‘ಅಮಿತ ಮೊಬೈಲ್ ಉಪಯೋಗದಿಂದಾಗಿ ನನಗೆ ಸ್ನೇಹಿತರೇ ಇಲ್ಲದಂತಾಗಿದೆ, ದಯವಿಟ್ಟು ನನ್ನ ತಮ್ಮನಿಗೆ ಮೊಬೈಲ್ ಕೊಡಬೇಡಿ’ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ….
(www.vknews.in) : ಕರೋನಾ ಎಂಬ ಮಹಾಮಾರಿ ಪ್ರಪಂಚದಾದ್ಯಂತ ಕೋಟ್ಯಾಂತರ ಜೀವಗಳನ್ನು ತಿಂದು ತೇಗಿದೆ. ಮಾತ್ರವಲ್ಲ ಪ್ರಪಂಚದ ಆರ್ಥಿಕತೆಯನ್ನು ಹಾಗೂ ಜನರ ಮಾನಸಿಕತೆಯನ್ನು ದುರ್ಬಲಗೊಳಿಸಿದೆ. ಈ ಭಯಾನಕ ವೈರಸ್ ಇಡೀ ಮನುಕುಲವನ್ನೇ ಭಯದಲ್ಲಿ ಮುಳುಗುವಂತೆ ಮಾಡಿರುವುದು ಎಲ್ಲರಿಗೂ ತಿಳಿದಿರುವ ವಾಸ್ತವವಾಗಿದೆ. ಅದಾಗ್ಯೂ ಪ್ರಪಂಚದಲ್ಲಿ ಇದರ ಕರಿಛಾಯೆ ಮಾಯವಾಗುವುವ ಮುನ್ನವೇ ಈ ವೈರಸ್ ನ ದುಷ್ಪರಿಣಾಮಗಳು ಒಂದೊಂದಾಗಿ ಹೊರಬೀಳ ತೊಡಗಿದೆ. ಕರೋನಾ ಎಂಬ ವೈರಸ್ ಹೆಚ್ಚಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರ ಹಾಗೂ ವೃದ್ದರ ಜೀವಗಳನ್ನು ಬಲಿ ಪಡೆದರೆ ಈ ವೈರಸ್ ನ ಅಡ್ಡ ಪರಿಣಾಮಗಳು ಹೆಚ್ಚಾಗಿ ಮಕ್ಕಳು ಹಾಗೂ ವಿದ್ಯಾರ್ಥಿಗಳ ಜೀವಗಳ ಮೇಲೆ ಚೆಲ್ಲಾಟವಾಡ ತೊಡಗಿದೆ. ನಮ್ಮ ನೆರೆ ರಾಜ್ಯವಾದ ಕೇರಳದಿಂದ ಬಂದ ಈ ಸುದ್ಧಿಯನ್ನು ಎಂಥವರನ್ನೂ ಒಂದು ಕ್ಷಣ ಬೆಚ್ಚಿ ಬೀಳಿಸದೇ ಇರಲಾರದು.
ಹೌದು ಈ ಘಟನೆ ನಡೆದದ್ದು ಕೇರಳದ ಕೊಲ್ಲಂ ಜಿಲ್ಲೆಯ ಕಲ್ಲಂಬಲಮ್ ಎಂಬಲ್ಲಿ. ಆತ್ಮಹತ್ಯೆ ಮಾಡಿಕೊಂಡ ಜೀವ ಮೋಹನ್ ಎಂಬ 16ರ ಹರೆಯದ ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿದ್ದ ಈ ವಿದ್ಯಾರ್ಥಿನಿ ಬಹಳ ಪ್ರತಿಭಾವಂತೆ. 10ನೇ ತರಗತಿ ವರೆಗೆ ಪ್ರತೀ ಪರೀಕ್ಷೆಯಲ್ಲೂ 80% ಅಂಕ ಗಳಿಸಿ A+ ಮೂಲಕ ತೇರ್ಗಡೆಯಾಗುತ್ತಿದ್ದ ಈ ವಿದ್ಯಾರ್ಥಿನಿ ಪಿಯುಸಿಯಲ್ಲಿ ಹಠಾತ್ತನೆ ‘ ಡಲ್’ ಆಗಿ ಬಿಡುತ್ತಾಳೆ. ಶಾಲೆಯಲ್ಲಿ ಪ್ರಾದ್ಯಾಪಕರುಗಳ ಪಾಠಗಳು ಈಕೆಗೆ ತಲೆಗೆ ಹತ್ತುತ್ತಿರಲಿಲ್ಲ. ಪರೀಕ್ಷೆಗಳಲ್ಲಿ A+ ಬಿಡಿ ಕನಿಷ್ಠ ಉತ್ತೀರ್ಣಗುವುದು ಕೂಡ ಈಕೆಗೆ ಕಷ್ಟಸಾಧ್ಯವಾಗ ತೊಡಗಿತು. ಮನನೊಂದ ಬಾಲಕಿ ಮಾನಸಿಕವಾಗಿ ಕುಗ್ಗ ತೊಡಗಿದಳು. ಪೋಷಕರೂ ಕೂಡ ಚಿಂತಾಕ್ರಾಂತರಾದರು. ಮಗಳ ಏಕಾಏಕಿ ಹಿಮ್ಮುಖ ವರ್ತನೆಗೆ ಕಾರಣ ಹುಡುಕಲು ಪ್ರಯತ್ನಿಸಿದರೂ ಪೋಷಕರಿಗೆ ಯಾವುದೇ ಪ್ರಯೋಜನವಾಗಲಿಲ್ಲ.
ಆದರೆ ತಮ್ಮದೇ ತಪ್ಪಿನಿಂದಾಗಿ ತಮ್ಮ ಮಗಳು ‘ಡಲ್’ ಆಗುತ್ತಿದ್ದಾಳೆ ಎಂದು ಪೋಷಕರು ತಿಳಿಯದಾದರು. ಕರೋನಾ ವೈರಸ್ ಸಾಂಕ್ರಾಮಿಕದ ಸಮಯದಲ್ಲಿ ‘ಆನ್ ಲೈನ್’ ಕ್ಲಾಸಿಗಾಗಿ ತನ್ನ ತಾಯಿಯ ಮೊಬೈಲ್ ನ್ನು ಉಪಯೋಗಿಸುತ್ತಿದ್ದ ಈ ವಿದ್ಯಾರ್ಥಿನಿ ಕ್ಲಾಸ್ ಮುಗಿದ ನಂತರ ತಾಯಿಗೆ ಸುಳ್ಳು ಹೇಳಿ ‘ಕೊರಿಯನ್ ಬಾಂಡ್’ ಎಂಬ ಯೂಟ್ಯೂಬ್ ಚಾನೆಲ್ ನ್ನು ನೋಡುವ ಚಾಳಿ ಬೆಳೆಸಿದ ಬಾಲಕಿ ಯೂಟ್ಯೂಬ್ ಗೆ ಅಡಿಕ್ಟ್ ಆಗಿ ಬಿಡುತ್ತಾಳೆ. ಸ್ನೇಹಿತೆಯರೊಂದಿಗೆ ಆಟವಾಡದೆ ಸದಾ ಮೊಬೈಲ್ ನಲ್ಲಿ ಮುಳುಗುತ್ತಿದ್ದ ಬಾಲಕಿಯ ಈ ವರ್ತನೆಯಿಂದಾಗಿ ಈಕೆಯ ಸ್ನೇಹಿತರೆಲ್ಲಾ ದೂರ ಸರಿಯ ತೊಡಗಿದರು. ಕ್ರಮೇಣ ಬಾಲಕಿಗೆ ಒಂಟಿತನ ಕಾಡತೊಡಗಿತು. ಒಂದೆಡೆ ಕಲಿಕೆಯಲ್ಲಿ ಹಿಂದೆ ಇನ್ನೊಂದೆಡೆ ಸ್ನೇಹಿತೆಯರಿಲ್ಲದ ಬೇಸರದಿಂದಾಗಿ ಆಘಾತಗೊಂಡ ಬಾಲಕಿ ತನ್ಮ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
ಆತ್ಮಹತ್ಯೆಗೂ ಮುನ್ನ ಬಾಲಕಿ ಬರೆದ ಡೆತ್ ನೋಟ್ ಮಾತ್ರ ಎಲ್ಲರ ಮನ ಕಲಕುವಂತಿದೆ. ‘ ಕರೋನಾ ಸಮಯದಲ್ಲಿ ಆನ್ ಲೈನ್ ಕ್ಲಾಸ್ ಮುಗಿದ ನಂತರ ನಾನು ಅಪ್ಪ ಅಮ್ಮನಿಗೆ ತಿಳಿಯದಂತೆ ಯೂಟ್ಯೂಬ್ ನಲ್ಲಿ ಕೊರಿಯನ್ ಬಾಂಡ್ ನೋಡುತ್ತಿದ್ದೆ. ತಾಯಿಯ ಮೊಬೈಲ್ ಉಪಯೋಗಿಸುತ್ತಿದ್ದ ನಾನು ಹೆಚ್ಚು ಅಂಕ ಗಳಿಸಲು ಹೆಚ್ಚೆಚ್ಚು ಆನ್ ಲೈನ್ ಹೋಂ ವರ್ಕ್ ಮಾಡುತ್ತಿದ್ದೇನೆಂದು ಸುಳ್ಳು ಹೇಳುತ್ತಿದ್ದೆ. ಸದಾ ಮೊಬೈಲ್ ನಲ್ಲೇ ತಲ್ಲೀನಳಾಗುವ ನನ್ನ ವರ್ತನೆಯಿಂದಾಗಿ ನನ್ನ ಆತ್ಮೀಯ ಸ್ನೇಹಿತರೆಲ್ಲಾ ನನ್ನಿಂದ ದೂರವಾದರು. ನನ್ನೀ ವರ್ತನೆಯಿಂದಾಗಿ ಶಾಲಾ ಪರೀಕ್ಷೆಗಳಲ್ಲೂ ಕಡಿಮೆ ಅಂಕ ಬಂದಿದೆ. ನನ್ನ ತಂದೆ ತಾಯಿಯಲ್ಲಿ ನನ್ನ ಒಂದೇ ಒಂದು ವಿನಂತಿಯೆಂದರೆ ದಯವಿಟ್ಟು ನನ್ನ ತಮ್ಮನಿಗೆ ತಾವು ಮೊಬೈಲ್ ನೀಡಬೇಡಿ. ಅವನು ನನ್ನಂತೆ ಆಗದಿರಲೆಂದು ನಿಮ್ಮಲ್ಲಿ ನಾನು ಕೈಮುಗಿದು ಕೇಳಿ ಕೊಳ್ಳುತ್ತೇನೆ’ ಎಂದಾಗಿದೆ ಆಕೆ ಬರೆದ ಡೆತ್ ನೋಟ್ ಸಾರಾಂಶ.
ಆದುದರಿಂದ ನನ್ನೆಲ್ಲಾ ಪ್ರೀತಿಯ ಪೋಷಕರಲ್ಲಿ ನನ್ನ ಕಳಕಳಿಯ ವಿನಂತಿಯೇನೆಂದರೆ ಮಕ್ಕಳ ಮೇಲೆ ಪ್ರೀತಿಯಿರಲಿ., ಆದರೆ ಮಕ್ಕಳ ಮೇಲಿನ ಮಿತಿಮೀರಿದ ಪ್ರೀತಿಯಿಂದಾಗಿ ಅಥವಾ ಮಕ್ಕಳು ಹಠ ಮಾಡುತ್ತಾರೆ ಎಂಬ ಕಾರಣಕ್ಕಾಗಿ ಮಕ್ಕಳ ಕೈಯಲ್ಲಿ ಮೊಬೈಲ್ ನೀಡಬೇಡಿರಿ. ಆನ್ ಲೈನ್ ಕ್ಲಾಸ್ ಅಥವಾ ಹೋಂ ವರ್ಕ್ ನೆಪವೊಡ್ಡಿ ಮಕ್ಕಳು ಮೊಬೈಲ್ ಉಪಯೋಗಿಸುತ್ತಿದ್ದರೆ ತಮ್ಮ ಮಕ್ಕಳ ಮೇಲೆ ನಿಗಾವಿರಲಿ. ಮಕ್ಕಳಿಗೆ ಅರಿವಿಲ್ಲದೆ ಮಾಡುವ ಒಂದೇ ಒಂದು ತಪ್ಪು ಲಿಂಕ್ ಕ್ಲಿಕ್ ನಿಂದಾಗಿ ಅವರ ಭವಿಷ್ಯ ಹಾಳಾಗಬಹುದು. ಮೊಬೈಲ್ ಅಡಿಕ್ಟ್ ಎಂಬ ವೈರಸ್ ಗಿಂತ ಭಯಾನಕ ಹಾಗೂ ಎಂದೆಂದಿಗೂ ವಾಸಿಯಾಗದ ರೋಗ ನಿಮ್ಮ ಮಕ್ಕಳನ್ನು ಆತ್ಮಹತ್ಯೆಗೆ ಪ್ರಚೋದಿಸಬಹುದು.. ಎಚ್ಚರವಿರಲಿ
– ಎಸ್.ಎ.ರಹಿಮಾನ್ ಮಿತ್ತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.