ಕೋಲಾರ (ವಿಶ್ವ ಕನ್ನಡಿಗ ನ್ಯೂಸ್):– ಮಳೆಗಾಲ ಪ್ರಾರಂಭವಾಗಿರುವುದರಿಂದ ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚಿನ ಮಳೆಯಾಗುತ್ತಿದು. 1 ರಿಂದ 5 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಅತಿಸಾರಭೇದಿ ಕಂಡು ಬರುತ್ತದೆ ಆದ್ದರಿಂದ ಅತಿಸಾರಭೇದಿ ನಿಯಂತ್ರಣ ಕುರಿತು ಪೋಷಕರಿಗೆ ಅರಿವು ಮೂಡಿಸಿ ಎಂದು ಜಿಲ್ಲಾಧಿಕಾರಿಗಳಾದ ಡಾ ಆರ್ . ಸೆಲ್ವಮಣಿ ಅವರು ಸೂಚಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅತಿಸಾರಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ 2021 ಚಾಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಡೆಂಗ್ಯೂ , ಚಿಕನ್ಗುನ್ಯಾ , ಮಲೇರಿಯಾ ಹಾಗೂ ಅತಿಸಾರ ಭೇದಿಯ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಅವರು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಅತಿಸಾರಭೇದಿ ಪ್ರಕರಣಗಳು ಕಂಡು ಬಂದರೆ ತಕ್ಷಣ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ತಿಳಿಸಬೇಕು. ಓ.ಆರ್.ಎಸ್ ಮತ್ತು ಝಿಂಕ್ ಮಾತ್ರೆಗಳನ್ನು ಅಗತ್ಯ ಇರುವಷ್ಟು ಸಂಗ್ರಹಣೆ ಮಾಡಿಕೊಳ್ಳಿ ಎಂದು ತಿಳಿಸಿದರು.
ಶೌಚಾಲಯಗಳನ್ನು ಶೇ .100 ರಷ್ಟು ನಿರ್ಮಿಸಿದ್ದರೂ ಎಲ್ಲರೂ ಬಳಕೆ ಮಾಡುತ್ತಿಲ್ಲ. ಕೆಲವು ಕಡೆ ಬಯಲು ಮಲವಿಸರ್ಜನೆ ಮಾಡುತ್ತಿದ್ದಾರೆ. ಶೌಚಾಲಯಗಳ ಬಳಕೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಓ.ಆರ್.ಎಸ್ ದಿನಾಚರಣೆ ಏರ್ಪಡಿಸಿ ಅತಿಸಾರಭೇದಿಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೃಷ್ಣಮೂರ್ತಿಯವರಿಗೆ ಸೂಚಿಸಿದರು.
ಆರ್.ಸಿ.ಎಚ್ ಅಧಿಕಾರಿಗಳಾದ ಡಾ ವಿಜಯ ಕುಮಾರಿ ಅವರು ಮಾತನಾಡಿ , ಅತಿಸಾರಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ 2021 ಕಾರ್ಯಕ್ರಮವನ್ನು ಇದುವರೆಗೂ ಈ ಕಾರ್ಯಕ್ರಮದಿಂದ ಚಿಕಿತ್ಸೆ ಹಾಗೂ ಮಾಹಿತಿ ತಲುಪಲಾಗದ ಮಕ್ಕಳನ್ನು ಕೇಂದ್ರೀಕರಿಸುವ ಹಾಗೂ ಚಿಕಿತ್ಸೆ ನೀಡುವ ಮತ್ತು ಅರಿವು ಮೂಡಿಸುವ ಸಲುವಾಗಿ ಜುಲೈ 19 ರಿಂದ ಆಗಸ್ಟ್ 02 ರವರಿಗೆ ಪಾಕ್ಷಿಕದ ಮೂಲಕ ಮಕ್ಕಳಿಗೆ ಓ.ಆರ್.ಎಸ್ ಮತ್ತು ಝಿಂಕ್ ಮಾತ್ರೆಗಳನ್ನು ನೀಡಿ ಅತಿಸಾರಭೇದಿಯಿಂದ ಮಕ್ಕಳ ಮರಣ ತಪ್ಪಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.
ಅತಿಸಾರಭೇದಿಯಿಂದ ಸಂಭವಿಸುವ ಮರಣಗಳನ್ನು ತಡೆಯಲು ಅವಶ್ಯಕತೆಯಿರುವ ಸಮಯದಲ್ಲಿ ಓ.ಆರ್.ಎಸ್ ಮತ್ತು ಝಿಂಕ್ ಮಾತ್ರೆಗಳನ್ನು ನೀಡಬೇಕು ಜೊತೆಯಲ್ಲಿ ಶುದ್ಧ ಕುಡಿಯುವ ನೀರು , ಮಕ್ಕಳ ವಯಸ್ಸಿಗೆ ಅನುಗುಣವಾಗಿ ಚುಚ್ಚುಮದ್ದು ನೀಡುವುದು , ತಾಯಿ ಹಾಲು , ಪೌಷ್ಟಿಕ ಆಹಾರ ಸೇವನೆ , ಶೌಚಾಲಯ ಬಳಸುವುದು , ಶೌಚಾಲಯ ಬಳಸಿದ ನಂತರ ಹಾಗೂ ಆಹಾರಸೇವನೆಯ ಮುನ್ನ ಕೈತೊಳೆಯುವ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಚಿಕ್ಕ ಮಕ್ಕಳು ಮಲವಿಸರ್ಜನೆ ಮಾಡಿದಾಗ ತಾಯಂದಿರು ಶುಚಿ ಮಾಡಿದ ನಂತರ ಕಡ್ಡಾಯವಾಗಿ ಕೈತೊಳೆಯುವ ವಿಧಾನಗಳನ್ನು ಪಾಲಿಸಬೇಕು ಎಂದು ಅವರು ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ || ಜಗದೀಶ್ ಅವರು ಮಾತನಾಡಿ , ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ 5 ವರ್ಷದೊಳಗಿನ ಮಕ್ಕಳ ಸಮೀಕ್ಷೆ ನಡೆಸಿ , ಪ್ರತಿಯೊಂದು ಮನೆಗೆ ಓ.ಆರ್.ಎಸ್ ಪಟ್ಟಣ ನೀಡಿ ಕೈ ತೊಳೆಯುವ ವಿಧಾನದ ಬಗ್ಗೆ , ಶೌಚಾಲಯ ಬಳಸುವ ಬಗ್ಗೆ , ತಾಯಿಯ ಹಾಲಿನ ಮಹತ್ವದ ಬಗ್ಗೆ ಹಾಗೂ ಪೌಷ್ಠಿಕ ಆಹಾರದ ಬಗ್ಗೆ ಅರಿವು ಮೂಡಿಸುವರು ಹಾಗೂ ಅವಶ್ಯಕತೆ ಇರುವ ಮಕ್ಕಳಿಗೆ ಝಂಕ್ ಮಾತ್ರೆಯನ್ನು ನೀಡುವರು ಎಂದು ತಿಳಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಓ.ಆರ್.ಎಸ್ ದ್ರಾವಣ ತಯಾರಿಸುವ ವಿಧಾನದ ಬಗ್ಗೆ ಹಾಗೂ ಕೈ ತೊಳೆಯುವ ವಿಧಾನದ ಬಗ್ಗೆ ಪ್ರಚಾರ ಮಾಡಲಾಗುವುದು.
ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಪ್ರತಿಯೊಂದು ಮನೆಯಲ್ಲೂ ಕಡ್ಡಾಯವಾಗಿ ಪ್ರತಿಯೊಬ್ಬರೂ ಶೌಚಾಲಯವನ್ನು ಬಳಸಬೇಕು ಮನೆಯಲ್ಲಿ ಇರುವ ಮಗು ಮಲವಿಸರ್ಜನೆ ಮಾಡಿದರೆ ಅದನ್ನು ಪೋಷಕರು ಸ್ವಚ್ಛಗೊಳಿಸಿ ಮಲವನ್ನು ಶೌಚಾಲಯದಲ್ಲಿ ಹಾಕಬೇಕು ಹಾಗೂ ಸೂಚಿಗೊಳಿಸಿದವರು ತಮ್ಮ ಕೈಯನ್ನು ಸಾಬೂನಿನಿಂದ ತೊಳೆದುಕೊಳ್ಳಬೇಕು. ಚಿಕ್ಕ ಮಕ್ಕಳು ಸಹ ಶೌಚಾಲಯದಲ್ಲಿ ಮಲವಿಸರ್ಜನೆ ಮಾಡಲು ತಿಳಿಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಎಂ.ಜಿ.ಪಾಲಿ , ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೃಷ್ಣಮೂರ್ತಿ , ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ ಚಂದನ್ , ತಾಲ್ಲೂಕು ವೈದ್ಯಾಧಿಕಾರಿಗಳಾದ ರಮ್ಯ ದೀಪಿಕ , ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಪ್ರೇಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.