ದೇಶದಲ್ಲಿಯೇ ಅತ್ಯುತ್ತಮವಾಗಿರುವ ಹಜ್ ಭವನ ಕರ್ನಾಟಕದಲ್ಲಿರುವುದು ಹೆಮ್ಮೆಯ ಸಂಗತಿ..
ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ನಗರದ ಹಜ್ ಭವನದಲ್ಲಿ ಹಜ್ಯಾತ್ರೆ -2022 ರ ಮೊದಲ ವಿಮಾನಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಎಲ್ಲಾ ಧರ್ಮಗಳು ಮಾನವೀಯತೆಯನ್ನು ಸಾರುತ್ತವೆ, ಮಾನವೀಯತೆಯ ಆಧಾರದ ಮೇಲೆ ನಡೆದುಕೊಂಡಾಗ ಭಗವಂತನಿಗೆ ಅತ್ಯಂತ ಪ್ರಿಯವಾಗುತ್ತದೆ ಎಂದಿದ್ದಾರೆ.
ಭಗವಂತನಿಗೆ ಪ್ರೀತಿಯಾಗಿರುವ ರೀತಿಯಲ್ಲಿ ನಾವು ಬದುಕಬೇಕು, ಇದೇ ಎಲ್ಲಾ ಧರ್ಮಗಳ ಸಾರವಾಗಿದೆ. ಹಜ್ಗೆ ಹೋಗಿ ಬಂದ ನಂತರ ಹಾಜಿಯಾಗಿ ಅತ್ಯಂತ ಶುದ್ಧ ಬದುಕನ್ನು ನಡೆಸಬೇಕು. ಆಗ ಮಾತ್ರ ಅಲ್ಲಿಗೆ ಹೋಗಿ ಬಂದದ್ದು ಸಾರ್ಥಕವಾಗುತ್ತದೆ ಎಂದು ಸಿಎಂ ಹೇಳಿದರು.
ಹಜ್ ಗೆ ತೆರಳಲಿರುವ ಎಲ್ಲಾ ಯಾತ್ರಾರ್ಥಿಗಳಿಗೆ ಶುಭಾಶಯಗಳನ್ನು ಕೋರಿದ ಸಿಎಂ, ಹಜ್ ಗೆ ಹೋಗುವವರೆಲ್ಲರೂ ನಾಡು ಸುಭಿಕ್ಷವಾಗಲಿ, ಅಭಿವೃದ್ಧಿಶೀಲವಾಗಲಿ ಎಂದು ಪ್ರಾರ್ಥನೆ ಮಾಡಬೇಕೆಂದು ತಿಳಿಸಿದರು. ದೇಶದಲ್ಲಿಯೇ ಅತ್ಯುತ್ತಮವಾಗಿರುವ ಹಜ್ ಭವನ ಕರ್ನಾಟಕದಲ್ಲಿರುವುದು ಹೆಮ್ಮೆಯ ಸಂಗತಿ ಎಂದರು.
ಒಟ್ಟು 450 ಮಂದಿ ಮೊದಲ ವಿಮಾನದ ಮೂಲಕ ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ. ಸಮಾರಂಭದಲ್ಲಿ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಶಾಪಿ ಸಾದಿ, ಹಜ್ ಕಮಿಟಿ ಅಧ್ಯಕ್ಷ ರವುಫ ಉದ್ದೀನ್ ಕಚೇರೆವಾಲೆ, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್, ಸಂಸದ ನಾಸೀರ್ ಹುಸೇನ್, ಮಾಜಿ ಸಚಿವರಾದ ಯು ಟಿ ಖಾದರ್, ರೋಷನ್ ಬೇಗ್ ಹಜ್ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.