ಬೆಂಗಳೂರು (www.vknews.in): ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದ ಮುಸ್ಲಿಂ ದಂಪತಿಗೆ ಧರ್ಮದ ಕಾರಣ ನೀಡಿ ನಾಲ್ವರು ಮನೆ ಮಾಲೀಕರು ಬಾಡಿಗೆ ನೀಡಲು ನಿರಾಕರಿಸಿದ್ದಾರೆ ಎಂಬ ಆರೋಪ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಎಕ್ಸ್ (ಹಿಂದಿನ ಟ್ವಿಟರ್)ನಲ್ಲಿ ತಮ್ಮ ಅನುಭವ ಹಂಚಿಕೊಂಡಿರುವ @netchamp_faris ಎಂಬ ಬಳಕೆದಾರ, ತಾನು ಮತ್ತು ತನ್ನ ಪತ್ನಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದಾಗ ನಾಲ್ಕು ಮನೆಗಳನ್ನು ಇಷ್ಟಪಟ್ಟಿದ್ದರೂ, ಮುಸ್ಲಿಮರು ಎಂಬ ಕಾರಣಕ್ಕೆ ಎಲ್ಲ ಮನೆ ಮಾಲೀಕರು ಬಾಡಿಗೆ ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮೊದಲ ಬಾರಿ ಮನೆ ನಿರಾಕರಿಸಿದಾಗ ಅದೊಂದು ಪ್ರತ್ಯೇಕ ಘಟನೆ ಎಂದು ಭಾವಿಸಿದ್ದೆ. ಆದರೆ, ಇದೇ ರೀತಿಯ ಅನುಭವ ಮತ್ತೆ ಮೂವರು ಮನೆ ಮಾಲೀಕರಿಂದಲೂ ಎದುರಾದಾಗ ಬೇಸರವಾಯಿತು ಎಂದು ಅವರು ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಧರ್ಮದ ಆಧಾರದಲ್ಲಿ ಮನೆ ನಿರಾಕರಣೆ ಕುರಿತು ಚರ್ಚೆ
ಈ ಪೋಸ್ಟ್ ಪ್ರಕಟವಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ ಆರಂಭವಾಗಿದೆ. ಕೆಲವರು ಮನೆ ಮಾಲೀಕರ ನಿರ್ಧಾರವನ್ನು ಸಮರ್ಥಿಸಿಕೊಂಡರೆ, ಇನ್ನು ಕೆಲವರು ಧರ್ಮದ ಆಧಾರದಲ್ಲಿ ಬಾಡಿಗೆ ಮನೆ ನಿರಾಕರಿಸುವುದು ತಾರತಮ್ಯ ಎಂದು ಆಕ್ಷೇಪಿಸಿದ್ದಾರೆ.
ಒಬ್ಬ ಬಳಕೆದಾರ ಮುಸ್ಲಿಂ ಬಾಡಿಗೆದಾರರ ಕುರಿತಂತೆ ಸಾಮಾನ್ಯೀಕರಿಸಿದ ಆರೋಪಗಳನ್ನು ಮುಂದಿಟ್ಟುಕೊಂಡು ಮನೆ ಮಾಲೀಕರ ನಿರ್ಧಾರವನ್ನು ಸಮರ್ಥಿಸಿದ್ದಾರೆ. ಮತ್ತೊಬ್ಬರು ಹೈದರಾಬಾದ್ನ ತಮ್ಮ ಬಡಾವಣೆಯಲ್ಲಿ ಮುಸ್ಲಿಮರಿಗೆ ಮನೆ ಬಾಡಿಗೆ ನೀಡದ ಅನಧಿಕೃತ ನಿಯಮವಿದೆ ಎಂದು ಹೇಳಿಕೊಂಡಿದ್ದಾರೆ. ಇಂತಹ ಪ್ರತಿಕ್ರಿಯೆಗಳಲ್ಲಿ ಧಾರ್ಮಿಕ ಸಮುದಾಯವೊಂದರ ವಿರುದ್ಧದ ಆರೋಪಗಳೂ ವ್ಯಕ್ತವಾಗಿವೆ.
ಇನ್ನೊಬ್ಬ ಬಳಕೆದಾರರು ಬೆಂಗಳೂರಿನ ಅಪಾರ್ಟ್ಮೆಂಟ್ಗಳಲ್ಲಿ ಮುಸ್ಲಿಂ ಬಾಡಿಗೆದಾರರು ಸಾಮಾನ್ಯ ನಿಯಮಗಳನ್ನು ಪಾಲಿಸುವುದಿಲ್ಲ ಹಾಗೂ ಸಭೆ, ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಆರೋಪಿಸಿ ಮನೆ ಮಾಲೀಕರ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ತಾರತಮ್ಯದ ವಿರುದ್ಧವೂ ಧ್ವನಿ
ಇದೇ ವೇಳೆ, ಕೆಲವರು ಈ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. “ಬೆಂಗಳೂರಿನ ನಿವಾಸಿಯಾಗಿ ಇಂತಹ ಘಟನೆಗೆ ನಾಚಿಕೆಯಾಗುತ್ತಿದೆ” ಎಂದು ಒಬ್ಬ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, ಪೋಸ್ಟ್ನ ಕಾಮೆಂಟ್ಗಳನ್ನು ಓದಿದಾಗ ಇನ್ನಷ್ಟು ಬೇಸರವಾಗುತ್ತದೆ. ಧರ್ಮದ ಆಧಾರದಲ್ಲಿ ನಡೆಯುತ್ತಿರುವ ಸ್ಪಷ್ಟ ತಾರತಮ್ಯವನ್ನು ಖಂಡಿಸಲು ಹಿಂದೂ ಹೆಸರಿನ ಖಾತೆಗಳಿಂದ ಯಾರೂ ಮುಂದೆ ಬರುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ. ಮನೆ ಬಾಡಿಗೆ ನೀಡುವ ವಿಚಾರದಲ್ಲಿ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡಬೇಕೇ ಎಂಬ ಪ್ರಶ್ನೆಯೊಂದಿಗೆ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.