ಧಾರವಾಡ (www.vknews.in) : ಅಧಿಕ ಮಾಸದಲ್ಲಿ ಮಾಡುವ ವಿಶೇಷ ಪೂಜಾ ಕೈಂಕರ್ಯಾದಿ ಸತ್ಕಾರ್ಯಗಳಿಂದ ಅಧಿಕ ಫಲಪ್ರಾಪ್ತಿಯಾಗುತ್ತದೆ ಎಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಅವರು ತಾಲೂಕಿನ ಅಮ್ಮಿನಬಾವಿ ಪಂಚಗ್ರಹ ಹಿರೇಮಠದಲ್ಲಿ ಅಧಿಕ ಮಾಸದ ಅಂಗವಾಗಿ ರವಿವಾರ ಹಮ್ಮಿಕೊಂಡಿದ್ದ ತಮ್ಮ ಗುರುಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ಪಾದಪೂಜೆ ನೆರವೇರಿಸಿ ಮಾತನಾಡುತ್ತಿದ್ದರು. ಪ್ರತಿ ಮೂರು ವರ್ಷಕ್ಕೊಮ್ಮೆ ಬರುವ ಅಧಿಕ ಮಾಸವೂ ಸಹ ಅತ್ಯಂತ ಪವಿತ್ರ ಮಾಸವಾಗಿ ಪರಿಗಣಿತವಾಗಿದೆ. ಈ ಬಾರಿ ಶ್ರಾವಣ ಮಾಸವೇ ಅಧಿಕಮಾಸವಾಗಿದ್ದು, ಹೆಚ್ಚೆಚ್ಚು ಭಗವಂತನ ನಾಮಸ್ಮರಣೆಗೆ ಎಲ್ಲರೂ ತೆರೆದುಕೊಳ್ಳುವ ಪುಣ್ಯ ಮಾಸವೇ ಆಗಿದೆ. ಈ ಮಾಸದಲ್ಲಿ ಮಾಡುವ ಪ್ರತಿಯೊಂದು ಕಾರ್ಯವೂ ಅಧಿಕವಾಗುತ್ತದೆ. ಹಾಗಾಗಿ ಭಗವಂತನ ಮತ್ತು ಧರ್ಮ ಗುರುಗಳ ಪವಿತ್ರ ಸಾನ್ನಿಧ್ಯಕ್ಕೆ ಮಾಡುವ ಪೂಜೆಯ ಫಲವು ಬದುಕಿನಲ್ಲಿ ಮೋಕ್ಷಕ್ಕೆ ದಾರಿ ಮಾಡಿಕೊಡುತ್ತದೆ ಎಂದರು.
ಕಿತ್ತೂರು ರಾಣಿ ಚೆನ್ನಮ್ಮ ಸೌಹಾರ್ದ ಸಹಕಾರಿ ಬ್ಯಾಂಕಿನ ಇನಾಂಹೊಂಗಲ ಶಾಖೆಯ ಆಡಳಿತ ಮಂಡಳಿ ಉಪಾಧ್ಯಕ್ಷ ರಾಮಣ್ಣ ಜಕ್ಕಣ್ಣವರ, ಕನ್ನಡ ಪತ್ರಿಕೋದ್ಯಮದ ಹಿರಿಯ ನಿಯತಕಾಲಿಕ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ನಿವೃತ್ತ ಸಂಪಾದಕ ಡಾ. ಗುರುಮೂರ್ತಿ ಯರಗಂಬಳಿಮಠ, ಪತ್ರಕರ್ತ ಪ್ರಶಾಂತ ರಾಜಗುರು, ಶಿವಾನಂದ ತಡಕೋಡ, ಸೋಮಲಿಂಗ ಗುಡ್ಡದಮಠ, ವಿನಾಯಕ ಹಿರೇಮಠ, ಈರಯ್ಯ ಹಿರೇಮಠ, ರೇಣುಕಾಚಾರ್ಯ ಹಿರೇಮಠ, ಅಕ್ಕಮಹಾದೇವಿ ಯರಗಂಬಳಿಮಠ, ಮೃತ್ಯುಂಜಯ ಹಿರೇಮಠ ಇತರರಿದ್ದರು. ಕಾರ್ಯಕ್ರಮದ ಅಂಗವಾಗಿ ಪ್ರಾತಃಕಾಲದಲ್ಲಿ ಕರ್ತೃ ಗದ್ದಿಗೆಗೆ ರುದ್ರಾಭಿಷೇಕ, ಶಿವಾಷ್ಟೋತ್ತರ ಸಹಿತ ಮಹಾಮಂಗಳಾರತಿ ನಡೆಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.