ಕೋಲಾರ( ವಿಶ್ವಕನ್ನಡಿಗ ನ್ಯೂಸ್) : ಜೆಡಿಎಸ್ನಿಂದ ನನ್ನನ್ನು ೭ ತಿಂಗಳ ಹಿಂದೆಯೇ ಉಚ್ಛಾಟನೆ ಮಾಡಿರುವುದಾಗಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ . ಹೀಗಿರುವಾಗ ರಾಜ್ಯಸಭೆ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದೇನೆ , ನಾನು ಯಾರಿಗೆ ಮತ ಹಾಕಿದರೆ ಅವರಿಗೇನು ? ನನ್ನನ್ನು ಕೇಳಲು ಕುಮಾರಸ್ವಾಮಿ ಮತ್ತು ಜೆಡಿಎಸ್ ಮುಖಂಡರಿಗೆ ಯಾವ ಹಕ್ಕಿದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಪ್ರಶ್ನಿಸಿದರು.
ಶನಿವಾರ ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು , ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ . ಹೀಗಿರುವಾಗ ನಾನು ಕಾಂಗ್ರೆಸ್ , ಬಿಜೆಪಿ ಸೇರಿದಂತೆ ಯಾವ ಪಕ್ಷಕ್ಕೆ ಬೇಕಾದರೂ ಹೋಗಬಹುದು . ಅದು ನನ್ನಿಷ್ಟ ನನ್ನನ್ನು ಪ್ರಶ್ನಿಸುವ ಹಕ್ಕು ಅವರಿಗೆ ಇಲ್ಲವೆಂದು ಸ್ಪಷ್ಟಪಡಿಸಿದರು.
ಉಚ್ಚಾಟನೆ ಮಾಡಿದ್ದೀವಿ ಎಂದು ಹೇಳುತ್ತಿದ್ದಾರೆಯೇ ಹೊರತು ನನಗೆ ಆ ಪತ್ರ ಈವರೆಗೂ ಸಿಕ್ಕಿಲ್ಲ . ಕೊಟ್ಟರೆ ಕೊಡಲಿ ಇಲ್ಲದಿದ್ದರೆ ಇಟ್ಟುಕೊಂಡು ಪೂಜೆ ಮಾಡಲಿ. ಅದರ ಅವಶ್ಯಕತೆಯೂ ನನಗಿಲ್ಲ ಇದನ್ನೆಲ್ಲ ಅರಿಯದೆ ನನ್ನ ಮನೆಯ ಬಳಿ ಬಂದು ಜೆಡಿಎಸ್ನವರು ಪ್ರತಿಭಟನೆ ಮಾಡಿರುವುದರಲ್ಲಿ ಅರ್ಥವೇ ಇಲ್ಲ . ಆದರೂ ಅವರಿಗೆ ಒಳ್ಳೆಯದು ಆಗಲಿ ಎಂದು ತಿರುಗೇಟು ನೀಡಿದರು.
ಇನ್ನು ೨೦೧೮ ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಲ್ಲಿ ಕೋಲಾರ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಗತಿ ಇರಲಿಲ್ಲ . ಆ ಕಾರಣಕ್ಕಾಗಿ ನನಗೆ ಬಿ ಫಾರಂ ಕೊಟ್ಟಿದ್ದಾರೆಯೇ ಹೊರತು ಬೇರೇನೂ ಅಲ್ಲ . ನಾನು ಸತತ ೪ ಬಾರಿ ಶಾಸಕನಾಗಿದ್ದವನು , ಧರ್ಮ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ಸಚಿವನಾಗಿದ್ದವನು ಎಂದರು. ನಾನು ಸಚಿವನಾಗಿದ್ದ ಸಮಯದಲ್ಲಿ ಆಗ ಇನ್ನೂ ಎಚ್.ಡಿ.ಕುಮಾರಸ್ವಾಮಿ ಶಾಸಕರೂ ಆಗಿರಲಿಲ್ಲ. ಹೀಗಿರುವಾಗ ನನ್ನ ಸೀನಿಯಾರಿಟಿಯನ್ನೂ ನೋಡದೇ ಜೆಡಿಎಸ್ ಪಕ್ಷದಲ್ಲಿ ಸಚಿವ ಸ್ಥಾನಮಾನ ನೀಡಲು ನಿರ್ಲಕ್ಷ್ಯ ತೋರಿದರು . ನಮ್ಮ ಕೋಲಾರ ಭಾಗದವರು ಮತ್ತು ಸಂಬಂಧಿಕರಿಗೆ ಹೆಚ್ಚಿನ ಆದ್ಯತೆ ನೀಡಿದ್ದರು . ಅವರ ನಡತೆಗಳು ನ್ಯಾಯಯುತವಾಗಿ ಇರದೆ ಡಿಕ್ಟೇಟರ್ ರೀತಿ ಇದ್ದವು ಎಂದು ಅಸಮಧಾನ ವ್ಯಕ್ತಪಡಿಸಿದರು.
ಇಂಚರ ಗೋವಿಂದರಾಜು ಎಂಎಲ್ಸಿ ಆಗುವುದಕ್ಕಾಗಿ ಪ್ರತಿಯೊಬ್ಬ ಶಾಸಕರಿಗೂ ತಲಾ ೫೦ ಲಕ್ಷರೂಗಳನ್ನು ನೀಡಿದ್ದಾರೆ. ನನಗೂ ಕೊಡುವುದಕ್ಕೆ ಬಂದಿದ್ದರು , ನಾನು ನಿರಾಕರಿಸಿದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ಆರೋಪಿಸಿದರು. ಶಿರಸಿಯಲ್ಲಿ ಕೆಎಸ್ಆರ್ಟಿಸಿ ನೌಕರನಾಗಿದ್ದ ಇಂದಿನ ಎಂಎಲ್ಸಿ ಇಂಚರ ಗೋವಿಂದರಾಜುರನ್ನು ಟೀಕ್ ಮತಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಅವರ ಅಣ್ಣ ಬಲರಾಮಣ್ಣ ಒತ್ತಾಯದ ಮೇರೆಗೆ ಕೋಲಾರದ ಕಡೆಗೆ ವರ್ಗಾವಣೆ ಮಾಡಿಸಿಕೊಟ್ಟಿದ್ದೆ . ಎಲ್ಲವನ್ನು ಮರೆತು ಈಗ ನನ್ನನ್ನು ನೀಚ ಅದು ಇದು ಎಂದು ಮಾತನಾಡುತ್ತಾರೆ ಎ೦ದರೆ ನಾನೇನು ಹೇಳಲಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದರು.
ಈ ಎಲ್ಲ ವಿಚಾರಗಳಿಂದಾಗಿಯೇ ನಾನು ಜೆಡಿಎಸ್ ಪಕ್ಷ ತೊರೆದು , ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದೆ. ಅಲ್ಲದೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಗೆಲುವು ಸಾಧಿಸಲು ಮಾಜಿ ಸ್ಪೀಕರ್ ಶ್ರೀನಿವಾಸಪುರ ಶಾಸಕ ಕೆ.ಆರ್. ರಮೇಶ್ ಕುಮಾರ್ ಸಾಕಷ್ಟು ಶ್ರಮಿಸಿದ್ದಾರೆ ಎಂದು ಹೇಳಿದರು. ವಿಚಾರವಾದಿಗಳು , ಬುದ್ಧಿಜೀವಿಗಳು ಆಗಿರುವ ರಮೇಶ್ ಕುಮಾರ್ ಅವರೊಂದಿಗೆ ಸದ್ಯ ನಾನು ಗುರುತಿಸಿಕೊಂಡಿದ್ದೇನೆ. ನನಗೆ ಕಾಂಗ್ರೆಸ್ನಿಂದ ಟಿಕೆಟ್ ಸಿಗಲಿ ಬಿಡಲಿ , ನಾನು ಮೂಲ ಕಾಂಗ್ರೆಸ್ಸಿಗ , ಪಕ್ಷದಲ್ಲೇ ಇರುತ್ತೇನೆ ಎಂದ ಅವರು , ನನ್ನ ಪುತ್ರ ಹೋಳೂರು ಜಿಪಂ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಲು ಎಲ್ಲ ಸಿದ್ಧತೆ ನಡೆಸಿರುವುದಾಗಿಯೂ ತಿಳಿಸಿದರು.
೨೦೧೮ ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ತಮಗೆ ಟಿಕೆಟ್ ಕೈತಪ್ಪಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು , ಆಗ ಇದ್ದ ಮಹಾನುಭಾವನ ( ಕೆ.ಎಚ್.ಮುನಿಯಪ್ಪ ) ಕೈವಾಡದಿಂದಾಗಿ ನನಗೆ ಕಾಂಗ್ರೆಸ್ನಲ್ಲಿ ಅವಕಾಶ ಸಿಗಲಿಲ್ಲ . ಕೊನೆಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಆತನೇ ಸೋತನು. ಈಗ ಬುದ್ಧಿ ಬಂದಿದೆ , ಸಿಕ್ಕಿದ ವೇಳೆ ಗೌರವದಿಂದ ಮಾತನಾಡಿಸುತ್ತಿದ್ದಾನೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕೆ.ಶ್ರೀನಿವಾಸಗೌಡರ ಬೆಂಬಲಿಗರಾದ ಕೆ.ವಿ.ದಯಾನಂದ್ , ಕೆಂಬೋಡಿ ನಾರಾಯಣಗೌಡ , ಅನ್ವರ್ ಪಾಷ ಮತ್ತಿತರರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.