ಕಡಬ (www.vknews.in)ಗೋಳಿತ್ತೊಟ್ಟು: ಇಲ್ಲಿನ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಇಕೋಕ್ಲಬ್ ವತಿಯಿಂದ ಪರಿಸರ ದಿನಾಚರಣೆಯ ಅಂಗವಾಗಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ “ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ಹಾಗೂ ಬೀಜ ಬಿತ್ತನೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಗುರುಗಳಾದ ಶ್ರೀಮತಿ ಜಯಂತಿ ಬಿ.ಎಂ.ಇವರು ಪ್ರಾಸ್ತಾವಿಕವಾಗಿ ಮಾತಾಡಿ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿಗಳಾದ (DRF) ಶ್ರೀ ಸಂದೀಪ್ ಕೆ ಇವರು ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ನೀಡುವುದರೊಂದಿಗೆ 2022ನೇ ಸಾಲಿನ ವಿಶ್ವ ಪರಿಸರ ದಿನಾಚರಣೆಯ ಘೋಷವಾಕ್ಯ “ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಸುಸ್ಥಿರವಾಗಿ ಬದುಕುವುದು” ಇದರ ಔಚಿತ್ಯವನ್ನು ತಿಳಿಹೇಳುವುದರ ಮೂಲಕ ಪರಿಸರವನ್ನು ನಮಗೆ ನಮ್ಮ ಪೂರ್ವಜರಿಂದ ಸಾಲವಾಗಿ ಪಡೆದುಕೊಂಡಿದ್ದೇವೆ. ಆ ಸಾಲವನ್ನು ಸುಸ್ಥಿರವಾಗಿ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಬಿಟ್ಟುಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂಗ್ರಹಿಸಿದ ಹಾಗೂ ಅರಣ್ಯ ಇಲಾಖೆಯು ನೀಡಿದ ಸುಮಾರು ನೂರಕ್ಕಿಂತಲೂ ಹೆಚ್ಚಿನ ವಿವಿಧ ಜಾತಿಯ ಮರಗಳ ಬೀಜಗಳನ್ನು ಶಾಲಾ ಸಮೀಪದ ಅರಣ್ಯದಲ್ಲಿ ಬಿತ್ತನೆ ಮಾಡಲಾಯಿತು.ಕಾರ್ಯಕ್ರದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀ ಗೋಪಾಲ ಗೌಡ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಜನಾರ್ಧನ ಗೌಡ ಪಠೇರಿ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಬಾಬು ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಜೀವಿತ, ಎ.ಪಿ.ಎಂ.ಸಿ ಸದಸ್ಯರಾದ ಶ್ರೀ ಕುಶಾಲಪ್ಪ ಗೌಡ ಕಲ್ಲಡ್ಕ, ಅರಣ್ಯ ಇಲಾಖೆಯ ಗಾರ್ಡ್ ಶ್ರೀ ರಾಜೇಶ್ ಸೇರಿದಂತೆ ಶಾಲಾ ಎಸ್. ಡಿ.ಎಂ.ಸಿ ಸದಸ್ಯರು ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಸಹಕರಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಸಿಹಿತಿಂಡಿಯನ್ನು ಹಂಚಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.