ರಾಜಭೋಗದ ದರ್ಪ, ಸಿರಿಸಂಪತ್ತಿನ ದರ್ಪ |
ಬುದ್ಧಿವಂತಿಕೆಯ ದರ್ಪ, ದೊಡ್ಡವನೆಂಬ ದರ್ಪ |
ಜೀವ ಹೋದಮ್ಯಾಲೆ ಏನಿಲ್ಲೋ ಮರುಳೆ ||
(www.vknews.in) : ರಾಜಕೀಯ ಎಂದರೆಯೇ ಒಂದು ಸಂಚಲನ. ಉತ್ತುಂಗ ದರ್ಜೆಯ ರಾಜಕೀಯ ವ್ಯಕ್ತಿ ಒಂದು ಸ್ಥಳಕ್ಕೆ ಧಾವಿಸುತ್ತಿದ್ದಾರೆ ಎಂದು ತಿಳಿದಾಕ್ಷಣ ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ ಎಲ್ಲಿಲ್ಲದ ಶಕ್ತಿ ಬಂದು ಬಿಡುತ್ತದೆ. ರಸ್ತೆಗಳು ದುರಸ್ತಿಗೊಳ್ಳುತ್ತವೆ. ವರ್ಷಾನುಗಟ್ಟಲೆಗಳಿಂದ ನಿಂತು ಹೋಗಿರುವ ನೀರಿನ ಕಾರಂಜಿಗಳು ಕೆಲಸ ಮಾಡಲು ಪ್ರಾರಂಭಿಸುತ್ತವೆ. ರಸ್ತೆಗಳು ಕಸಕಡ್ಡಿ ಮುಕ್ತವಾಗುತ್ತವೆ. ಫುಟ್ಪಾತುಗಳಿಗೆ ಬಣ್ಣ ಬಳೆಯಲಾಗುತ್ತದೆ. ರಸ್ತೆಗಳಿಗೆ ರಾತ್ರೋರಾತ್ರಿ ಡಾಂಬರೀಕರಣ ಮಾಡಲಾಗುತ್ತದೆ. ಟ್ರಾಫಿಕ್ ಪೊಲೀಸರಂತೂ ಕರೆಂಟು ಬಡಿದ ಹಾಗೆ ಕೆಲಸ ಮಾಡುತ್ತಾರೆ. ರಾಜಕೀಯ ವ್ಯಕ್ತಿಗಳಿಗಾಗಿ ದೈನಂದಿನ ಪ್ರಯಾಣಿಕರ ಪ್ರಯಾಣದ ದಿಕ್ಕನ್ನೇ ಬದಲಿಸಲಾಗುತ್ತದೆ. ಬಸ್ಸುಗಳ, ಕಾರುಗಳ, ಬೈಕುಗಳ ಸವಾರರು ಪರದಾಡುತ್ತಿದ್ದರೂ ಪರವಾಗಿಲ್ಲ, ನಾವು ಗೌರವ, ಸೇವೆ ಎಂಬ ಹೆಸರಿನಲ್ಲಿ ಗುಲಾಮಗಿರಿ ಮಾಡುವುದನ್ನು ಬಿಡುವುದಿಲ್ಲ. ವಿಶೇಷ ಪೂಜೆಗಳ, ಪುರಸ್ಕಾರಗಳ, ಸನ್ಮಾನಗಳ ಸಮಾರಂಭಗಳು ಏರ್ಪಡುತ್ತವೆ.
ಇಡೀ ಜೀವನದಲ್ಲಿ ಪೋಷಕರ, ಗುರುಹಿರಿಯರ ಸೇವೆ ಮಾಡಿಲ್ಲದವರು ಅಧಿಕಾರಿಗಳ ಸೇವೆಗೆ ಕೈಕಟ್ಟಿ, ತಲೆ ಬಗ್ಗಿಸಿ ನಿಂತಿರುತ್ತಾರೆ. ಒಬ್ಬ ಎಂ.ಎಲ್.ಎ. ಫೋನ್ ಮಾಡಿದರೆ ಸಾಕು ಇಡೀ ಪೊಲೀಸ್ ಠಾಣೆ ನಡುಗಿ ಹೋಗುತ್ತೆ. ಸಾಮಾನ್ಯ ಜನರ ನಡುವೆ ಅವರ ವ್ಯವಹಾರ ಹೇಗಿರುತ್ತೆ ಎಂಬುದು ಎಲ್ಲಿರಿಗೂ ಗೊತ್ತಿರುವ ವಿಷಯ. ಪೊಲೀಸ್ ಅಧಿಕಾರಿಗಳಿಗೆ ರಾಜಕೀಯ ವ್ಯಕ್ತಿಗಳಿಂದ ಒಂದು ರೀತಿಯ ಭಯ ಇದ್ದರೆ, ರಾಜಕೀಯ ವ್ಯಕ್ತಿಗಳಿಗೂ ಒಂದು ರೀತಿಯ ಭಯ ಕಾಡುತ್ತಿರುತ್ತದೆ. ಅವರ ಮೇಲೆ ಇರುವ ಭೂಪತಿಗಳು ಯಾವ ಹಗರಣದಲ್ಲಿ ಅವರನ್ನು ಸಿಲುಕಿಸಿ ಬಿಡುತ್ತಾರೋ, ಅವರ ಬೇನಾಮಿ ಆಸ್ತಿಪಾಸ್ತಿಗಳ ಮೇಲೆ ಏನು ಕ್ರಮ ತೆಗೆದುಕೊಂಡು ಬಿಡುತ್ತಾರೆಯೋ, ಅನೈತಿಕ ಸಂಬಂಧಗಳ ವಿಡಿಯೋ ಎಲ್ಲಿ ವೈರಲ್ ಮಾಡಿಬಿಡುತ್ತಾರೋ, ನನ್ನ ಗೌಪ್ಯ ಜಾಗಗಳ ಮೇಲೆ ಎಲ್ಲಿ ರೇಡ್ ಮಾಡಿಸಿಬಿಡುತ್ತಾರೋ, ನನ್ನ ಘನಕಾರಿ ಕಾರ್ಯಗಳ ಗಂಟುಮೂಟೆ ಜನರ ಮುಂದೆ ಬಿಚ್ಚಿಟ್ಟು ಬಿಟ್ಟರೆ ಮುಂದಿನ ಚುನಾವಣೆಯಲ್ಲಿ ನನ್ನ ಗತಿ ಏನು? ಇತ್ಯಾದಿ ಇತ್ಯಾದಿ.
ಅಧಿಕಾರದದ ಬಲ, ಬಾಹುಬಲ, ಹಣಬಲ ಯಾರ ಹತ್ತಿರವಿರುತ್ತದೆಯೋ ಅವರೇ ಈ ಪಗಡೆ ಆಟದಲ್ಲಿ ಗೆಲ್ಲುವುದು. ಬಡವನ ಕೋಪ ದವಡೆಗೆ ಮೂಲ. ಸಮಾಜದಲ್ಲಿ ಎಲ್ಲವೂ ಮಾರಾಟಕ್ಕಿದೆ. ಇಲ್ಲಿ ಏನು ಬೇಕಾದರೂ ಖರೀದಿಸಬಹುದು. ಮಾಧ್ಯಮಗಳನ್ನು ಖರೀದಿಸಬಹುದು, ಕಾನೂನನ್ನು ಖರೀದಿಸಬಹುದು, ಧರ್ಮಗುರುಗಳನ್ನು ಖರೀದಿಸಬಹುದು, ಲೇಖಕರನ್ನು ಖರೀದಿಸಬಹುದು, ಬುದ್ಧಿ ಜೀವಿಗಳನ್ನು ಖರೀದಿಸಬಹುದು, ಮೌನವನ್ನು ಖರೀದಿಸಬಹುದು, ಅದೆಲ್ಲ ಇರಲಿ, ನಿಯ್ಯತ್ತು ಸಹ ಮಾರಾಟಕ್ಕಿದೆ. ಉಸಿರೊಂದು ಬಿಟ್ಟರೆ ಎಲ್ಲವನ್ನು ಖರೀದಿಸುವ ಖದೀಮರ ನಡುವೆ ಪ್ರಪಂಚ ಸಾಗುತ್ತಿದೆ. ಎಲ್ಲರೂ ಬಿಕಾವ್ ಅಲ್ಲ ಆದರೆ ಅಂಥವರ ಪ್ರಮಾಣ ಅತೀ ಕಡಿಮೆ.
ನಾವು ಅನೇಕ ಸಿನಿಮಾಗಳಲ್ಲಿ ನೋಡಿದ್ದೇವೆ. ರಾಜಕೀಯ ವ್ಯಕ್ತಿಗಳು ಚುನಾವಣೆ ಗೆಲ್ಲಲು ಹರಸಾಹಸ ಪಡುತ್ತಾರೆ. ಕೋಮುಗಲಭೆಗಳಾಗಿರಬಹುದು, ಬಾಂಬು ಸ್ಪೋಟಗಳಾಗಿರಬಹುದು, ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡಿಸುವುದಾಗಿರಬಹುದು, ಆರೋಪ ಪ್ರತ್ಯಾರೋಪಗಳಲ್ಲಿ ಜನರನ್ನು ದಿಕ್ಕು ತಪ್ಪಿಸುವುದಾಗಿರಬಹುದು, ಧರ್ಮದ ಮತ್ತು ಜಾತಿಯ ಹೆಸರಲ್ಲಿ ಜನರನ್ನು ಬಳಸಿಕೊಳ್ಳುವುದಾಗಿರಬಹದು ಇತ್ಯಾದಿ ಇತ್ಯಾದಿ. ಇದು ಕೇವಲ ಸಿನಿಮಾಗಳಲ್ಲಿ ಮಾತ್ರ ನಡೆಯುತ್ತದೆಯೋ ಅಥವಾ ನಮ್ಮ ಸುತ್ತಮುತ್ತಲೂ ನಡೆಯುತ್ತಿದೆಯೋ…! ಯಾರಿಗೂ ಉತ್ತರ ಕೊಡಲು ಇಷ್ಟವಿಲ್ಲ. ಭಯ. ಊರಿನ ಉಸಾಬರಿ ನಮಗೇಕೆ ಸ್ವಾಮಿ, ಅಲ್ಲವೇ ?
ಚುನಾವಣೆ ಹತ್ತಿರ ಬಂದಂತೆ ಹೊಸಹೊಸ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ. ಜನರಿಗೆ ಸಮಸ್ಯೆಗಳ ಜೊತೆ ಬದುಕಿ ಅಭ್ಯಾಸವಾಗಿಬಿಟ್ಟಿದೆ. ತಲೆ ಕೆಡಿಸಿಕೊಳ್ಳುವುದಿಲ್ಲ. ಕೆಲವರು ತಾರ್ಕಿಕವಾಗಿ ಏನು ಯೋಚಿಸದೆ ರಾಜಕೀಯ ವ್ಯಕ್ತಿಗಳು ಬೀಸಿರುವ ಬಲೆಗೆ ಗುರಿಯಾಗುತ್ತಾರೆ. ಮನಸ್ಸುಗಳಲ್ಲಿ ವಿಷಬೀಜದ ಮರಗಳು ಬೆಳೆಯುತ್ತಿರುವುದನ್ನು ಗಮನಿಸುವುದೇ ಇಲ್ಲ. ಸರಿತಪ್ಪು ಏನೆಂಬುದನ್ನು ಯೋಚಿಸದೆ ಕಣ್ಣಿದ್ದು ಕುರುಡರಾಗಿ ಬಲಿಪಶುಗಳಾಗಿ ಹೋಗುತ್ತಾರೆ. ಉತ್ತಮ ಸಮಾಜದ ಕನಸು ಕನಸಾಗಿಯೇ ಉಳಿದು ಬಿಡುತ್ತದೆ.
ಹೆಜ್ಜೆ ಹೆಜ್ಜೆಗೂ ಭ್ರಷ್ಟಾಚಾರ, ಜಗದಲಿ ರೋಸಿಹೋದ, ಆನಾಥ ಮನಸ್ಸುಗಳಲ್ಲಿ ಸಿಟ್ಟು, ನಾಳೆಯೋ ನಾಳಿದ್ದೋ…ಮುಕ್ತಿಯ ಕನಸು. ಕ್ರಾಂತಿಯ ಕನಸು ಭ್ರಮೆ, ಪ್ರಕೃತಿಯೂ ಮೂಕ, ಏನಾಗುವುದೋ ಈ ಬನದ ಭವಿಷ್ಯ, ಪ್ರತಿಯೊಂದು ಕೊಂಬೆಯ ಮೇಲೆ, ಕುಳಿತಿದೆ ವಿಷಸರ್ಪ, ಆದರೂ, ಕತ್ತಲೆಯ ಹಾದಿಯಲ್ಲಿ, ಆಸೆ ಆಕಾಂಕ್ಷೆಗಳ ದೀಪ, ಎದುರಾಗುವ ಪ್ರತಿ ನೆರಳಲ್ಲೂ, ನ್ಯಾಯಕ್ಕಾಗಿ ಹುಡುಕಾಟ.
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.