(www.vknews.com) : ಅಪುತ್ರಸ್ಯ ಗತಿರ್ನಾಸಿ ಪುತ್ರಭಾಗ್ಯ ಇಲ್ಲದವನಿಗೆ ಮೋಕ್ಷವಿಲ್ಲ. ಮಹಿಳೆಯರು ಸ್ವಾತಂತ್ರ್ಯಕ್ಕೆ ಅರ್ಹರಲ್ಲ. ಅವಳಿಗೆ ಶಿಕ್ಷಣದ ಹಕ್ಕು ಇಲ್ಲ ಹೀಗೆ ಸಾವಿರಾರು ವರ್ಷಗಳಿಂದ ನಂಬುತ್ತಾ ಬಂದಿದ್ದಲ್ಲದೇ ಅವಳಿಗೆ ಪ್ರಿತ್ರಾರ್ಜಿತ ಸೊತ್ತಿನಲ್ಲಿ ಹಕ್ಕು ನಿರಾಕರಿಸಿ ಗುಲಾಮರಂತೆ ನೋಡುತ್ತಿದ್ದ ಮಾನವ ಕುಲಕ್ಕೆ ಮಹಿಳೆಯರೂ ಪುರುಷರಷ್ಟೇ ಸಮಾಜದಲ್ಲಿ ಗುರುತಿಸಲ್ಪಡ ಬೇಕಾದವರು ಎಂಬ ತತ್ವೋಪದೇಶಗಳನ್ನು ನೀಡಿ ಅವರಿಗೂ ಪಿತ್ರಾರ್ಜಿತ ಸೊತ್ತಲ್ಲಿ ಅವಕಾಶ ಇದೆ ಎಂದು ಜಗತ್ತಲ್ಲಿ ಮೊಟ್ಟ ಮೊದಲ ಬಾರಿಗೆ ಘೋಷಿಸಿದ ಪೈಗಂಬರ್ ಮುಹಮ್ಮದ್ ಮುಸ್ತಪಾ ಸಲ್ಲಲ್ಲಾಹು ಅಲೈಹಿವಸಲ್ಲಮ್ ರಾಗಿದ್ದಾರೆ ಜಗತ್ತಿನ ಸರ್ವ ಶ್ರೇಷ್ಟ ಮಹಿಳಾ ವಿಮೋಚಕ ಎಂದು ಮುಲ್ಕಿ ಜುಮಾ ಮಸೀದಿಯ ಖತೀಬರಾದ ಎಸ್ ಬಿ ದಾರಿಮಿ ಜುಮಾ ಭಾಷಣದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಎಷ್ಟು ಕಷ್ಟ ಪಟ್ಟಾದರೂ ಮುಸ್ಲಿಮರು ತಮ್ಮ ತಂದೆ- ತಾಯಿ,ಮಡದಿ -ಮಕ್ಕಳನ್ನು ಚೆನ್ನಾಗಿ ನೋಡಿ ಕೊಳ್ಳುತ್ತಿದ್ದಾರೆ. ಮಹಿಳೆಯರಿಗೆ ಬಹಳಷ್ಟು ಸೌಕರ್ಯಗಳನ್ನು ಮಾಡಿ ಕೊಟ್ಟು ಅವರಿಂದ ದುಡಿಸದೇ ಖರ್ಚುವೆಚ್ಚಗಳನ್ನು ತಾವೇ ಭರಿಸಿ ಸುಖಸಂಸಾರ ನಡೆಸುತ್ತಿದ್ದಾರೆ. ಮದ್ಯಪಾನದಂತಹ ಕೆಟ್ಟ ಚಟಗಳಿಂದ ದೂರವುಳಿದು ಮಹಿಳೆಯರ ಸಂರಕ್ಷಣೆಗೆ ತಮ್ಮ ಮೊದಲ ಆದ್ಯತೆ ನೀಡಿ ಮಾದರಿಯಾಗಿದ್ದಾರೆ. ಇದಕ್ಕೆಲ್ಲಾ ಪೈಗಂಬರ್ ರವರ ನಿರ್ದೇಶನ ಗಳೇ ಕಾರಣ ಎಂದು ಹೇಳಿದ ಖತೀಬರು, ಬಹುತೇಕ ಮುಸ್ಲಿಮರ ಇಂತಹ ಉತ್ತಮ ಗುಣಮಟ್ಟದ ಕೌಟುಂಬಿಕ ಸುಖಸಂಸಾರವನ್ನು ಕಂಡು ಸಹಿಸಲಾಗದ ಕೆಲವು ದ್ವೇಷಾಸೂಯೆಯ ಮಂದಿಗಳು ಮುಸ್ಲಿಂ ಮಹಿಳೆಯರು ಧರಿಸುವ ಬುರ್ಖಾವ ನ್ನು ಮುಂದಿಟ್ಟುಕೊಂಡು ಮುಸ್ಲಿಂ ಪುರುಷರ ವಿರುದ್ದ ಮಹಿಳೆಯರನ್ನು ಎತ್ತಿಕಟ್ಟುವ ಹುನ್ನಾರ ನಡೆಸುತ್ತಿದ್ದಾರೆ. ಇವರು ಎಷ್ಟೇ ತಿಪ್ಪರಲಾಗ ಹಾಕಿದರೂ ಇವರ ಭಾಷಣಗಳಿಂದ ಮುಸ್ಲಿಮರಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಭಿಪ್ರಾಯ ಪಟ್ಟರು.
ಭಾರತದಲ್ಲಿ ಮುಸ್ಲಿಮೇತರ ಮಹಿಳೆಯರಿಗೆ ಪಿತ್ರಾರ್ಜಿತ ಸೊತ್ತಿನಲ್ಲಿ ಹಕ್ಕು ಸಿಗಲು 2005 ರ ತನಕ ಕಾಯ ಬೇಕಾಯಿತು. ಸತಿಸಹಗಮನದಂತಹ ಕೆಟ್ಟ ಪದ್ದತಿ ಇಲ್ಲದಾಗಿ ಇನ್ನೂ ನೂರು ವರ್ಷ ಆಗಿಲ್ಲ. ಮುಟ್ಟಾದವಳನ್ನು ಮನೆಯಿಂದ ಹೊರಗಟ್ಟಿ ಅವಳನ್ನು ಮುಟ್ಟಬಾರದೆಂಬ ಪದ್ದತಿ ಈಗಲೂ ಭಾರತದ ಹಲವು ಕಡೆ ಚಾಲ್ತಿಯಲ್ಲಿದೆ. ದೇವದಾಸಿ ಪದ್ದತಿಗೆ ಇನ್ನೂ ತಿಲಾಂಜಲಿ ಆಗಿಲ್ಲ. ಪುರುಷರ ಮದ್ಯಪಾನದ ಚಟದಿಂದಾಗಿ ಲಕ್ಷಾಂತರ ಮಹಿಳೆಯರು ಕಷ್ಟ ಅನುಭವಿಸುತ್ತಿದ್ದಾರೆ. ವಯಸ್ಸಾದ ಸಾವಿರಾರು ತಂದೆ ತಾಯಿಗಳು ವೃದ್ದಾಶ್ರಮದಲ್ಲಿ ಕೊಳೆಯುತ್ತಿದ್ದಾರೆ. ಬ್ರೂಣ ಹತ್ಯೆ ಈಗಲೂ ಎಗ್ಗಿಲ್ಲದೇ ನಡೆಯುತ್ತಿದೆ. ಮುಸ್ಲಿಂ ಮಹಿಳೆಯರ ಬಗ್ಗೆ ಅನುಕಂಪ ತೋರಿಸುವವರು ಮೇಲಿನ ಇತ್ಯಾದಿ ಪಿಡುಗುಗಳನ್ನು ನಿರ್ಮೂಲನೆ ಮಾಡಲು ಪ್ರಯತ್ನ ಪಡಬೇಕು.ಮತ್ತು ಅವರ ಸ್ವಂತ ತಂದೆ ತಾಯಿಗಳನ್ನು ಮೊದಲು ವೃದ್ದಾಶ್ರಮದಿಂದ ಬಿಡಿಸಿ ಕೊಂಡು ಬರಬೇಕು ಎಂದು ಖತೀಬರು ಸಲಹೆ ನೀಡಿದರು.
ಅನ್ಯ ಮಹಿಳೆಯನ್ನು ಕಣ್ಣೆತ್ತಿಯೂ ನೋಡ ಬಾರದೆಂದು ಕಲಿಸಿದ ಇಸ್ಲಾಮಿನ ಅನುಯಾಯಿಗಳಿಗೆ ಅನ್ಯ ಧರ್ಮೀಯ ಮಹಿಳೆಯರನ್ನು ಲವ್ ಮಾಡಲು ಸಾಧ್ಯವಿಲ್ಲ. ಆದರೆ ಇಂದಿನ ಆಧುನಿಕ ಮೊಬೈಲ್ ಯುಗದ ಕೆಟ್ಟ ಪರಿಸ್ಥಿತಿಯಲ್ಲಿ ಹೆಣ್ಣು – ಗಂಡಿನ ಮದ್ಯೆ ಯಾವುದೇ ಮುಚ್ಚುಮೆರೆ ಇಲ್ಲದಿರುವುದರಿಂದ ಪರಸ್ಪರ ಪ್ರೀತಿಸುವ ಘಟನೆಗಳು ನಡೆಯುತ್ತಿದೆ. ಇದು ಎಲ್ಲಾ ಮತದ ಅನುಯಾಯಿಗಳಲ್ಲೂ ಕಂಡು ಬರುತ್ತಿದೆ.ಆದರೆ ಈ ಸಹಜ ಪ್ರಕ್ರಿಯೆಗೆ ಲವ್ ಜಿಹಾದ್ ಎಂಬ ಹೆಸರಿಟ್ಟು ಮುಸ್ಲಿಮರನ್ನು ಮತ್ತು ಅವರ ಪೈಗಂಬರರನ್ನು ಅವಹೇಳಿಸುತ್ತಿದ್ದಾರೆ. ಇದು ಸಂಸ್ಕೃತಿ ಹೀನ ಬಾಡಿಗೆ ಭಾಷಣಗಾರರ ಕೇವಲ ವಿಲಾಪ ಮಾತ್ರವಾಗಿದೆ ಎಂದ ಅವರು ಇಂತದ್ದಕ್ಕೆ ಮುಸ್ಲಿಮರು ತಲೆ ಕೆಡಿಸಿ ಕೊಳ್ಳದೇ ಅವರ ಪಾಡಿಗೆ ಅವರನ್ನು ಬಿಟ್ಟು ಬಿಡುವುದು ಒಳಿತು ಎಂದು ಅಭಿಪ್ರಾಯ ಪಟ್ಟರು.
ಪ್ರವಾದಿ ಸ ಅ ರವರ ಜನ್ಮ ತಿಂಗಳಾದ ರಬೀವುಲ್ ಅವ್ವಲ್ ನಲ್ಲಿ ಪ್ರವಾದಿಗಳ ಬಗ್ಗೆ ಇತರ ಸಮುದಾಯದ ತಪ್ಪು ಗ್ರಹಿಕೆಗಳನ್ನು ನೀಗಿಸಲು ಪ್ರತೀ ಸಂಘಟನೆಗಳು ಪಣ ತೊಡ ಬೇಕೆಂದು ಸಲಹೆ ನೀಡಿದ ಖತೀಬರು ನಮ್ಮ ನಡವಳಿಕೆಯನ್ನು ಉತ್ತಮ ಗೊಳಿಸಿ ಇತರ ಧರ್ಮೀಯರಿಗೂ ನಮ್ಮ ಬಗ್ಗೆ ಅಭಿಮಾನ ಮೂಡುವ ಕೆಲಸ ಮಾಡ ಬೇಕೆಂದು ಕರೆ ನೀಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.