ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ): – ಪರೀಕ್ಷಾ ಕೇಂದ್ರದಲ್ಲಿ ಮಕ್ಕಳ ಸುರಕ್ಷತೆ ಅತಿ ಮುಖ್ಯವಾಗಿದೆ , ಸ್ವಚ್ಚತೆ ಹಾಗೂ ಸ್ಯಾನಿಟೈಸ್ ಮಾಡಲು ಗ್ರಾಮ ಪಂಚಾಯಿತಿ , ನಗರಸಭೆ ಸಹಕಾರ ಪಡೆಯಿರಿ ಎಂದು ರಾಜ್ಯ ಶಿಕ್ಷಣ ಸಂಶೋಧನಾ , ತರಬೇತಿ ಸಂಸ್ಥೆ ಜಂಟಿ ನಿರ್ದೇಶಕಿ ಹಾಗೂ ಕೋಲಾರ ಜಿಲ್ಲಾ ನೋಡಲ್ ಅಧಿಕಾರಿ ಗಾಲಯುತ್ತಿದೇವಿ ಸೂಚನೆ ನೀಡಿದರು.
ಜು .೧೯ ಹಾಗೂ ೨೨ ರಂದು ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ಹಿನ್ನಲೆಯಲ್ಲಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಕೈಗೊಂಡಿರುವ ಸಿದ್ದತೆಗಳ ಪರಿಶೀಲನೆ ನಡೆಸಿದ ಅವರು , ತಾಲ್ಲೂಕಿನ ಬೆಗ್ಲಿಹೊಸಹಳ್ಳಿ ಕೇಂದ್ರದಲ್ಲಿ ಮಾತನಾಡುತಿದ್ದರು. ಪರೀಕ್ಷೆ ನಡೆಯುವ ಎರಡೂ ದಿನವೂ ಶಾಲಾ ಕೊಠಡಿ , ಆವರಣ ಸ್ಯಾನಿಟೈಸ್ ಆಗಬೇಕು , ಅದಕ್ಕೆ ಗ್ರಾಮ ಪಂಚಾಯಿತಿ ಅಥವಾ ನಗರಸಭೆಗಳ ಸಹಕಾರ ಪಡೆಯಿರಿ ಎಂದು ಸಲಹೆ ನೀಡಿದರು. ಪರೀಕ್ಷಾ ಕೇಂದ್ರಗಳಲ್ಲಿನ ಶೌಚಾಲಯ ಸ್ವಚ್ಛತೆಗೆ ಒತ್ತು ನೀಡಿ , ಯಥೇಚ್ಛವಾಗಿ ನೀರು ಇರುವಂತೆ ನೋಡಿಕೊಳ್ಳಿ. ಶಾಲಾ ಆವರಣ , ಕೊಠಡಿಗಳಲ್ಲಿ ಸ್ವಚ್ಚತೆ , ಗಾಳಿಬೆಳಕು ಇರುವಂತೆ ವ್ಯವಸ್ಥೆ ಮಾಡಿ ಎಂದು ಸೂಚಿಸಿದರು.
ಪ್ರತಿ ವಿದ್ಯಾರ್ಥಿಗೊಂದು ಡೆಸ್ಟ್ ಒದಗಿಸಲು ಸೂಚಿಸಿರುವುದರಿಂದ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇತರ ಶಾಲೆಗಳಿಂದಲೂ ಡೆಸ್ಟ್ ತರಿಸಿಕೊಳ್ಳಿ , ಯಾವುದೇ ಕಾರಣಕ್ಕೂ ಮಕ್ಕಳನ್ನು ನೆಲದ ಮೇಲೆ ಕುಳರಿಸಿ ಪರೀಕ್ಷೆ ಬರೆಸಬಾರದು ಎಂದು ತಿಳಿಸಿದರು. ಮಕ್ಕಳಿಗೆ ಒಎಂಆರ್ ಪ್ರಶ್ನೆಪತ್ರಿಕೆ ಇದೇ ಮೊದಲಾಗಿದ್ದು , ಗೊಂದಲವಾಗದಂತೆ ಈಗಾಗಲೇ ಇಲಾಖೆ ಒಎಂಆರ್ ಪ್ರಶ್ನೆಪತ್ರಿಕೆ ಬಿಡುಗಡೆ ಮಾಡಿದ್ದು , ಅದನ್ನು ಮಕ್ಕಳಿಂದ ಅಭ್ಯಾಸ ಮಾಡಿಸಲು ಶಿಕ್ಷಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿ , ಕೊವಿಡ್ ಮಾರ್ಗಸೂಚಿ ಉಲ್ಲಂಘಿಸದೇ ಮಕ್ಕಳಿಗೆ ಒಎಂಆರ್ ಶೀಟ್ ಕುರಿತು ಮಾರ್ಗದರ್ಶನ ನೀಡಿ , ಪರೀಕ್ಷಾ ಪ್ರವೇಶ ಪತ್ರ ಪಡೆಯಲು ಬರುವ ಖಾಸಗಿ.ಪುನರಾವರ್ತಿತ ಅಭ್ಯರ್ಥಿಗಳಿಗೆ ಅವಕಾಶವಿದ್ದರೆ ಅರಿವು ಮೂಡಿಸುವ ಪ್ರಯತ್ನ ಮಾಡಿ ಎಂದರು.
ಜಿಲ್ಲೆಯಲ್ಲಿ ೨೦,೫೨೫ ಮಂದಿ ಪರೀಕ್ಷೆ ಬರೆಯುತ್ತಿದ್ದು , ಕಳೆದ ಬಾರಿ ೭೨ ಕೇಂದ್ರಗಳಲ್ಲಿ ಪರೀಕ್ಷೆ ಬರೆಸಲಾಗಿತ್ತು ಆದರೆ ಈ ಬಾರಿ ಕೋವಿಡ್ ಸುರಕ್ಷಾ ನಿಯಮಗಳಡಿ ಕೇಂದ್ರಗಳ ಸಂಖ್ಯೆಯನ್ನು ೧೧೭ ಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿ , ಪರೀಕ್ಷೆಗೆ ಬರುವ ಮಕ್ಕಳು ಪರೀಕ್ಷೆ ಮುಗಿದ ನಂತರ ಗುಂಪು ಸೇರದಂತೆಯೂ ಮಾರ್ಗದರ್ಶನ ನೀಡಿ ಎಂದರು.
ಕೇಂದಗಳಿಗೆ ಆಶಾಕಾರ್ಯಕರ್ತೆಯರು , ಶುಶ್ಕಿಯರ ನೇಮಕ , ಭದ್ರತೆಗೆ ಪೊಲೀಸರ ನಿಯೋಜನೆಗಾಗಿ ಕೇಂದ್ರದ ಮುಖ್ಯ ಅಧೀಕ್ಷಕರು ಮೊದಲೇ ಮನವಿ ಸಲ್ಲಿಸಿ ಎಂದು ತಿಳಿಸಿದರು. ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಲಸಿಕೆ ಹಾಕಿಸಿಕೊಂಡಿರುವುದನ್ನು ಖಾತ್ರಿ ಪಡಿಸಿಕೊಳ್ಳಿ , ಯಾವುದೇ ನಿರ್ಲಕ್ಷ್ಯ ಮಾಡದಿರಿ , ಗೊಂದಲಕ್ಕೆ ಅವಕಾಶ ಬೇಡ ಪರೀಕ್ಷೆ ಸುಗಮವಾಗಿ ನಡೆಸಿ ಎಂದರು.
ಈ ಸಂದರ್ಭದಲ್ಲಿ ಬೆಗ್ಲಿಹೊಸಹಳ್ಳಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಮಹದೇವಪ್ರಸಾದ್ , ಹೇಮಂತ್ , ಎಲ್ಲಾ ಶಿಕ್ಷಕರು ಹಾಜರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.