ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಯಲ್ಲಾಪುರದ ಮಾಜಿ ಶಾಸಕ, ಬಿಜೆಪಿಯ ಹಿರಿಯ ನಾಯಕ ವಿ.ಎಸ್. ಪಾಟೀಲ್ ಮತ್ತು ಶ್ರೀನಿವಾಸ್ ಭಟ್ ಅವರು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಪಾಟೀಲ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಪಕ್ಷದ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂಧರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ವಿ.ಎಸ್. ಪಾಟೀಲ್ ಅವರು ನಮ್ಮ ಜತೆ ವಿಧಾನಸಭೆಯಲ್ಲಿ ಕೆಲಸ ಮಾಡಿದ್ದಾರೆ. ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಆಗಿದ್ದ ಸಂದರ್ಭದಲ್ಲಿ ಇವರಿಗೆ ಅತ್ಯುತ್ತಮ ಶಾಸಕ ಎಂಬ ಪ್ರಶಸ್ತಿ ನೀಡಿ, ಗೌರವಿಸಿದ್ದರು. ಅವರ ತಂದೆ ಕೂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಇವರು ಕೂಡ ಪಕ್ಷದ ವಿವಿಧ ಸಂಘಟನೆಗಳಲ್ಲಿ ಕೆಲಸ ಮಾಡಿದ್ದರು. ಮಧ್ಯೆ ಬಿಜೆಪಿ ಸೇರಿ, ಸ್ಪರ್ಧಿಸಿದ್ದರು. ಆಪರೇಷನ್ ಕಮಲದಲ್ಲಿ ನಮ್ಮ ಶಾಸಕರು ಹೋದ ನಂತರ ಆಯಾ ಕ್ಷೇತ್ರದ ಬಹುತೇಕ ಬಿಜೆಪಿ ನಾಯಕರು ನಮ್ಮ ಪಕ್ಷಕ್ಕೆ ಒಬ್ಬೊಬ್ಬರಾಗಿ ಬರುತ್ತಿದ್ದಾರೆ. ಇತ್ತೀಚೆಗೆ ಹಿರೇಕೆರೂರು ನಾಯಕರು ಸೇರ್ಪಡೆಯಾಗಿದ್ದಾರೆ ಎಂದರು.
ಅಲ್ಲದೇ ಬಿಜೆಪಿಯ ಸಕ್ರಿಯ ನಾಯಕರಾದ ಜಿಲ್ಲಾ ಖಜಾಂಚಿಗಳಾದ ಉದ್ಯಮಿ ಶ್ರೀನಿವಾಸ್ ಭಟ್ ದಾತ್ರಿ ಅವರು ಕೂಡ ಇದೆ ಸಂದರ್ಭದಲ್ಲಿ ಪಕ್ಷ ಸೇರ್ಪಡೆಯಾಗಿದ್ದಾರೆ. ಇವರು ಉತ್ತಮ ಸಂಘಟನಕಾರರಾಗಿದ್ದು, ಬಹಳ ಸೇವೆ ಮಾಡಿರುವ ಕುಟುಂಬದಿಂದ ಬಂದಿದ್ದಾರೆ. ಯಲ್ಲಾಪುರ ಕ್ಷೇತ್ರದ ಯುವಕರಲ್ಲಿ ಬಹಳ ಚಿರಪರಿಚಿತರಾಗಿದ್ದಾರೆ. ಅವರು ಕೂಡ ದೇಶಪಾಂಡೆ ಹಾಗೂ ನನ್ನನ್ನು ಭೇಟಿ ಮಾಡಿ ಪಕ್ಷ ಸೇರುವ ಇಂಗಿತ ವ್ಯಕ್ತಪಡಿಸಿದ್ದರು. ಇವರು ಕೂಡ ಹಲವು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಕೂಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.