(www.vknews.com) ; ಶೈಕ್ಷಣಿಕ ಪ್ರಯೋಗದಲ್ಲಿ ಇದೀಗ ಎಲ್ಲೆಡೆ ಕೇಳಿ ಬರುತ್ತಿರುವ ಒಂದು ಹೆಸರು ಪುತ್ತೂರು ಕಮ್ಯುನಿಟಿ ಸೆಂಟರ್. ಅಕ್ಷರ ಕ್ರಾಂತಿಯ ಯೋಚನೆ ಮತ್ತು ಯೋಜನೆಗಳನ್ನು ಕೌಶಲ್ಯಪೂರ್ಣವಾಗಿ ಸ್ಪರ್ಶ ಮಾಡಿದ ಸಂಸ್ಥೆ ಅದಾಗಿದೆ. ಪ್ರಾರಂಭದಿಂದಲೂ ಅದರ ಒಡನಾಡಿನಾಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಸೌಭಾಗ್ಯವೇ ಸರಿ.
ನಿನ್ನೆ ಕಬಕ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣಾ ತರಗತಿಯನ್ನು ಪುತ್ತೂರು ಕಮ್ಯುನಿಟಿ ಸೆಂಟರ್ ವತಿಯಿಂದ ನಡೆಸಲಾಯಿತು. ಅಲ್ಲಿಂದ ನೇರವಾಗಿ ಪುತ್ತೂರು ಕಮ್ಯುನಿಟಿ ಸೆಂಟರ್ ಗೆ ಭೇಟಿ ನೀಡಿದಾಗ ಕಣ್ಣಮುಂದೆ ದೃಶ್ಯವೊಂದು ಬಂತು. ಒಬ್ಬಳು ಶಿಕ್ಷಕಿಯ ಸುತ್ತಮುತ್ತ ಅನೇಕ ವಿದ್ಯಾರ್ಥಿಗಳು ತಮ್ಮ ಪಾಠವನ್ನು ಕಲಿಯುತ್ತಿದ್ದರು. ಇನ್ನೊಂದೆಡೆ ಇನ್ನೊಬ್ಬ ಶಿಕ್ಷಕನ ಸುತ್ತಮುತ್ತ ಬಹಳಷ್ಟು ಹುಡುಗರು ಕಲಿಯುವ ದೃಶ್ಯ ಕಂಡೆನು.ವಿಚಾರಿಸಿದಾಗ ಅದು ವಿದ್ಯಾರ್ಥಿಗಳಿಗೆ ಟ್ಯೂಷನ್ ಕೊಡುವುದಾಗಿತ್ತು. ಇಲ್ಲೇ ಇರೋದು ವಿಶೇಷ.
ಮಕ್ಕಳಿಗೆ ತರಗತಿ ತೆಗೆಯುತ್ತಿದ್ದ ಆ ಶಿಕ್ಷಕಿ ಓರ್ವ ಬಿ ಫಾರ್ಮಾ ಕಲಿಯುವ ವಿದ್ಯಾರ್ಥಿಯಾಗಿದ್ದರು. ಅವರು ಪುತ್ತೂರು ಕಮ್ಯುನಿಟಿ ಸೆಂಟರ್ ನ ಫಲಾನುಭವಿ. ಅವರಿಗೆ ಬೇಕಾದ ಆರ್ಥಿಕ ಸಹಾಯವನ್ನು ಸಂಸ್ಥೆ ಒದಗಿಸಿತ್ತು. ಬಹಳಷ್ಟು ಪ್ರತಿಭಾವಂತೆಯಾದ ಆಕೆಗೆ ಪಿಯುಸಿ ಗಣಿತದಲ್ಲಿ ನೂರಕ್ಕೆ ನೂರು ಮಾರ್ಕ್ಸ್. ಆಕೆ ಪ್ರಥಮ ಪಿಯುಸಿಯ ವಿದ್ಯಾರ್ಥಿಗಳಿಗೆ ಗಣಿತ ಪಾಠವನ್ನು ಮಾಡುತ್ತಿದ್ದರು. ಆಕೆಯ ಆತ್ಮವಿಶ್ವಾಸ, ವಿಷಯ ಜ್ಞಾನ, ಕಲಿಸುವ ಉತ್ಸಾಹ ಮತ್ತು ವಿದ್ಯಾರ್ಥಿಗಳೊಂದಿಗೆ ಬೆರೆಯುವ ರೀತಿ ನೋಡಿ ನನಗೆ ಆಶ್ಚರ್ಯವಾಯಿತು. ಯಾವುದೇ ಅನುಭವಿ ಉಪನ್ಯಾಸಕರಗಿಂತ ಆಕೆ ಕಮ್ಮಿಯಿರಲಿಲ್ಲ. ಸಾಮಾನ್ಯವಾಗಿ ಸಂಜೆ 4.30 ಗಂಟೆಗೆ ನಿಲ್ಲಿಸುವ ತರಗತಿಯನ್ನು ನಿನ್ನೆ 5.30 ರ ತನಕ ಬಹಳ ಆಸಕ್ತಿಯಿಂದ ಮುಂದುವರೆಸಿದ್ದರು.
ಪುತ್ತೂರು ಕಮ್ಯುನಿಟಿ ಸೆಂಟರ್ ಮಾಡಿದ್ದೇನು?
ಒಂದೆಡೆ ಅವರು ವಿದ್ಯಾರ್ಥಿಯಾಗಿ ತನ್ನ ಭವಿಷ್ಯವನ್ನು ಉಜ್ವಲ ಗೊಳಿಸುತ್ತಿದ್ದಾರೆ.ಇನ್ನೊಂದೆಡೆ ತನಗೆ ಅಲ್ಲಾಹನು ಕೊಟ್ಟ ಜ್ಞಾನವನ್ನು ಇತರರಿಗೆ ಹಂಚುವ ಮೂಲಕ ಅವರ ಪಾಲಿಗೆ ಗುರುವಾಗಿ ಅವರ ಭವಿಷ್ಯವನ್ನು ಉಜ್ವಲಗೊಳಿಸುತ್ತಿದ್ದಾರೆ.
ಪುತ್ತೂರು ಕಮ್ಯುನಿಟಿ ಸೆಂಟರ್ ಆಕೆಗೆ ಆರ್ಥಿಕ ಸಹಕಾರ ಕೊಟ್ಟರೆ, ಆಕೆ ತನ್ನಲ್ಲಿರುವ ಪ್ರತಿಭೆಯನ್ನು ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಮೂಲಕ ತನ್ನ ಸಹಕಾರದ ಋಣವನ್ನು ಸಂದಾಯ ಮಾಡುತ್ತಿದ್ದಾರೆ. ಎಂತಹ ಒಂದು ಅದ್ಭುತ ಯೋಚನೆ ಅಲ್ಲವೇ?
ಇಂತಹ ಅನೇಕ ಫಲಾನುಭವಿ ವಿದ್ಯಾರ್ಥಿಗಳು ತಾವು ಕಲಿಯುವುದರ ಜೊತೆಗೆ ಪುತ್ತೂರು ಕಮ್ಯುನಿಟಿ ಸೆಂಟರ್ ನಲ್ಲಿ ಬಹಳಷ್ಟು ವಿದ್ಯಾರ್ಥಿಗಳಿಗೆ ಟ್ಯೂಷನ್ ಕೊಟ್ಟು ಅವರ ಬಾಳಿಗೆ ಬೆಳಕಾಗುತ್ತಿದ್ದಾರೆ. ಇದಲ್ಲದೆ ಪುತ್ತೂರು ತಾಲೂಕಿನಾದ್ಯಂತ ಸುಮಾರು ಹದಿನಾರು ಕಡೆ ಮನೆ ಮನೆಗಳಲ್ಲೂ ಟ್ಯೂಷನ್ ಸೆಂಟರ್ ಗಳನ್ನು ತೆರೆದು ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿಯನ್ನು ನೀಡಲಾಗುತ್ತಿದೆ. ಕೆಲವೊಂದು ವಿದ್ಯಾರ್ಥಿಗಳು ತಾವು ಕಲಿಯುವ ಜೊತೆಗೆ ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳ ಮೌಲ್ಯಮಾಪನ (assessment) ಪ್ರಕ್ರಿಯೆಯಲ್ಲೂ ಸಹಕರಿಸುತ್ತಿದ್ದಾರೆ. ಹೀಗೆ ಅಲ್ಪಾವಧಿಯಲ್ಲಿ ಪುತ್ತೂರು ಕಮ್ಯುನಿಟಿ ಸೆಂಟರ್ ಪ್ರಾಯೋಗಿಕವಾಗಿ ಮಾಡಿ ತೋರಿಸಿದ ಶ್ಲಾಘನೀಯ ಕಾರ್ಯಗಳಿಗೆ ನಾವು ಅಭಿನಂದಿಸಲೇಬೇಕು.
ನಮ್ಮಲ್ಲಿ ಬಹಳಷ್ಟು ಉನ್ನತ ವಿದ್ಯಾಭ್ಯಾಸವನ್ನು ಪಡೆದ ವಿದ್ಯಾರ್ಥಿಗಳು ವಿಶೇಷವಾಗಿ ಹೆಣ್ಣು ಮಕ್ಕಳು ಮನೆಯಲ್ಲಿ ಸುಮ್ಮನೆ ಕಾಲ ಕಳೆಯುತ್ತಿದ್ದಾರೆ. ಅವರ ಜ್ಞಾನ ನಿಂತ ನೀರಾಗಿದೆ. ಅವರಿಗೂ ಮತ್ತು ಬೇರೆಯವರಿಗೂ ಉಪಯೋಗವಾಗಿಲ್ಲ. ಜ್ಞಾನ ಯಾವತ್ತೂ ಹರಿಯುವ ನೀರಿನಂತಾಗಬೇಕು. ಅದು ಜ್ಞಾನದಾಹಿಯ ಬಾಯಾರಿಕೆಯನ್ನು ಇಂಗಿಸಬೇಕು. ಅದಕ್ಕಾಗಿ ಇಂತಹ ಯೋಚನೆ ಎಲ್ಲೆಡೆ ಬರಬೇಕು. ಕನಿಷ್ಠ ಹತ್ತು ಮಕ್ಕಳಿಗಾದರೂ ತಮ್ಮಲ್ಲಿರುವ ಜ್ಞಾನವನ್ನು ಧಾರೆ ಎರೆದರೆ ನಮ್ಮೆಲ್ಲ ಮಕ್ಕಳು ಪ್ರತಿಭೆಯ ಗಣಿ ಗಳಾಗಬಹುದು. ಕಲಿಕೆಯಲ್ಲಿ ಮುಂದೆ ಬರಬಹುದು. ಅವರಿಗೆ ಮುಂದಿನ ಉದ್ಯೋಗಕ್ಕೆ ಅನುಕೂಲವಾಗುವ ಕೌಶಲ್ಯಗಳನ್ನು ಕಲಿಸಬಹುದು. ಭಾಷಾ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಇದಕ್ಕೆಲ್ಲ ಬೇಕಾದದ್ದು ಕೇವಲ ಒಂದು ಮನಸ್ಸು ಮಾತ್ರ.
ಸಣ್ಣ ಮನಸ್ಸಿನ ದೊಡ್ಡ ವ್ಯಕ್ತಿಗಳಿಂದ ಸಮಾಜ ಕಟ್ಟಲು ಸಾಧ್ಯವಿಲ್ಲ.ದೊಡ್ಡ ಮನಸ್ಸಿನ ಸಣ್ಣಸಣ್ಣ ವ್ಯಕ್ತಿಗಳಿಂದ ಸಮಾಜ ಕಟ್ಟಲು ಸಾಧ್ಯ.
ನಿಂತ ನೀರಿಗೆ ಸಣ್ಣ ಕಲ್ಲೊಂದನ್ನು ಎಸೆದರೆ ಸಾಕು, ಅಲ್ಲಿ ಅಲೆಗಳು ಉಂಟಾಗುತ್ತವೆ. ಅಲ್ಲಿ ಚಲನೆಯನ್ನು, ಒಂದು ಬದಲಾವಣೆಯನ್ನು ಕಾಣಬಹುದು. *
ಹಾಗೆಯೇ ನಮ್ಮ ಸಣ್ಣ ಸಣ್ಣ ಕೆಲಸಗಳು ಸಮಾಜದಲ್ಲಿ ಬಹಳಷ್ಟು ಬದಲಾವಣೆಗಳನ್ನು ತರಬಹುದು ಇನ್ಶಾ ಅಲ್ಲಾಹ್.
✒️ ರಫೀಕ್ ಮಾಸ್ಟರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.