ಹಾಸನ (ವಿಶ್ವ ಕನ್ನಡಿಗ ನ್ಯೂಸ್) : ಮದುವೆಯಾಗಿ ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ವಾಸವಿದ್ದ ಯುವತಿಯ ಶವ ಕಬ್ಬಿಣ ಗದ್ದೆಯಲ್ಲಿ ಪತ್ತೆಯಾಗಿದೆ. ಕಾವ್ಯ ಮೃತಪಟ್ಟ ಯುವತಿಯಾಗಿದ್ದು, ಪ್ರಿಯಕರ ಕಾವ್ಯಳ ಶವವನ್ನು ಯಾರಿಗೂ ತಿಳಿಯದಂತೆ ಕಬ್ಬಿನ ಗದ್ದೆಯಲ್ಲಿ ಹೂತು ಹಾಕಿದ್ದಾನೆ ಎಂದು ತಿಳಿದುಬಂದಿದೆ.
ಕಾವ್ಯ ಬಿಬಿಎಂ ಓದಿದ್ದು, ಅಕ್ಷಯ್ ಎಂಬ ಯುವಕನ್ನು ಪ್ರೀತಿಸಿ ಮದುವೆಯಾಗಿದ್ದಳು, ಆದರೆ ಮದುವೆಯಾದ ಕೆಲವೇ ತಿಂಗಳಲ್ಲಿ ಸಂಸಾರದಲ್ಲಿ ಹೊಂದಾಣಿಕೆ ಬಾರದ ಕಾರಣ ವಿವಾಹ ಸಂಬಂಧ ಮುರಿದುಕೊಂಡಿದ್ದಳು. ಬೆಂಗಳೂರಿನಲ್ಲಿ ಕೆಲಸಕ್ಕಿದ್ದ ಕಾವ್ಯಾ ಹೊಳೆನರಸೀಪುರ ತಾಲೂಕಿನ, ಪಾರಸನಹಳ್ಳಿ ಗ್ರಾಮದ ಅವಿನಾಶ್ನನ್ನು ಪ್ರೀತಿಸುತ್ತಿದ್ದಳು. ಕಳೆದ 2 ವರ್ಷಗಳಿಂದ ಅವಿನಾಶ್ ಮನೆಯಲ್ಲಿಯೇ ವಾಸವಿದ್ದ ಕಾವ್ಯ ತಾಯಿಯ ಬಳಿ ಬೆಂಗಳೂರಿನಲ್ಲೇ ಇರುವುದಾಗಿ ಹೇಳಿದ್ದಳು.
ಆದರೆ ಮಗಳು ಕಳೆದ ಕೆಲ ದಿನಗಳಿಂದ ಮೊಬೈಲ್ ಸಂಪರ್ಕಕಕ್ಕೆ ಸಿಗದೆ ಇದ್ದ ಹಿನ್ನಲೆಯಲ್ಲಿ ಆಕೆಯ ತಾಯಿ ಆತಂಕಗೊಂಡಿದ್ದ ಸಂದರ್ಭದಲ್ಲಿ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬರು ಫೋನ್ ಮಾಡಿ, ನಿಮ್ಮ ಮಗಳನ್ನು ಹೂತು ಹಾಕಿದ್ದಾರೆ ಎಂದು ಮಾತನಾಡುತ್ತಿದ್ದಾರೆ ಎಂದು ಹೇಳಿದ್ದರು.
ಬಳಿಕ ಕಲ್ಪನಾ ಅವರು ಹೊಳೆನರಸೀಪುರ ಪೊಲೀಸರಿಗೆ ಮಗಳು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅವಿನಾಶ್ನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಕಾವ್ಯಳ ಶವವನ್ನು ಕಬ್ಬಿನಗದ್ದೆಯಲ್ಲಿ ಹೂತು ಹಾಕಿರುವುದು ಬೆಳಕಿಗೆ ಬಂದಿದೆ. ಅವಿನಾಶ್ ಹಾಗೂ ಆತನ ಪೋಷಕರೇ ಮಗಳನ್ನು ಕೊಲೆ ಮಾಡಿ ಹೂತು ಹಾಕಿದ್ದಾರೆ ಎಂದು ಕಲ್ಪನಾ ಆರೋಪಿಸಿದ್ದು, ಪೊಲೀಸರು ಅವಿನಾಶ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ತಿಳಿದುಬರಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.