ಕೋಲಾರ ( ವಿಶ್ವ ಕನ್ನಡಿಗ ನ್ಯೂಸ್ ) : ನರಸಾಪುರ ಕೈಗಾರಿಕ ಪ್ರದೇಶದಲ್ಲಿ ಸರ್ಕಾರವು ಕೆ.ಐ.ಎ.ಡಿ.ಬಿ ವತಿಯಿಂದ 220/66/11 ಕೆ.ವಿ ವಿದ್ಯುತ್ ಉಪಕೇಂದ್ರವನ್ನು ಸ್ಥಾಪಿಸುತ್ತಿದ್ದು, ವಿದ್ಯುತ್ ಪ್ರಸರಣ ಮಾರ್ಗಗಳು ಹಾದು ಹೋಗುವ ಜಮೀನಿಗೆ ಒಂದು ಚದರ ಮೀಟರ್ಗೆ 4000 ರೂ.ಗಳ ಪರಿಹಾರ ಧನವನ್ನು ನೀಡಲಾವುದೆಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು. ಜಿಲ್ಲಾಧಿಕಾರಿ ಕಛೇರಿಯಲ್ಲಿ ಜರುಗಿದ ಪರಿಹಾರ ಸಂಧಾನ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕೋಲಾರ ಜಿಲ್ಲೆಯ ಮಾಲೂರು, ದೊಡ್ಡಸಬ್ಬೇನಹಳ್ಳಿ, ಅಗ್ರಹಾರ, ಶಿವಾರಪಟ್ಟಣ, ಮಿಂಡಹಳ್ಳಿ ಮತ್ತು ಕೋಲಾರ ತಾಲ್ಲೂಕಿನ ಬಂಕನಹಳ್ಳಿ, ಮೈಲಾಂಡಹಳ್ಳಿ ಗ್ರಾಮಗಳಲ್ಲಿ ಕೆ.ಪಿ.ಟಿ.ಸಿ.ಎಲ್. ನಿಂದ ವಿದ್ಯುತ್ ಪ್ರಸರಣ ಮಾರ್ಗಕ್ಕೆ ಈಗಾಗಲೇ ಸ್ಥಳ ಗುರುತಿಸಲಾಗಿದೆ. ವಿದ್ಯುತ್ ಪ್ರಸರಣ ಮಾರ್ಗ ಹಾದು ಹೋದ ಜಮೀನುಗಳ ಮಾಲೀಕರಿಗೆ ಮಾತ್ರ ಭೂ ಪರಿಹಾರವನ್ನು ನೀಡಲಾಗುವುದು ಎಂದರು.
ಇತ್ತೀಚಿಗೆ ಕೋಲಾರ ಜಿಲ್ಲೆಯ ಜಮೀನಿನ ನೋಂದಣಿ ಮತ್ತು ಮುದ್ರಾಂಕ ಮೌಲ್ಯವನ್ನು (ಎಸ್.ಆರ್ ವ್ಯಾಲ್ಯು) ಹೆಚ್ಚಿಸಲಾಗಿದೆ. ಕೆ.ಪಿ.ಟಿ.ಸಿ.ಎಲ್ ಮುದ್ರಾಂಕ ಮೌಲ್ಯವನ್ನು ಆಧಾರವಾಗಿ ಇಟ್ಟುಕೊಂಡು ಪರಿಹಾರ ಧನವನ್ನು ನಿಗಧಿಪಡಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳು 3600 ರೂ.ಗಳ ಚದರ ಮೀಟರ್ ನಿಗಧಿಗೊಳಿಸಿತ್ತು. ಆದರೆ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು 4000ರೂ.ಗಳಿಗೆ ದರ ನಿಗಧಿಗೊಳಿಸಲಾಗಿದೆ. ಮರಗಳು, ಮನೆ ಮತ್ತಿತರ ಆಸ್ತಿ-ಪಾಸ್ತಿ ನಷ್ಟಕ್ಕೂ ಪರಿಹಾರ ಕೊಡಿಸಲಾಗುವುದು ಎಂದರು. ಇದು ಸರ್ಕಾರಿ ಯೋಜನೆಯಾಗಿದ್ದು, ಜಿಲ್ಲೆಯ ಅಭಿವೃದ್ಧಿಗೆ ಮತ್ತು ನಿರಂತರ ವಿದ್ಯುತ್ ಸರಬರಾಜಿಗಾಗಿ ಈ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಇದಕ್ಕಾಗಿ ರೈತ ಬಾಂಧವರು ತುಂಬ ಹೃದಯದಿಂದ ಸಹಕರಿಸಬೇಕೆಂದರು.
ಸಭೆಯಲ್ಲಿ ಕೆ.ಪಿ.ಟಿ.ಸಿ.ಎಲ್ ಕಾರ್ಯನಿರ್ವಾಹಕ ಇಂಜಿನಿಯರ್ ವೆಂಕಟೇಶಪ್ಪ, ಕೆ.ಐ.ಎ.ಡಿ.ಬಿ ಕಾರ್ಯನಿರ್ವಾಹಕಾಧಿಕಾರಿ ರೂಪೇಶ್ ಹಾಗೂ ಭೂ ಮಾಲೀಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.