(www.vknews.in) ; ಶೈಕ್ಷಣಿಕ ವರ್ಷದ ಕೊನೆಯಲ್ಲಿ ಶಿಕ್ಷಣ ಇಲಾಖೆ ಸರಕಾರಿ ಶಾಲಾ ಶಿಕ್ಷಕರ ಮರು ಹೊಂದಾಣಿಕೆ ಮತ್ತು ಹೆಚ್ಚುವರಿ ಪ್ರಕ್ರಿಯೆಯನ್ನು ಪ್ರಾರಂಭಿಸಿರುವುದು ಸರಿಯಾದ ಕ್ರಮವಲ್ಲ. ಶಾಲೆಗಳು 2022-23 ನೇ ಶೈಕ್ಷಣಿಕ ವರ್ಷದ ಕೊನೆಯಲ್ಲಿದ್ದು , ಶಿಕ್ಷಕರು ನಿಗದಿತ ಪಠ್ಯವಸ್ತು ಮುಗಿಸಿ , ನಿರಂತರ ಹಾಗು ವ್ಯಾಪಕ ಮೌಲ್ಯ ಮಾಪನದ ಮೂಲಕ ಮೌಲ್ಯಾಂಕನ ಮುಗಿಸಿ, ಮಕ್ಕಳ ಕಲಿಕೆಯನ್ನು ಪರಾಮರ್ಶಿಸುತ್ತಿರುವ ಸಂದರ್ಭದಲ್ಲಿ ಶಿಕ್ಷಕರನ್ನು ಮಾನಸಿಕವಾಗಿ ತೊಂದರೆಗೆ ಗುರಿಪಡಿಸುವುದು ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಅವೈಜ್ಞಾನಿಕ ಕ್ರಮವಾಗಿದೆ .
ಈ ಮರು ಹೊಂದಾಣಿಕೆಯ ವಿಧಾನವು ಶಿಕ್ಷಣ ಹಕ್ಕು ಕಾಯಿದೆಯ ಗೊತ್ತುಪಡಿಸಿರುವ ಪ್ರಾಥಮಿಕ ಹಾಗು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇರಲೇಬೇಕಾದ ಕನಿಷ್ಠ ಶಿಕ್ಷಕರ ಸಂಖ್ಯೆಗೆ ವಿರುದ್ಧವಾಗಿದೆ .ಈ ಪ್ರಕ್ರಿಯೆ ಸರ್ಕಾರಿ ಕನ್ನಡ ಶಾಲೆಗಳಿಗೆ ಮಾರಕವಾಗಿ ಪರಿಣಮಿಸಲಿದೆ .
ಶೈಕ್ಷಣಿಕ ವರ್ಷದಲ್ಲಿ ಬಹು ಮುಖ್ಯ ಘಟ್ಟವಾದ, ಜನವರಿ-ಫೆಬ್ರವರಿ -ಮಾರ್ಚ್ ತಿಂಗಳುಗಳು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗು ಕಲಿಕಾ ಹಿತದೃಷ್ಟಿಯಿಂದ ತುಂಬಾ ಮಹತ್ವದ ಕಲಿಕಾ ದಿನಗಳಾಗಿರುತ್ತವೆ. ಈ ಸಂದರ್ಭದಲ್ಲಿ ಶಿಕ್ಷಕರ ಹೆಚ್ಚುವರಿ ಅಥವಾ ಮರು ಹೊಂದಾಣಿಕೆ ಪ್ರಕ್ರಿಯೆ ಆರಂಭಿಸುವುದು ನೇರವಾಗಿ ಕಲಿಕೆಯ ಮೇಲೆ ಪರಿಣಾಮ ಬೀರುವುದಲ್ಲದೆ ಶಿಕ್ಷಕರು ಮಾನಸಿಕವಾಗಿ ತೊಂದರೆಗೊಳಗಾಗುತ್ತಾರೆ.
ಕಲಿಕಾ ಯೋಜನೆಗೆ ಸಂಬಂಧಿಸಿದಂತೆ ಪ್ರತಿಯೊಬ್ಬ ಶಿಕ್ಷಕ ತನ್ನದೇ ಆದ ಯೋಜನೆ ಹೊಂದಿರುತ್ತಾನೆ. ಶೈಕ್ಷಣಿಕ ವರ್ಷ ಮುಕ್ತಾಯವಾಗುವ ಸಂದರ್ಭದಲ್ಲಿ ಪರಿಣಾಮಕಾರಿ ಕಲಿಕೆಗೆ ಏನು ಮಾಡಬೇಕು ಎಂಬುದರ ಬಗ್ಗೆ ತನ್ನದೇ ಆದ ಕ್ರಿಯಾ ಯೋಜನೆ ಹೊಂದಿರುತ್ತಾನೆ . ಈ ಘಟ್ಟದಲ್ಲಿ ಹೆಚ್ಚುವರಿ – ಮರು ಹೊಂದಾಣಿಕೆ ಪ್ರಕ್ರಿಯೆ ಶಿಕ್ಷಕರ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತದೆ . ಇದು ಸರಕಾರವೇ ಸರಕಾರೀ ಶಾಲೆಗಳನ್ನು ಮುಚ್ಚುವ ಕಾರ್ಯ ಯೋಜನೆಯಂತಿದೆ.
ಹೆಚ್ಚುವರಿ ಮತ್ತು ಮರು ಹೊಂದಾಣಿಕೆಗೆ ಒಳಪಟ್ಟ ಶಿಕ್ಷಕ/ ಶಿಕ್ಷಕಿ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಈ ಶಾಲೆ ಬಿಟ್ಟು ಮತ್ತೊಂದು ಶಾಲೆಗೆ ಹೋಗುವುದರಿಂದ , ಅಲ್ಲಿನ ಪರಿಸ್ಥಿತಿಗೆ ಶಿಕ್ಷಕರು ತಕ್ಷಣ ಹೊಂದಿಕೊಳ್ಳಲು ಕಷ್ಟವಾಗುತ್ತದೆ . ವಿದ್ಯಾರ್ಥಿಗಳು ಸಹ ಬದಲಾದ ಕಲಿಕಾ ವ್ಯವಸ್ಥೆಗೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ, ಇದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತ ದೃಷ್ಟಿಯಿಂದ ಒಳ್ಳೆಯದಲ್ಲ .
ಇಂತಹ ಅವೈಜ್ಞಾನಿಕ ನಿಯಮ ಅಳವಡಿಸಿಕೊಂಡು ಮರು ಹೊಂದಾಣಿಕೆ ಹಾಗು ಶಿಕ್ಷಕರ ಹೆಚ್ಚುವರಿ ಮಾಡುವುದರಿಂದ ಸರ್ಕಾರಿ ಶಾಲೆಗಳನ್ನು ಶಾಶ್ವತವಾಗಿ ಮುಚ್ಚಬೇಕೆಂಬ ತೀರ್ಮಾನಕ್ಕೆ ಸರ್ಕಾರ ಬಂದಂತಿದೆ. ಸಂಪನ್ಮೂಲಗಳನ್ನು ಕಡಿತಗೊಳಿಸಿ ಆ ಮೂಲಕ ಸರಕಾರೀ ಶಾಲೆಗಳನ್ನು ಮುಚ್ಚಿ ವಿಲೀನಗೊಳಿಸಿ ಖಾಸಗೀಕರಣಕ್ಕೆ ಅನುವ ಮಾಡಿಕೊಡಬೇಕೆಂಬ ರಾಷ್ಟ್ರೀಯ ಶಿಕ್ಷಣ ನೀತಿಯ ಹುನ್ನಾರ ಈಗ ಬಯಲಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಮಂಜೂರಾಗಿರುವ ಶಿಕ್ಷಕರ ಹುದ್ದೆಗಳ ಪೈಕಿ 2019-20 ರಲ್ಲಿ 22,2೦೦ , 2020-21 ರಲ್ಲಿ 34, 079 ಮತ್ತು2021-22 ರಲ್ಲಿ 1,41,358 ಹುದ್ದೆಗಳು ಖಾಲಿ ಇವೆ.ದೇಶದಲ್ಲಿ ಅತಿ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ ಇರುವ ರಾಜ್ಯ ಎಂಬ ಕೀರ್ತಿಗೆ ಕರ್ನಾಟಕ ಪಾತ್ರವಾಗಿದೆ .
ಖಾಲಿ ಇರುವ ಹುದ್ದೆಗಳನ್ನು ತುಂಬದೇ ಇಲಾಖೆ ಮರು ಹೊಂದಾಣಿಕೆ ಹಾಗು ಹೆಚ್ಚುವರಿ ನೆಪದಲ್ಲಿ ಸರ್ಕಾರಿ ಶಾಲೆಗಳ ಸುಧಾರಣೆಗೆ ಕ್ರಮ ಕೈಗೊಳ್ಳುತ್ತೇವೆ ಎಂಬುದು ಹಾಸ್ಯಾಸ್ಪದ. ಒಂದೆಡೆ ,ಮುಖ್ಯಮಂತ್ರಿಯವರು ಸರಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಸರ್ಕಾರ ಬದ್ಧ ಎಂದರೆ ಮತ್ತೊಂದೆಡೆ ಶಿಕ್ಷಣ ಸಚಿವರು ಸರಕಾರಿ ಶಾಲೆಗಳನ್ನು ಮುಚ್ಚಲು ಶಿಕ್ಷಕರ ಮರು ಹೊಂದಾಣಿಕೆ ಹಾಗು ಹೆಚ್ಚುವರಿ ಪ್ರಕ್ರಿಯೆ ಆರಂಭಿಸಿದ್ದಾರೆ.
ಸರಕಾರಕ್ಕೆ ಇಚ್ಛಾಶಕ್ತಿ ಇದ್ದರೆ ಸರಕಾರೀ ಶಾಲೆಗಳ ಸಬಲೀಕರಣ ವರದಿ ೨೦೧೭ ರ ಅನ್ವಯ ಎಲ್ಲ ಸರಕಾರೀ ಶಾಲೆಗಳಿಗೆ ವಿಷಯವಾರು ತರಗತಿವಾರು ಶಿಕ್ಷಕ ಹುದ್ದೆಗಳನ್ನು ಮಂಜೂರು ಮಾಡುವ ಮೂಲಕ ಸರಕಾರೀ ಶಾಲೆಗಳ ಬಲವರ್ಧನೆಗೆ ಮುಂದಾಗಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ.
ಡಾ.ನಿರಂಜನಾರಾಧ್ಯ ವಿ.ಪಿ. ಅಭಿವೃದ್ಧಿ ಶಿಕ್ಷಣ ತಜ್ಞರು ಮಹಾಪೋಷಕರು, ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.