ಮಂಗಳೂರು (www.vknews.in) : ಇತ್ತೀಚೆಗೆ ಜೆಡಿಎಸ್ ಪಕ್ಷ ಬಿಜೆಪಿ ಯೊಂದಿಗೆ ರಾಜಕೀಯ ಮೈತ್ರಿ ಮಾಡಿಕೊಂಡ ನಂತರದ ಬೆಳವಣಿಗೆಯಲ್ಲಿ, ಪಕ್ಷದ ಪ್ರಮುಖರಾದ ಎಚ್.ಡಿ.ಕುಮಾರಸ್ವಾಮಿಯವರು ತಮ್ಮ ಪಕ್ಷದ ನಿಷ್ಠಾವಂತರು ಮತ್ತು ಮತದಾರರ ಕುರಿತು ಪ್ರಸ್ತಾಪಿಸುತ್ತಾ ಮತ್ತು ಮಾತನಾಡುತ್ತಾ, ಜೆಡಿಎಸ್ ಪಕ್ಷ ಮುಸ್ಲಿಮ್ ಸಮುದಾಯದ ಮತಗಳನ್ನು ಅವಲಂಬಿಸಿಕೊಂಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಎಚ್.ಡಿ.ಕುಮಾರಸ್ವಾಮಿಯವರು ಈ ಹೇಳಿಕೆ ನೀಡುವ ಮೊದಲು ತಮ್ಮ ಕುಟುಂಬದ ಹಿರಿಯರಾದ ದೇವೇಗೌಡರು ಈ ಮೊದಲು ಇಂಗಿತಪಡಿಸಿದ ಮತ್ತು ಹಾಸನ ಸಂಸದರಾದ ಪ್ರಜ್ವಲ್ ರೇವಣ್ಣರವರು ಕೋಲಾರ ಜಿಲ್ಲೆಯಲ್ಲಿ ಕಳೆದ ಜನವರಿ ತಿಂಗಳಲ್ಲಿ ಜೆಡಿಎಸ್ ಸಾಮೂಹಿಕ ವಿವಾಹದ ಸಾಮುದಾಯಿಕ ಕಾರ್ಯಕ್ರಮವೊಂದಲ್ಲಿ ಮಾತನಾಡುತ್ತಾ ಅವರ ಹಿರಿಯರಾದ ಎಚ್.ಡಿ.ದೇವೇಗೌಡ ರವರು ಮುಂದಿನ ಜನ್ಮದಲ್ಲಿ ಮುಸ್ಲಿಮ್ ಧರ್ಮದಲ್ಲಿ ಹುಟ್ಟುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಹೇಳಿರುವುದನ್ನು ಬಹುಷ್ಯ ಕುಮಾರ ಸ್ವಾಮಿ ಮರೆತಿರಬೇಕು.
ಹಲವು ವರ್ಷಗಳ ಹಿಂದಿನ ಚುನಾವಣೆಯಲ್ಲಿ 50 ಕ್ಕೂ ಮಿಕ್ಕಿ ಜೆಡಿಎಸ್ ಶಾಸಕ ಸ್ಥಾನಗಳನ್ನು ಅಧಿಕ ಮುಸ್ಲಿಮ್ ಮತಗಳ ಸಹಾಯದಿಂದ ಗೆದ್ದು ಬಿಜೆಪಿ ಯೊಂದಿಗೆ ಅಧಿಕಾರ ಹಂಚಿದಾಗ ಕುಮಾರ ಸ್ವಾಮಿಯವರಿಗೆ ಮುಸ್ಲಿಮ್ ಮತಗಳ ಮಹತ್ವ ಅರಿತಿರಲಿಲ್ಲಾ ಎಂದು ಕಾಣುತ್ತದೆ. ಪ್ರಸ್ತುತ ಕುಮಾರ ಸ್ವಾಮಿಯವರು ಚುನಾವಣಾ ಪೂರ್ವ ಮೈತ್ರಿ ಗೊಂಡ ತಕ್ಷಣ ತಮ್ಮ ವರಸೆ ಬದಲಿಸಿ ಜೆಡಿಎಸ್ ಪಕ್ಷ ಮುಸ್ಲಿಮ್ ಸಮುದಾಯವನ್ನು ಅವಲಂಬಿಸಿಲ್ಲ ಎಂದು ಹೇಳುವಾಗ ವಿವೇಚಿಸಬೇಕಿತ್ತು. ಮರು ಜನ್ಮದಲ್ಲಿ ಮುಸ್ಲಿಮ್ ಧರ್ಮದಲ್ಲಿ ಹುಟ್ಟುವ ಇಂಗಿತವಿದ್ದ ಪಕ್ಷದ ಹಿರಿಯರು ಇರುವಾಗ ಕುಮಾರ ಸ್ವಾಮಿ ಮುಸ್ಲಿಮ್ ಸಮುದಾಯದ ಸೀಮಿತ ಮತಗಳನ್ನಾದರೂ ಅವಲಂಬಿಸಬೇಕಿತ್ತು.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರಕಾರ ಪತನಗೊಂಡು ಕಾಂಗ್ರೆಸ್ಸೇತರ ಪಕ್ಷ ಅಧಿಕಾರಕ್ಕೆ ಬಂದರೆ ಮುಸ್ಲಿಮ್ ಸಮುದಾಯವನ್ನು ರಕ್ಷಣೆ ಮಾಡುವವರು ಯಾರು? ಎಂದು ಕುಮಾರಸ್ವಾಮಿ ಪ್ರಶ್ನಿಸಿರುತ್ತಾರೆ. ಕುಮಾರಸ್ವಾಮಿ ತಿಳಿಯಲಿ, ಮುಸ್ಲಿಮ್ ಸಮುದಾಯ ತನ್ನ ರಕ್ಷಣೆಯ ಗುತ್ತಿಗೆಯನ್ನು ಜೆಡಿಎಸ್ ಪಕ್ಷಕ್ಕೇ ನೀಡಿ ಕೈ ಕಟ್ಟಿ ಕುಳಿತಿಲ್ಲ. ಮುಸ್ಲಿಮ್ ಸಮುದಾಯದ ರಕ್ಷಣೆಯ ಟೆಂಡರ್ ಅನ್ನು ಇನ್ನಷ್ಟೇ ಕರೆದು ಅರ್ಹ ಪಕ್ಷಕ್ಕೆ ನೀಡಲಿದೆ.
ಕೆ.ಅಶ್ರಫ್( ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.