(www.vknews.in) : ಕಾಯಾರಿನ ಬೆಳಕಾಗಿ, ಹಿರಿಯ ಚೇತನರಾಗಿ ಕಾಯಾರಿನ ಮಕ್ಕಳ ಪ್ರೀತ್ಯಾದರಗಳಿಗೆ ಪಾತ್ರರಾಗಿ ಸಾರ್ಥಕ ಬಾಳು ನಡೆಸಿದ್ದ ಬಹು: ಕಾಯಾರ್ ಮುಹಮ್ಮದಾಕ ನವರು ಬುಧವಾರ ನಿಧನರಾಗಿರುವ ವಿಷಯ ಇಡೀ ಕಾಯಾರ್ ವಂಶಾವಳಿಯನ್ನು ತಲ್ಲಣಗೊಳಿಸಿದೆ. ಇದರೊಂದಿಗೆ ಮರ್ಹೂಮ್ ಶೇಖಜ್ಜನವರ ಖುದ್ದು ಮೊಮ್ಮಕ್ಕಳ ಪೈಕಿ ಕಟ್ಟ ಕಡೆಯ ಕೊಂಡಿ ಕೂಡಾ ಕಳಚಿದಂತಾಗಿದೆ.
ಪ್ರತಿಷ್ಠಿತ ಕಾಯಾರ್ ಫ್ಯಾಮಿಲಿಯ ಮೂಲ ಪುರುಷರಾದ ಮರ್ಹೂಮ್ ಕಾಯಾರ್ ಶೇಖಜ್ಜನವರ ಪುತ್ರರಾಗಿದ್ದ, ಮರ್ಹೂಮ್ ಬಡುವಜ್ಜನವರ ಐವರು ಮಕ್ಕಳಲ್ಲಿ ಬದುಕಿ ಉಳಿದಿದ್ದ ಏಕೈಕ ಪುತ್ತರಾಗಿದ್ದರು ನಿಧನರಾದ ಮರ್ಹೂಮ್ ಮುಹಮ್ಮದಾಕನವರು. ಕಾಯಾರಿನ ಪೂರ್ವ ಪರಂಪರೆಯ ಕೊನೆಯ ವ್ಯಕ್ತಿ ಎಂಬ ನೆಲೆಯಲ್ಲಿ ಮಾತ್ರವಲ್ಲ, ತನ್ನ ಧರ್ಮನಿಷ್ಠೆ, ಸದ್ಗುಣ, ಸಹೃದಯತೆ, ಸರಳತೆಯಿಂದಾಗಿ ಇಡೀ ಕಾಯಾರ್ ನಾಡಲ್ಲಿ ಮುಹಮ್ಮದಾಕನವರು ಜನಾನುರಾಗಿಯಾಗಿದ್ದರು.
90 ದಾಟಿದ್ದ ವಯಸ್ಸಲ್ಲೂ ಹೇಳತಕ್ಕ ಅನಾರೋಗ್ಯ ಸಮಸ್ಯೆಗಳಿಲ್ಲದೆ ಸರಿಸುಮಾರು ಆರೋಗ್ಯವಂತರಾಗಿಯೇ ಇದ್ದರು. ಪರಂಪರೆಯ ತಾಜಾತನ ಮತ್ತು ಈಮಾನಿನ ಅಂಶ ಗೋಚರಿಸುವ ಶೋಭಿತ ಮುಖವಾಗಿತ್ತು ಅವರದ್ದು. ಕಂಡವರು ಎದ್ದು ಗೌರವ ಸೂಚಿಸುವಂತಹ ದೇಹ ಪ್ರಕೃತಿಯಾಗಿದ್ದ ಅವರು ನಡೆನುಡಿಗಳಲ್ಲೂ ಆ ಗೌರವವನ್ನು ಉಳಿಸಿಕೊಂಡು ಬಂದಿದ್ದರು.
ಮರಣದ ತನಕ ದೀನೀ ನಿಷ್ಠೆಯಲ್ಲೇ ಅಚಲರಾಗಿದ್ದ ಅವರು ಓರ್ವ ಪುತ್ರನನ್ನು (ಇಸ್ಮಾಯಿಲ್ ಮದನಿ) ಆಲಿಮ್ ಮಾಡಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಅಂದು ಕಾಯಾರ್ ಫ್ಯಾಮಿಲಿಯ ಚರಿತ್ರೆ ಪುಸ್ತಕಕ್ಕೆ ಮಾಹಿತಿ ಪಡೆಯಲೆಂದು ಮುಹಮ್ಮದಾಕರನ್ನು ಸಂದರ್ಶಿಸಿದ್ದ ಸಾಲೆತ್ತೂರು ಫೈಝಿಯವರು ಸಂದರ್ಶನ ಮುಗಿಸಿ ಹೊರಟು ಬರುವಾಗ “ಅವರ ಮುಖದಲ್ಲಿ ಈಮಾನಿನ ಶೋಭೆ ಎದ್ದು ಕಾಣುತ್ತಿದೆ” ಎಂದು ನನ್ನಲ್ಲಿ ಹೇಳಿದ್ದು ನೆನಪಾಗುತ್ತಿದೆ.
ನಿಜಕ್ಕೂ ಇಂದು ಕಾಯಾರಿನ ಒಂದು ಬೆಳಕು ಕಣ್ಮರೆಯಾಗಿದೆ. ಮರ್ಹೂಮ್ ಶೇಖಜ್ಜನವರ ನೇರ ಮೊಮ್ಮಕ್ಕಳ ಪೈಕಿ ಕಟ್ಟ ಕಡೆಯ ವ್ಯಕ್ತಿ ಕೂಡಾ ಹೊರಟು ಹೋಗಿದ್ದಾರೆ. ಕಾಯಾರಿನ ಬೆಳಕು ಎಂಬಂತೆ ಇಡೀ ಊರವರು ಗೌರವಾದರಗಳಿಂದ ಕಾಣುತ್ತಿದ್ದ ಮುಹಮ್ಮದಾಕವರು ಕಣ್ಮರೆಯಾದರೂ ಕಾಯಾರ್ ಫ್ಯಾಮಿಲಿಯ ಇತಿಹಾಸದಲ್ಲಿ ಮನ್ಮರೆಯಾಗದೆ ಉಳಿಯಲಿದ್ದಾರೆ. ಅವರ ಆತ್ಮಕ್ಕೆ ಅಲ್ಲಾಹು ಚಿರಶಾಂತಿ ನೀಡಲಿ, ಕುಟುಂಬಕ್ಕೆ ಸಾಂತ್ವನ ಕೊಡಲಿ.
– ಡಿ. ಐ. ಅಬೂಬಕರ್ ಕೈರಂಗಳ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.