(www.vknews.in) ; ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಶ್ರೀ ಈಶ್ವರ ಖಂಡ್ರೆ ಅವರು, ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕು ವಿರೂಪಾಕ್ಷ ಪುರ ಹೋಬಳಿ ವಿರೂಪಸಂದ್ರ ಗ್ರಾಮದಲ್ಲಿ ಮಾವಿನ ತೋಟ ಕಾಯುತ್ತಿದ್ದ ಸಂಭರ್ಭದಲ್ಲಿ ಆನೆ ದಾಳಿಯಿಂದ ಮೃತಪಟ್ಟ ವೀರಭದ್ರ (40) ಅವರ ಕುಟುಂಬಸ್ಥರಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಅರಣ್ಯ ಸಂರಕ್ಷಣೆ ಜತೆಗೆ ಕಾಡಿನ ಅಕ್ಕಪಕ್ಕ ಬೇಸಾಯ ಮಾಡುವ ರೈತರ ಹಿತವೂ ಮುಖ್ಯ. ರೈತಾಪಿ ಜನರ ಜೀವ ಅಮೂಲ್ಯ. ಚನ್ನಪಟ್ಟಣ ಮಾತ್ರವಲ್ಲದೆ, ರಾಮನಗರ ಜಿಲ್ಲೆಯ ನಾನಾ ಭಾಗಗಳಲ್ಲಿ ಜನರ ಮೇಲೆ ಕಾಡುಪ್ರಾಣಿಗಳು ದಾಳಿ ನಡೆಸುವ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಕಾಡಂಚಿನಲ್ಲಿ ಎಲ್ಲಾ ಸುರಕ್ಷಿತ ಕ್ರಮಗಳನ್ನು ವಹಿಸಿ ಜನರ ಮೇಲೆ ಕಾಡುಪ್ರಾಣಿಗಳ ದಾಳಿ ಆಗದಂತೆ ಶಾಶ್ವತವಾಗಿ ತಡೆಯುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಯಾವುದೇ ವ್ಯಕ್ತಿ ಕಾಡುಪ್ರಾಣಿಗಳ ದಾಳಿಯಿಂದ ಸಾವಿಗೀಡಾಗಬಾರದು.
ಇನ್ನು ಮುಂದೆ ಪ್ರಾಣಿಗಳ ಮತ್ತು ಮಾನವನ ಸಂಘರ್ಷದಿಂದ ಹೆಚ್ಚಿನ ಜೀವ ಹಾನಿ ಆಗದ ರೀತಿಯಲ್ಲಿ ಕ್ರಮ ವಹಿಸಲು ಮತ್ತು ನಾಡಿಗೆ ದಾಳಿ ಇಟ್ಟಿರುವ ಆನೆಗಳನ್ನು ಕಾಡಿಗೆ ಅಟ್ಟಲು ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ. ತಕ್ಷಣವೇ ಎಲ್ಲಿ ಹೆಚ್ಚಿನ ಆನೆಗಳ ದಾಳಿ ಪ್ರದೇಶವಿದೆಯೋ ಅಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸಿ ಇಂತಹ ಅನಾಹುತಗಳನ್ನು ತಪ್ಪಿಸುವುದು ಅಗತ್ಯವಾಗಿದೆ. ಇದಕ್ಕೆ ಮುಂಬರುವ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಒದಗಿಸುವಂತೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ತಿಳಿಸಿದ್ದರು.
ಮೃತರಾದ ವೀರಭದ್ರ ಕುಟುಂಬಕ್ಕೆ ನಿಯಮಾನುಸಾರ 15 ಲಕ್ಷ ರೂ. ಪರಿಹಾರವನ್ನು ಒದಗಿಸಿ ಯಾವುದೇ ಪರಿಹಾರ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ, ಆದರೆ ಅವರ ಕುಟುಂಬಕ್ಕೆ ಆಸರೆ, ಆಧಾರವಾಗುತ್ತದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಮೃತರಿಬ್ಬರ ಕುಟುಂಬಕ್ಕೆ ಸಾವಿನ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.