ಕೋಲಾರ (ವಿಶ್ವ ಕನ್ನಡಿಗ ನ್ಯೂಸ್) :ಕೋಲಾರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಶೇಕಡ 50 ಕ್ಕಿಂತ ಕಡಿಮೆ ತೆರಿಗೆ ವಸೂಲಾತಿ ಆಗಿರುವುದು ಅಧಿಕಾರಿಗಳ ಬೇಜವಾಬ್ದಾರಿತನ ತೋರಿಸುತ್ತದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರು ( ಕೆ.ಯು.ಡಬ್ಲ್ಯೂಎಸ್.ಡಿ ಮತ್ತು ಕೆ.ಯು.ಐ.ಡಿ.ಎಫ್.ಸಿ ಸೇರಿದಂತೆ ) ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್ . ಸುರೇಶ್ ಅವರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ನಡೆದ ಜಿಲ್ಲಾ ನಗರಾಭಿವೃದ್ಧಿ ಕೋಶ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು . ಎಸ್.ಎಫ್.ಸಿ. ಕುಡಿಯುವ ನೀರು ಯೋಜನೆಯಡಿ 2022-23ನೇ ಸಾಲಿನಲ್ಲಿ 9 ಕಾಮಗಾರಿಗಳಿಗಾಗಿ ಮತ್ತು ರೂ .48 ಲಕ್ಷಗಳನ್ನು ಮೀಸಲಿರಿಸಲಾಗಿದೆ. ಅವುಗಳಲ್ಲಿ ಕೇವಲ 19.22 ಲಕ್ಷಗಳ ವೆಚ್ಚದಲ್ಲಿ 5 ಕಾಮಗಾರಿಗಳನ್ನು ಮಾತ್ರ ಪೂರ್ಣಗೊಳಿಸಲಾಗಿದೆ. ಉಳಿದ 4 ಕಾಮಗಾರಿಗಳು ಪ್ರಗತಿಯಲ್ಲಿವೆ. ಕಾಮಗಾರಿಗಳನ್ನು ಅತೀ ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಕೇವಲ ಶೇ .40 ರಷ್ಟು ಅನುದಾನ ಬಳಕೆ ಮಾಡಿಕೊಂಡಿದ್ದು , ಪೂರ್ಣ ಪ್ರಮಾಣದಲ್ಲಿ ಅನುದಾನ ಬಳಕೆ ಮಾಡಿಕೊಂಡು ಕಾಮಗಾರಿಗಳನ್ನು ಪೂರೈಸಬೇಕೆಂದು ಸೂಚಿಸಿದರು. ಅಮೃತ ನಗರೋತ್ಥಾನ ಹಂತ 4 ರ ಯೋಜನೆಯಡಿ 67 ಕಾಮಗಾರಿಗಳನ್ನು 1765.27 ಲಕ್ಷಗಳ ವೆಚ್ಚದಲ್ಲಿ ಪೂರ್ಣಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದರು.
ಸ್ವಚ್ಛ ಭಾರತ್ ಮಿಷನ್ ಅಡಿ 119 ಸಿವಿಲ್ ಕಾಂಪೋನೆಂನೆಟ್ಗಳ ಪೈಕಿ 52 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು , 1487.6 ಲಕ್ಷಗಳನ್ನು ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.
ಕೋಲಾರ ಜಿಲ್ಲೆಯಲ್ಲಿ ಬಂಗಾರಪೇಟೆ ಹಾಗೂ ಶ್ರೀನಿವಾಸಪುರ ತಾಲ್ಲೂಕುಗಳಲ್ಲಿ ತಲಾ 3 ಇಂದಿರಾ ಕ್ಯಾಂಟೀನ್ಗಳನ್ನು ಈಗಾಗಲೇ ತೆರೆಯಲಾಗಿದ್ದು , ಇನ್ನುಳಿದ ಎಲ್ಲಾ ತಾಲ್ಲೂಕುಗಳಲ್ಲಿ ಜನಸಂದಣಿ ಹೆಚ್ಚಾಗಿರುವ ಸ್ಥಳಗಳಲ್ಲಿ ಹಾಗೂ ಕಾರ್ಮಿಕರು ದುಡಿಯುವ ಸ್ಥಳಗಳಲ್ಲಿ ಅಗತ್ಯವಿರುವಷ್ಟು ಇಂದಿರಾ ಕ್ಯಾಂಟೀನ್ಗಳನ್ನು ಮಂಜೂರು ಮಾಡಲಾಗುವುದು.
ಈ ಬಗ್ಗೆ ಸ್ಥಳೀಯ ಶಾಸಕರ ಮೂಲಕ ಪ್ರಸ್ತಾವನೆ ಸಲ್ಲಿಸಿದಲ್ಲಿ ಸರ್ಕಾರ ಮಟ್ಟದಲ್ಲಿ ಮಂಜೂರು ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಆಸ್ತಿ ತೆರಿಗೆ ವಸೂಲಾತಿ ವಿಚಾರವಾಗಿ ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಶೇ .21.17 , ರಾಬರ್ಟ್ಸನ್ ಪೇಟೆ ನಗರಸಭೆ ವ್ಯಾಪ್ತಿಯಲ್ಲಿ ಶೇ .42.98 , ಮುಳಬಾಗಿಲು ನಗರಸಭೆ ವ್ಯಾಪ್ತಿಯಲ್ಲಿ ಶೇ .37.40 , ಮಾಲೂರು ಪುರಸಭೆ ವ್ಯಾಪ್ತಿಯಲ್ಲಿ ಶೇ .57.58 , ಬಂಗಾರಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಶೇ .74 ಹಾಗೂ ಶ್ರೀನಿವಾಸಪುರ ಪುರಸಭೆ ವ್ಯಾಪ್ತಿಯಲ್ಲಿ ಶೇ .62.38 , ವೇಮಗಲ್ – ಕುರುಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ .47.96 ರಷ್ಟು ಕರ ವಸೂಲಾತಿ ಆಗಿದ್ದು , ಇದರಲ್ಲಿ ಕೋಲಾರ ನಗರಸಭೆ ತೆರಿಗೆ ವಸೂಲಾತಿಯಲ್ಲಿ ಬಹಳ ಹಿಂದೆ ಬಿದ್ದಿದೆ . ಅಗತ್ಯವಿದ್ದಲ್ಲಿ ಖಾಸಗಿ ಸಂಸ್ಥೆಗಳ ಸಹಯೋಗವನ್ನು ಪಡೆದುಕೊಂಡು ಮುಂದಿನ ಮಾಹೆಯ ಅಂತ್ಯದೊಳಗೆ ಕರವಸೂಲಾತಿಗೆ ಗುರಿ ನಿಗಧಿಪಡಿಸಿದರು.
ಈ ವೇಳೆ ನಿಗಧಿತ ಗುರಿ ತಲುಪದಿದ್ದಲ್ಲಿ ಸಂಬಂಧಿತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು . ಮುಂದಿನ ಪ್ರತಿಕೂಲ ಪರಿಣಾಮಗಳಿಗೆ ಅವರೇ ನೇರವಾಗಿ ಜವಾಬ್ದಾರಿ ಆಗುವರು ಎಂದು ತಿಳಿಸಿದರು .
ಎಲ್ಲಾ ನಗರಸಭೆ ಮತ್ತು ಪುರಸಭೆಗಳಿಗೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು . ನಗರಾಭಿವೃದ್ಧಿ ಇಲಾಖೆಯಡಿ ಪ್ರತಿ ಜಿಲ್ಲೆಗೆ 20 ಕೋಟಿಗಳ ಅನುದಾನವನ್ನು ನಿಗಧಿ ಪಡಿಸಲಾಗಿದೆ . ಆದಾಗ್ಯೂ ಕೋಲಾರ ಜಿಲ್ಲೆಯ ಮೇಲಿನ ವಿಶೇಷ ಕಾಳಜಿಯೊಂದಿಗೆ ಮಾನ್ಯ ಮುಖ್ಯಮಂತ್ರಿಗಳು 50 ಕೋಟಿಗಳ ಅನುದಾನವನ್ನು ಬಜೆಟ್ನಲ್ಲಿ ಘೋಷಿಸಿರುತ್ತಾರೆ ಎಂದು ತಿಳಿಸಿದರು .
ಬಹು ನಿರೀಕ್ಷಿತ ಯರಗೋಳ್ ಕುಡಿಯುವ ನೀರಿನ ಯೋಜನೆ ಪೂರ್ಣ ಹಂತಕ್ಕೆ ಬಂದಿದ್ದು , ಈಗಾಗಲೇ ಪ್ರಾಯೋಗಿಕವಾಗಿ ಬಂಗಾರಪೇಟೆಯವರೆಗೆ ಕುಡಿಯುವ ನೀರನ್ನು ಪಂಪ್ ಮಾಡಲಾಗುತ್ತಿದೆ. ಅಕ್ಟೋಬರ್ ಅಂತ್ಯದ ವೇಳೆಗೆ ಕೋಲಾರ ಮತ್ತು ಮಾಲೂರು ತಾಲ್ಲೂಕುಗಳಿಗೆ ಕುಡಿಯುವ ನೀರನ್ನು ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹ್ಮದ್ , ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ || ಜಿ . ಮಂಜುನಾಥ್ , ಬಂಗಾರಪೇಟೆ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಕೆ.ಎಂ. , ಮಾಲೂರು ಶಾಸಕರಾದ ಕೆ.ವೈ. ನಂಜೇಗೌಡ , ಶ್ರೀನಿವಾಸಪುರ ಶಾಸಕರಾದ ಜಿ.ಕೆ.ವೆಂಕಟಶಿವಾರೆಡ್ಡಿ , ಕೆ.ಜಿ.ಎಫ್ ಶಾಸಕರಾದ ರೂಪಕಲಾ ಎಂ.ಶಶಿಧರ್ , ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್ . ಅನಿಲ್ ಕುಮಾರ್ , ಇಂಚರ ಗೋವಿಂದರಾಜು , ಜಿಲ್ಲಾಧಿಕಾರಿ ಅಕ್ರಂ ಪಾಷ , ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಣಾಧಿಕಾರಿ ಪದ್ಮ ಬಸವಂತಪ್ಪ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ , ಕೆ.ಜಿ.ಎಫ್ . ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತಕುಮಾರ್ , ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.