ಲಕ್ನೋ (www.vknews.in) : ಮೊದಲ ರಾತ್ರಿ ಕೋಣೆಯಲ್ಲಿ ವಧು-ವರರು ಶವವಾಗಿ ಪತ್ತೆಯಾಗಿರುವ ನಿಗೂಢ ಘಟನೆ ನಡೆದಿದೆ. ಉತ್ತರ ಪ್ರದೇಶದ ಬರೈಚ್ನ ಕೈಸರ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಗೋಧಿಯಾ ಗ್ರಾಮದಲ್ಲಿ ಕಳೆದ ದಿನ ಈ ದಾರುಣ ಘಟನೆ ನಡೆದಿದೆ. ಮದುವೆ ಸಮಾರಂಭದ ನಂತರ ವರ ಪ್ರತಾಪ್ ಯಾದವ್ (24) ಮತ್ತು ವಧು ಪುಷ್ಪಾ ಯಾದವ್ (22) ತಮ್ಮ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಇಬ್ಬರೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಎರಡು ದಿನಗಳ ಮದುವೆ ಸಮಾರಂಭ ಮಂಗಳವಾರ ಆರಂಭವಾಯಿತು. ಗುರುವಾರ ಮಧ್ಯಾಹ್ನವಾದರೂ ಕೊಠಡಿ ತೆರೆಯದೇ ಇದ್ದಾಗ ಶಂಕೆ ಉಂಟಾಗಿದೆ. ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಸಾವು ನಿಗೂಢ ಎಂದು ಆರೋಪಿಸಿ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಯ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಂಪತಿಗೆ ಹೃದ್ರೋಗದ ಇತಿಹಾಸ ಇರಲಿಲ್ಲ. ಇಬ್ಬರೂ ಒಂದೇ ದಿನದಲ್ಲಿ ಹೇಗೆ ಹೃದಯಾಘಾತಕ್ಕೆ ಒಳಗಾದರು ಎಂಬುದು ಪೊಲೀಸರನ್ನು ಕಂಗೆಡಿಸುತ್ತದೆ. ನಿಗೂಢತೆಯನ್ನು ತೆರವು ಮಾಡಲು ಎರಡು ದೇಹಗಳ ಆಂತರಿಕ ಅಂಗಗಳನ್ನು ಲಕ್ನೋದ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಬಲರಾಂಪುರ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ವರ್ಮಾ ತಿಳಿಸಿದ್ದಾರೆ. ದಂಪತಿ ಶವವಾಗಿ ಪತ್ತೆಯಾದ ಕೊಠಡಿಯಲ್ಲಿ ಗಾಳಿ ಇಲ್ಲದೇ ಮಲಗಿದ್ದಾಗ ಉಸಿರುಗಟ್ಟಿ ಹೃದಯ ಸ್ತಂಭನ ಉಂಟಾಗಿರಬಹುದು ಎಂದು ಶಂಕಿಸಲಾಗಿದೆ.
ಮಂಗಳವಾರದಿಂದ ಮದುವೆ ಸಮಾರಂಭ ಆರಂಭವಾಯಿತು. ಎರಡು ದೀರ್ಘ ಹಗಲು ರಾತ್ರಿ ಸಮಾರಂಭಗಳ ನಂತರ ದಂಪತಿಗಳು ಮಲಗಲು ಹೋದರು. ಕುಟುಂಬದ ಇತರ ಸದಸ್ಯರು ಇತರ ಕೊಠಡಿಗಳಲ್ಲಿ ಮಲಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ಮಧ್ಯಾಹ್ನದವರೆಗೂ ಇಬ್ಬರೂ ಕೊಠಡಿಯಿಂದ ಹೊರಗೆ ಬಾರದಿದ್ದಾಗ ಮನೆಯವರು ಬಾಗಿಲು ಒಡೆದು ಒಳ ಪ್ರವೇಶಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.