(www.vknews.in) : ಬುಡಕಟ್ಟು ಜನಾಂಗದ, ಮುಸ್ಲಿಂ ಹೆಸರಿನ,ದಲಿತ ವರ್ಗದ ಒಬ್ಬರನ್ನು ಶೋಕಿಗಾಗಿ ರಾಷ್ಟ್ರಪತಿ ಮಾಡಿದಾಕ್ಷಣ ಆ ಸಮುದಾಯ ಉದ್ದಾರ ಆಗಲು ಸಾಧ್ಯವಿಲ್ಲ. ದೇಶದಲ್ಲಿರುವ ಪ್ರತಿಯೊಂದು ಸಮಾಜವು ಅವರವರ ಶ್ರಮವನ್ನು ತಮ್ಮ ಜನಾಂಗದ ಅಭಿವೃದ್ದಿಗಾಗಿ ಆದಷ್ಟು ವಿನಿಯೋಗಿಸಿದರೆ ಮಾತ್ರ ಆಯಾ ಸಮಾಜಕ್ಕೆ ಮುಂದೆ ಬರಲು ಸಾದ್ಯ. ಈ ನಿಟ್ಟಿನಲ್ಲಿ ದೇಶದಲ್ಲಿರುವ ಕೆಲವೊಂದು ಇತರ ಸಮಾಜದಿಂದ ಮುಸ್ಲಿಮರಿಗೆ ಸಾಕಷ್ಟು ಕಲಿಯಲಿಕ್ಕಿದೆ. ಸಮಾಜದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ, ಅವರಿಗೆ ಉತ್ತಮ ರೀತಿಯ ಮಾರ್ಗ ದರ್ಶನ ನೀಡುವ ಕೆಲಸ ವ್ಯವಸ್ಥಿತ ರೀತಿಯಲ್ಲಿ ಆಗ ಬೇಕಿದೆ. ಇತರ ಕೆಲ ಸಮಾಜವು ಇದನ್ನು ವ್ಯವಸ್ಥಿತವಾಗಿ ಮಾಡುತ್ತಿದೆ.
ಇಂದಿನ ಆಧುನಿಕ ಜಗತ್ತಿನಲ್ಲಿ ಸಮಾಜದ ಪ್ರಗತಿಯ ಮಾನದಂಡ ಶಿಕ್ಷಣದಲ್ಲಿ ಅಡಗಿದೆ ಎಂಬುದನ್ನು ನಾವು ಮೆರೆಯಬಾರದು. ಪ್ರತೀ ಮೊಹಲ್ಲಾದ ಮುಖಂಡರು ಆಯಾ ವ್ಯಾಪ್ತಿಯ ಮಕ್ಕಳನ್ನು ಒಟ್ಟು ಸೇರಿಸಿ ಪ್ರೋತ್ಸಾಹಿಸುವ ಅಗತ್ಯ ಇದೆ. ಈಗಾಗಲೇ ಪಿಯು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಮಕ್ಕಳನ್ನು ಜಮಾತ್ ಸಮಿತಿ ಕರೆದು ಆರ್ಥಿಕವೂ ಸೇರಿದಂತೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡ ಬೇಕು.
ಅದೇ ರೀತಿ ದೊಡ್ಡ ವಿರೋಧದ ನಡುವೆಯೂ ವಿವಾದಿತ ಕೇಂದ್ರದ ಅಗ್ನಿ ಪಥ್ ಯೋಜನೆ ಜಾರಿಗೆ ಬಂದರೆ ನಮ್ಮ ಮಕ್ಕಳನ್ನು ಅದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸುವ ಮೂಲಕ ಪ್ರಬುದ್ದತೆ ತೋರಿಸ ಬೇಕಾಗಿದೆ. ಸರಕಾರದ ಸವಲತ್ತನ್ನು ಪಡೆದು ಮುಖ್ಯವಾಹಿನಿಯಲ್ಲಿ ಗುರುತಿಸದಿದ್ದರೆ ಅದು ಸಮಾಜಕ್ಕೆ ಮಾರಕವಾಗಲಿದೆ. ವಿವಿಧ ಕ್ಷೇತ್ರದಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರಸ್ತುತ ಪಡಿಸುತ್ತಿರುವವರ ಸೇವೆಯನ್ನು ಸಮಾಜ ಸದುಪಯೋಗ ಪಡಿಸಿ ಕೊಳ್ಳಬೇಕಿದೆ.
ದೇವನು ಎಲ್ಲಾ ಜನರಿಗೆ ಒಂದೇ ರೀತಿಯ ಪ್ರತಿಭೆಯನ್ನು ನೀಡಿಲ್ಲ. ಬೇರೆ ಬೇರೆ ರೀತಿಯಲ್ಲಿ ಪ್ರತಿಯೊಬ್ಬನಿಗೂ ಒಂದೊಂದು ಶಕ್ತಿ ನೀಡಿದ್ದಾನೆ. ಒಂದು ಸಮಾಜದ ಉದ್ದಾರವೆಂದರೆ ಅಲ್ಲಾಹನು ಪ್ರತಿಯೊಬ್ಬನಿಗೂ ನೀಡಿದ ಶಕ್ತಿಯನ್ನು ಒಳಿತಿಗಾಗಿ ವಿನಿಯೋಗಿಸುವುದಾಗಿದೆ. ಪ್ರತಿಭಾವಂತರ ಕಾಲೆಳೆಯುವ ಸಮಾಜ ಯಾವತ್ತೂ ಉದ್ದಾರವಾಗಲ್ಲ. ಇತರರ ಏಳಿಗೆಯನ್ನು ಕಂಡು ಅದಕ್ಕೆ ಖುಷಿ ಪಡುವ ಸಂಸ್ಕೃತಿ ಎಲ್ಲಿದೆಯೊ ಅಲ್ಲಿ ಐಶ್ವರ್ಯ ತುಂಬಿ ತುಳುಕುತ್ತದೆ. ಜೀವನದಲ್ಲಿ ಪ್ರೀತಿ, ಸತ್ಕರ್ಮಗಳನ್ನು ಸಂಪಾದಿಸಿ, ಅಭಿವೃದ್ದಿ ಪಡಿಸಿ ಅದನ್ನು ಪರಲೋಕಕ್ಕಾಗಿ ಕಾಯ್ದಿರಿಸುವುದೇ ನಮ್ಮ ಬದುಕಿನ ಗುರಿಯಾಗಿರ ಬೇಕು. ಒಳಿತಿಗಾಗಿನ ನಮ್ಮ ಓಟದ ಸ್ಪರ್ದೆಯು ಗುರಿಯನ್ನು ಮುಟ್ಟುವ ತನಕ ಕಿವಿಮುಚ್ಚಿ ಕೊಂಡೇ ಆಗಿರ ಬೇಕು.
ಅಂದರೆ ಯಾವುದೇ ಟೀಕೆ ಟಿಪ್ಪಣಿಗಳಿಗೆ ಕಿವಿಗೊಡಬಾರದು. ಒಂದು ನಿರ್ದಿಷ್ಟ ಗುರಿಮುಟ್ಟಿದ ನಂತರ ಮತ್ತೆ ಬಾಯಿ ಮುಚ್ಚಿ ಇನ್ನೊಂದು ಗುರಿ ಸಾಧಿಸಲು ಪಣ ತೊಡಬೇಕು. ಒಂದು ಗುರಿ ಮುಟ್ಟಿದ್ದನ್ನು ಮತ್ತೆ ಡಂಗುರ ಸಾರಬಾರದು. ಹೀಗೆ ಒಳಿತಿಗಾಗಿ ಬದುಕುವ ಜೀವನದ ಕಲೆಯನ್ನು ಸ್ವಾಯತ್ತೆ ಪಡಿಸಿ ದೇವನು ನೀಡಿದ ಆಯುಷ್ಯವನ್ನು ಮುಗಿಸಿ ಜಗತ್ತಿನಿಂದ ನಿರ್ಗಮಿಸುವವನೇ ಬುದ್ದಿವಂತ.
“ಭೂಮಿಯಲ್ಲಿ ಅಲ್ಲಾಹನು ನಿಮ್ಮನ್ನು ಅವನ ಪ್ರತಿನಿಧಿಯನ್ನಾಗಿ ಮಾಡಿ ಕೆಲವರಿಗೆ ಇನ್ನು ಕೆಲವರಿಗಿಂತ ಸ್ಥಾನಮಾನಗಳಲ್ಲಿ ಉನ್ನತಿಯನ್ನು ನೀಡಿದನು. ಇದು ನಿಮ್ಮನ್ನು ಕೇವಲ ಪರೀಕ್ಷೆ ಮಾಡಲಿಕ್ಕೆ ಮಾತ್ರವಾಗಿದೆ” (ಕುರ್ಅನ್)
– ಎಸ್ ಬಿ ದಾರಿಮಿ ಅಧ್ಯಕ್ಷರು ಜಂಇಯ್ಯತ್ತುಲ್ ಖುತಬಾ ದ ಕ ಜಿಲ್ಲೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.