(www.vknews.com) ; ಪದ್ಮವಿಭೂಷಣ (ಮರಣೋತ್ತರ) ಪುರಸ್ಕೃತ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಮಂಗಳೂರಿನ ‘ಬಿ ಹ್ಯೂಮನ್’ ಸಂಸ್ಥೆಯ ವತಿಯಿಂದ ಶುಕ್ರವಾರ ನಗರದ ಪುರಭವನದಲ್ಲಿ ಸನ್ಮಾನಿಸಲಾಯಿತು.
ವಿಶ್ವೇಶತೀರ್ಥ ಸ್ವಾಮೀಜಿಯ ಪರವಾಗಿ ಪೇಜಾವರ ಮಠದ ವಿಶ್ವಪ್ರಸನ್ನ ಸ್ವಾಮೀಜಿ ಸನ್ಮಾನವನ್ನು ಸ್ವಿಕರಿಸಿದರು.
ಬಳಿಕ ಮಾತನಾಡಿದ ಅವರು ಸಮಾಜದಿಂದ ನಾವು ಸಾಕಷ್ಟು ಪ್ರತಿಫಲ ಪಡೆಯುತ್ತೇವೆ. ಪಡೆದುದೆಲ್ಲವನ್ನೂ ಸಮಾಜಕ್ಕೆ ಮರಳಿಸಲು ನಮಗೆ ಸಾಧ್ಯವಿಲ್ಲ. ಆದರೆ ಅದರಲ್ಲಿ ಕಿಂಚಿತ್ತಾದರೂ ಮರಳಿಸಬೇಕು. ಆ ಮೂಲಕ ಸಮಾಜದ ಋಣವನ್ನು ತೀರಿಸಬೇಕು ಎಂದರು.
ನಮ್ಮ ಬದುಕು ಕಿತ್ತಳೆ ಹಣ್ಣಿನಂತೆ ಮುಖಾಮುಖಿಯಾಗಿರಬೇಕು. ಕಿತ್ತಳೆ ಹಣ್ಣು ಮಾರುತ್ತಲೇ ಶಾಲೆ ಕಟ್ಟಿದ ಹಾಜಬ್ಬರ ಬದುಕಿನ ಶೈಲಿ, ಗುರಿ, ಧ್ಯೇಯವನ್ನು ನಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳಬೇಕು ಎಂದು ವಿಶ್ವಪ್ರಸನ್ನ ಸ್ವಾಮೀಜಿ ಪೇಜಾವರ ಹೇಳಿದರು.
ಬಿ ಹ್ಯೂಮನ್ ಮಂಗಳೂರು ಘಟಕಾಧ್ಯಕ್ಷ ಮುಹಮ್ಮದ್ ಅಮೀನ್ ಎಚ್.ಎಚ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಡಿಸಿಪಿ ಹರಿರಾಮ್ ಶಂಕರ್, ಶಾಸಕ ಯು.ಟಿ ಖಾದರ್, ಎ.ಕೆ.ಎಂ ಅಶ್ರಫ್, ಬಿ.ಎಂ. ಫಾರೂಕ್, ಮಂಗಳೂರು ಧರ್ಮಪ್ರಾಂತದ ಪಿಆರ್ಒ ರಾಯ್ ಕ್ಯಾಸ್ಟಲಿನೊ, ಸೌದಿ ಅರೇಬಿಯಾದ ಅಲ್ ಮುಝೈನ್ನ ಝಕರಿಯಾ ಜೋಕಟ್ಟೆ, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಯಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಎಸ್.ಎಂ ರಶೀದ್ ಹಾಜಿ, ಹಿದಾಯ ಫೌಂಡೇಶನ್ನ ಅಧ್ಯಕ್ಷ ಮನ್ಸೂರ್ ಅಹ್ಮದ್ ಆಝಾದ್, ಬಿ ಹ್ಯೂಮನ್ನ ಸ್ಥಾಪಕಾಧ್ಯಕ್ಷ ಆಸೀಫ್ ಡೀಲ್ಸ್, ಮಾಜಿ ಮೇಯರ್ ಕೆ. ಅಶ್ರಫ್, ಉಡುಪಿ ಸಹವಾಳ್ವೆ ಅಧ್ಯಕ್ಷ ಅಮೃತ ಶೆಣೈ, ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಕಲ್ಕೂರಾ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಮತ್ತಿತರರು ಭಾಗವಹಿಸಿದ್ದರು.
ಸಮಾಜ ಸೇವಕ ರಫೀಕ್ ಮಾಸ್ಟರ್ ಮತ್ತು ಉಪನ್ಯಾಸಕಿ ಸುಹಾನಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಹರೇಕಳ ಹಾಜಬ್ಬ ಅವರ ವೈಯಕ್ತಿಕ ಬದುಕಿಗೆ ನೆರವು ನೀಡುವುದರ ಭಾಗವಾಗಿ ಬಿ ಹ್ಯೂಮನ್ ವತಿಯಿಂದ 10 ಲಕ್ಷ ರೂ.ನ ಚೆಕ್ ಹಸ್ತಾಂತರಿಸಲಾಯಿತುಯುನಿಟಿ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಹಬೀಬ್ ರಹ್ಮಾನ್ ಅವರು ಕೊಡುಗೆಯಾಗಿ ನೀಡಿದ ಜೀವನಪರ್ಯಂತ ಉಚಿತ ವೈದ್ಯಕೀಯ ವ್ಯವಸ್ಥೆ’ಯ ದಾಖಲೆ ಪತ್ರವನ್ನು ಕೂಡ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ನೀಡಲಾಯಿತು ಈ ಕೊಡುಗೆಯನ್ನು ಪದ್ಮವಿಭೂಷಣ ಪುರಸ್ಕೃತ ಡಾ.ಬಿ.ಎಂ. ಹೆಗ್ಡೆ ಅವರಿಗೂ ನೀಡಲಾಗುವುದು ಎಂದು ಸಭೆಯಲ್ಲಿ ಘೋಷಿಸಲಾಯಿತು ಅನಾರೋಗ್ಯದ ಕಾರಣದಿಂದ ಡಾ.ಬಿ.ಎಂ. ಹೆಗ್ಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ. ಬಿಎಂ ಹೆಗ್ಡೆ ಅವರಿಗೆ ಅವರ ಮನೆಯಲ್ಲಿ ಸನ್ಮಾನಿಸಲಾಯಿತು.
ಬಿ ಹ್ಯೂಮನ್ ಮಾಡುತ್ತಿರುವ ಮಾನವೀಯ ಸೇವೆಯನ್ನು ಪ್ರಶಂಸಿಸಿ ಯುನಿಟಿ ಹೆಲ್ತ್ ಕಾಂಪ್ಲೆಕ್ಸ್ ವತಿಯಿಂದ ನೀಡಲಾದ ಪ್ರಶಂಸಾ ಪತ್ರವನ್ನು ಬಿ ಹ್ಯೂಮನ್ ನ ಎಲ್ಲಾ ಸದಸ್ಯರು ವೇದಿಕೆಯಲ್ಲಿ ಸ್ವೀಕರಿಸಿದರು. ಬಿ ಹ್ಯೂಮನ್ ಸಂಸ್ಥಾಪಕ ಆಸಿಫ್ ಡೀಲ್ಸ್ ರವರು ಸಂಸ್ಥೆಯ ಸೇವಾ ಪಯಣದಲ್ಲಿ ಹೃದಯ ತುಂಬಿ ಸಹಕರಿಸಿದ ಸರ್ವ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.