ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):
ಮಾಲೂರು ಪಟ್ಟಣ್ಣದ ವಿಶ್ವಮಾನವ ಕುವೆಂಪು ಫೌಂಡೇಶನ್ ಕೇಂದ್ರ ಕಚೇರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಹೆಚ್.ಶಿವರಾಮೇಗೌಡ ಸಾರಥ್ಯದಲ್ಲಿ) 66 ನೇ ಕನ್ನಡ ರಾಜ್ಯೋತ್ಸವ, 566 ಕನ್ನಡದ ಶಾಲು ಹಾಗೂ ಗುಲಾಬಿ ಹೂ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೇರೆವೇರಿಸಿ ಮಾತನಾಡಿದ ಕರವೇ ಮಾಲೂರು ತಾಲ್ಲೂಕು ಘಟಕದ ಗೌರವ ಅಧ್ಯಕ್ಷರಾದ ಆನೇಪುರ ದೇವರಾಜ್ ರವರು ಮಾತನಾಡಿ “ಮಹನೀಯರ ಹೋರಾಟದ ಫಲದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ, ಹಲವು ಆಡಳಿತಗಾರರ ಮುಷ್ಠಿಗೆ ಸಿಲುಕಿದ್ದ ಕನ್ನಡ ನಾಡು ಹರಿದು ಹಂಚಿ ಹೋಗಿತ್ತು. ನಾಡಿನ ಜನರನ್ನು ಒಂದುಗೂಡಿಸಲು ಬೃಹತ್ ಹೋರಾಟವೇ ನಡೆದು ಕರ್ನಾಟಕ ಏಕೀಕರಣಕ್ಕೆ ನಾಂದಿಯಾಗಿತ್ತು. ಆ ಮೂಲಕವೇ ಭಾಷಾವಾರು ಪ್ರಾಂತ್ಯಗಳ ರಚನೆಗೆ ಪ್ರೇರಣೆ ದೊರಕಿದ್ದು, ಕರ್ನಾಟಕ ಚರಿತ್ರೆಯಲ್ಲಿ ಮಹತ್ವದ ಮೈಲಿಗಲ್ಲು. ಪ್ರತ್ಯೇಕ ಪ್ರಾಂತ ರಚನೆಗೆ ಆಲೂರು ವೆಂಕಟರಾಯ, ಡೆಪ್ಯುಟಿ ಚೆನ್ನಬಸಪ್ಪ ಸೇರಿದಂತೆ ಹಲವರು ತಮ್ಮ ಕೊಡುಗೆಗಳನ್ನು ನೀಡಿದರು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಪುಷ್ಪನಮನದ ಸಲ್ಲಿಸಿದ ಕರವೇ ಕಾರ್ಮಿಕ ಘಟಕದ ಗೌರವ ಅಧ್ಯಕ್ಷರು ಹಾಗೂ ಜಿಲ್ಲಾ ಸಹಕಾರಿ ಯೂನಿಯನ್ ಉಪಾಧ್ಯಕ್ಷರಾದ ಗೋವರ್ಧನ್ ರೆಡ್ಡಿ ರವರು ಮಾತನಾಡಿ “ನಮ್ಮ ರಾಜ್ಯದಲ್ಲಿ ಇತರೆ ಭಾಷೆಗಳು ಅಂಬೆಗಾಲಿಡುತ್ತಿರುವಾಗಲೇ ಕನ್ನಡ ಭಾಷೆಯಲ್ಲಿ ಕಾವ್ಯಗಳು ರಚನೆಗೊಂಡಿದ್ದವೆಂಬುದು ರೋಮಾಂಚಕಾರಿ ಸಂಗತಿ. ವಿಜಯನಗರ ಸಾಮ್ರಾಜ್ಯ ಕರ್ನಾಟಕದ ಹೆಮ್ಮೆ, ಕರ್ನಾಟಕ ಎಂಬುದು ಭೂಪ್ರದೇಶವಲ್ಲ. ಅದೊಂದು ಅನನ್ಯ ಸಂಸ್ಕೃತಿ, ಭವ್ಯ ಪರಂಪರೆಯನ್ನು ಪ್ರತಿನಿಧಿ. ರಾಜ್ಯವು ವಿವಿಧ ಮತ, ಪಂಥಗಳ ಸಂಗಮ’ ಎಂದು ಹೇಳಿದರು.
ಮಹಿಳಾ ಘಟಕದ ತಾಲ್ಲೂಕು ಗೌರವ ಅಧ್ಯಕ್ಷರಾದ ಶ್ರೀಮತಿ ವನಿತ ಅರವಿಂದ್ ರವರು ಮಾತನಾಡುತ್ತಾ “ನಾಡಿನ ಕವಿ, ಕಲಾವಿದರು, ಸಂಶೋಧಕರು, ಇತಿಹಾಸಕರರು ತಮ್ಮ ಕೃತಿಗಳ ಮೂಲಕ ಕರ್ನಾಟಕದ ಕೀರ್ತಿಯ ಕಳಸವನ್ನು ಹೊಳೆಯುವಂತೆ ಮಾಡಿದ್ದಾರೆ. ಕನ್ನಡ ನಾಡು ಉದಯವಾಗುವಲ್ಲಿ ಬಿ.ಎಂ.ಶ್ರೀಕಂಠಯ್ಯ, ಅ.ನ.ಕೃಷ್ಣರಾಯ, ಆಲೂರು ವೆಂಕಟರಾಯ. ಗಂಗಾಧರ ದೇಶಪಾಂಡೆ, ಮಂಗಳವಾಡಿ ಶ್ರೀನಿವಾಸರಾಯರು, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಪಾಟೀಲ ಪುಟ್ಟಪ್ಪ ಅವರಂಥ ಮಹನೀಯರನ್ನು ಸ್ಮರಿಸಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಕೆ.ಮುನಿಕೃಷ್ಣಪ್ಪ ರವರು ಮಾತನಾಡಿ “‘ಈ ನಾಡಿನ ನೆಲ, ಜಲ, ಸಂಸ್ಕೃತಿ, ಸಾಹಿತ್ಯ, ಕಲೆಯನ್ನು ಉಳಿಸಿ ಬೆಳೆಸಬೇಕು. ಭಾರತದ ಇತಿಹಾಸದಲ್ಲಿ ಚಿನ್ನದ ಜಿಲ್ಲೆ ಕೋಲಾರ ನಮ್ಮ ಕನ್ನಡಿಗರಿಗೆ ಹೆಮ್ಮೆ ತಂದಿದೆ. ಕೋಲಾರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲು ಎಲ್ಲರೂ ಕಂಕಣಬದ್ಧರಾಗೋಣ’ ಎಂದು ಕರೆ ನೀಡಿದರು.
66 ನೇ ಕನ್ನಡ ರಾಜ್ಯೋತ್ಸವದಲ್ಲಿ 566 ಕನ್ನಡದ ಕೆಂಪು, ಹಳದಿ ಶಾಲುಗಳ ಜೊತೆಗೆ ಗುಲಾಬಿ ಹೂ ನೀಡಿ ಮಾಲೂರು ಪಟ್ಟಣ್ಣದಲ್ಲಿನ ಅನ್ಯ ಭಾಷಿಕರಿಗೆ, ನಮ್ಮ ಭಾಷೆಯನ್ನು ಕಲಿಯುವಂತೆ ಜಾಗೃತಿ ಮೂಢಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಶ್ರೀಮತಿ ನಳೀನಾಕ್ಷಿ, ಸ್ವಾಗತವನ್ನು ದೊಡ್ಡಿ ಪ್ರವೀಣ್, ವಂದನಾರ್ಪಣೆಯನ್ನು ರಂಗನಾಥ್ ಮಾಡಿದರು.
ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾ ಉಸ್ತುವಾರಿ ಲಕ್ಕೂರು ಎಂ.ನಾಗರಾಜ್, ತಾಲ್ಲೂಕು ಅಧ್ಯಕ್ಷರಾದ ದೊಡ್ಡಕಲ್ಲಹಳ್ಳಿ ಮಂಜುನಾಥ್, ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಶೋಭಾಕೃಷ್ಣ, ಪ್ರಧಾನ ಕಾರ್ಯದರ್ಶಿ ಶ್ರೀಮತಿ ಗಂಗಾಭವಾನಿ, ಸಂಘಟನಾ ಕಾರ್ಯದರ್ಶಿ ಶ್ರೀಮತಿ ಸುಗಂಧಿ, ಖಜಾಂಜಿ ಶೋಭಾ, ಕಾರ್ಮಿಕ ಘಟಕದ ಅಧ್ಯಕ್ಷರಾದ ಸೈಯದ್ ನದೀಮ್, ಪ್ರಧಾನ ಕಾರ್ಯದರ್ಶಿ ಕೊಡೂರು ಸತೀಶ್, ಕ್ರೀಡಾ ಕಾರ್ಯದರ್ಶಿ ಅಕ್ರಂ, ಯುವ ಘಟಕದ ಕಾರ್ಯ ಅಧ್ಯಕ್ಷ ಚವ್ವೇನಹಳ್ಳಿ ಸಲ್ಮಾನ್ ಖಾನ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ದೊಡ್ಡಿ ಪ್ರವೀಣ್, ಸಂಘಟನಾ ಕಾರ್ಯದರ್ಶಿ ಕೊಡೂರು ರಂಜೀತ್ ಗೌಡ, ನಗರ ಘಟಕದ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ, ಸಂಚಾಲಕರಾದ ಮೌಲಾ ಆಲಿ, ಕ್ರೀಡಾ ಕಾರ್ಯದರ್ಶಿ ರಂಗನಾಥ್ ಇತರರು ಹಾಜರಿದ್ದರು.
ವರದಿ: ಲಕ್ಕೂರು ಎಂ ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.