ ಹೊಸ ಅನುಭವ. 15 ತಿಂಗಳು ನೋಡುತ್ತಾ ನೋಡುತ್ತಾ ಹಾಗೆಯೇ ಕಳೆದುಹೋಯಿತು. ನನ್ನ ಮಗಳಿಗೆ ಪ್ರಶ್ನಿಸಿದೆ – ನಿನಗೆ ಶಾಲೆಗೆ ಹೋಗುವುದು ಇಷ್ಟವೋ ಅಥವಾ ಆನ್ಲೈನ್ ಕ್ಲಾಸ್ ಇಷ್ಟವೋ? ಅವಳ ಉತ್ತರ – ನನಗೆ ಶಾಲೆಯೇ ಇಷ್ಟ. ಮನೆಯಲ್ಲಿ ನೆಟ್ವರ್ಕ್ ಸಮಸ್ಯೆ. ನಮ್ಮ ಟೀಚರ್ ಮುಂದಿದ್ದರೆ ಕಲಿಯುವ ಪಾಠವನ್ನು ಚೆನ್ನಾಗಿ ಅರ್ಥೈಸಿಕೊಳ್ಳಬಹುದು, ಶಾಲೆಯಲ್ಲಿ ಸಹಪಾಠಿಗಳ ಜೊತೆ ಮಾತನಾಡಬಹುದು, ಕ್ಯಾಂಟೀನಿಗೆ ಹೋಗಬಹುದು, ಈಜುಕೊಳಕ್ಕೆ ಜಿಗಿಯಬಹುದು, ಯೋಗ ಮಾಡಬಹುದು, ವಿವಿಧ ಆಟಗಳನ್ನು ಆಡಬಹುದು, ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬಹುದು, ಸ್ನೇಹಿತರ ಜೊತೆಯಲ್ಲಿ ಕುಳಿತು ಊಟ ಮಾಡಬಹುದು, ವಾರ್ಷಿಕ ಸಮಾರಂಭಗಳಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ನನಗೆ ಅವಳ ಉತ್ತರ ನಿಜ ಅನಿಸಿತು. ಏಕೆಂದರೆ ಮನೆಯಲ್ಲಿ ಅವಳು ಹೇಗೆ ಕಾಲ ಕಳೆಯುತ್ತಿದ್ದಾಳೆ ಎಂಬುವುದು ನನಗೆ ಗೊತ್ತು. ಪ್ರತಿ ದಿನ ವೀಕ್ಷಿಸುತ್ತಿದ್ದೇನೆ. ಕ್ಲಾಸಿನಲ್ಲಿ ಅವಳಿಗೆ ಅಷ್ಟೊಂದು ಅಭಿರುಚಿ ಇಲ್ಲ. ಏನೋ ಕಾಟಾಚಾರಕ್ಕೆ ಲ್ಯಾಪ್ಟಾಪ್ ಮುಂದೆ ಕುಳಿತಿರುತ್ತಾಳೆ. ಕ್ಲಾಸ್ ನಡೆಯುತ್ತಿದ್ದರೂ ಅವಳ ಧ್ಯಾನ ಎಲ್ಲೋ ಇರುತ್ತದೆ. ಟಿವಿ ಮತ್ತು ಮೊಬೈಲ್ ಗೇಮ್ ಗಳಿಗೆ ಮಕ್ಕಳು ಗುಲಾಮರಾಗಿ ಹೋಗಿದ್ದಾರೆ. ಹಳ್ಳಿ ಮಕ್ಕಳಿಗಾದರೂ ಅಂಗಳಗಳಲ್ಲಿ, ತೋಟಗಳಲ್ಲಿ ಮತ್ತು ಬೀದಿಗಳಲ್ಲಿ ಆಟವಾಡುವ ಮುಕ್ತ ವಾತಾವರಣ ಉಂಟು. ಆದರೆ ಪಟ್ಟಣದ ಮಕ್ಕಳಿಗೆ ನಾಲ್ಕು ಗೋಡೆಗಳ ಮನೆಯೇ ಎಲ್ಲ. ಉಸಿರುಗಟ್ಟಿದ ವಾತಾವರಣ. ಹಿರಿಯರೇ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಚಿಟ್ಟೆಯಂತೆ ಹಾರಾಡುವ ಮಕ್ಕಳ ಮಾನಸಿಕ ಪರಿಸ್ಥಿತಿ ಏನಾಗಬಹುದು. ಮನೆಯಿಂದ ಆಚೆ ಹೋದರೆ ಕಾಯಿಲೆ ಅಂಟಿಕೊಳ್ಳುವ ಭಯ. ಮನೆಯಲ್ಲಿದ್ದರೆ ಬೇಜಾರು. ಹಾಗಾದರೆ ಈ ಪರಿಸ್ಥಿತಿಯಿಂದ ಹೊರಬರುವುದು ಹೇಗೆ? ಶಾಲಾ ಮಂಡಳಿಗಳು ಮಕ್ಕಳ ಮನೋಬಲ ಮತ್ತು ಮಾನಸಿಕ ಸಮತೋಲನ ಕಾಪಾಡಲು ಮನೋವೈದ್ಯರ ಜೊತೆ ಚರ್ಚಿಸಿ ಹೊಸ ಹೊಸ ಕಾರ್ಯಕ್ರಮಗಳನ್ನು ಆನ್ಲೈನ್ ಮೂಲಕ ಮಕ್ಕಳ ಮನಮುಟ್ಟುವಂತೆ ಆಕರ್ಷಕವಾಗಿ ಸೃಷ್ಟಿಸಿ ತಲುಪಿಸಬೇಕು. ಪೋಷಕರು ಮಕ್ಕಳೊಂದಿಗೆ ಯಾವ ರೀತಿ ವರ್ತಿಸಬೇಕು ಎಂದು ಮಾನಸಿಕ ದೃಷ್ಟಿಕೋನದಿಂದ ಹೇಳಿಕೊಡಬೇಕು. ಆನ್ಲೈನ್ ಕ್ಲಾಸುಗಳು ಆಕರ್ಷಕ ಕೇಂದ್ರಬಿಂದುಗಳಾಗಿ ಮಾರ್ಪಾಡಾಗಬೇಕು. ಪೋಷಕರಲ್ಲಿ ಮತ್ತು ಶಿಕ್ಷಕರಲ್ಲಿ ಮುಂದಿನ ಭವಿಷ್ಯದೊಂದಿಗೆ ಜೊತೆಜೊತೆಯಾಗಿ ಸಾಗುವ ಬುನಾದಿ ಗಟ್ಟಿಯಾಗಬೇಕು. ಹೊಸ ಪ್ರಯತ್ನಗಳನ್ನು ಮಾಡುವುದರಲ್ಲಿ ತಪ್ಪೇನಿದೆ. ಆಸ್ಪತ್ರೆಗಳು ಮನೆಯಗಳಲ್ಲಿ ಐಸಿಯು ವಾರ್ಡ್ಗಳನ್ನು ಸೃಷ್ಟಿ ಮಾಡಲಿಲ್ಲವೇ? ಆನ್ಲೈನ್ ಕನ್ಸಲ್ಟೇಶನ್, ಆನ್ಲೈನ್ ಶಾಪಿಂಗ್, ಆನ್ಲೈನ್ ಕ್ಲಿನಿಕ್, ಆನ್ಲೈನ್ ಕ್ಲಾಸ್,ಆನ್ಲೈನ್ ಮನಿ ಟ್ರಾನ್ಸ್ಫರ್, ಆನ್ಲೈನ್ ಹೆಲ್ತ್ ಕ್ಲೈಮ್ ಇತ್ಯಾದಿ. ಈಗ ಎಲ್ಲಾ ಸಾಮಾನ್ಯ ಅನಿಸುತ್ತಿದೆ. ಮುಂದಿನ ಪೀಳಿಗೆಗೆ ಇನ್ನೂ ಅದೆಷ್ಟು ಸಿಹಿ-ಕಹಿ ದಿನಗಳು ಕಾದಿವೆಯೋ…! ನಾವು ಬದುಕುಳಿದರೆ ಕಾದು ನೋಡೋಣ.
ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.