ಕಾವು (www.vknews.in) : ಮುಸ್ಲಿಂ ಸಮುದಾಯವೆಂದರೆ ಎಲ್ಲಾ ಜಾತಿ ಜನಾಂಗದ ಹಿತವನ್ನು ಗಮನದಲ್ಲಿಟ್ಟು ಅವರ ಪರವಾಗಿ ಬದುಕಿ ಮಾದರಿ ಸೃಷ್ಟಿಸ ಬೇಕಾದವರಾಗಿದ್ದು ಇತರ ಸಮುದಾಯವೂ ಮುಸ್ಲಿಮರಿಂದ ಇದನ್ನೇ ಬಯಸುತ್ತಿದೆ. ಆದ್ದರಿಂದಲೇ ಮುಸ್ಲಿಮ್ ವ್ಯಕ್ತಿಗಳಿಂದ ಏನಾದರೂ ತಪ್ಪು ಕಂಡು ಬಂದರೆ ಅದನ್ನು ಬಹಳ ಗಂಭೀರವಾಗಿ ಪರಿಗಣಿಸುವ ರೂಡಿ ಜಗತ್ತಿನಲ್ಲೇ ಇದೆ. ಒಂದರ್ಥದಲ್ಲಿ ಇದು ಮುಸ್ಲಿಮರ ಮಟ್ಟಿಗೆ ಅನುಗ್ರಹವೇ ಆಗಿದೆ. ಇದರಿಂದಾಗಿ ಮುಸ್ಲಿಮರಿಂದ ತಪ್ಪುಗಳು ಸಂಭವಿಸುವುದು ಕಡಿಮೆಯಾಗುತ್ತಿದೆ ಎಂದು ಪ್ರತಿಷ್ಟಿತ ಕಾವು ಮಾಡನ್ನೂರು ಜುಮಾ ಮಸೀದಿಯಲ್ಲಿ ಈದ್ ಸಂದೇಶ ನೀಡುತ್ತಾ ಖತೀಬ್ ಎಸ್.ಬಿ. ದಾರಿಮಿ ಹೇಳಿದ್ದಾರೆ.
ಡ್ರಗ್ಸ್ ,ಮಾದಕ ದ್ರವ್ಯಗಳ ಪಿಡುಗು ಇವತ್ತಿನ ಕಾಲಮಾನದಲ್ಲಿ ಅಲ್ಲಲ್ಲಿ ಕಂಡು ಬರುತ್ತಿದ್ದರೂ ಅಪರೂಪದಲ್ಲಿ ಒಂದಿಬ್ಬರು ಯುವಕರು ಮಾತ್ರ ಅದರ ದಾಸರಾಗಿದ್ದಾರೆ. ಆದರೆ ಅದನ್ನೇ ವೈಭವೀಕರಿಸಿ ಇಡೀ ಯುವ ಸಮುದಾಯವನ್ನೇ ಸಂಶಯ ದೃಷ್ಟಿಯಿಂದ ನೋಡುವ ಪ್ರವೃತಿ ಹೆಚ್ಚುತ್ತಿದ್ದು ಇದು ಸರಿಯಾದ ಕ್ರಮವಲ್ಲ.
ಇಂದು ಬಹುತೇಕ ಎಲ್ಲಾ ಮುಸ್ಲಿಂ ಯುವಕರು ಸಮಾಜ ಸೇವೆ, ದೇಶ ಸೇವೆ, ಶೈಕ್ಷಣಿಕ ಸೇವೆಯಲ್ಲಿ ನಿರತರಾಗಿದ್ದು ದೇಶ ವಿದೇಶಗಳಲ್ಲಿ ಮೈ ಮುರಿದು ದುಡಿದು ತಂದೆ ತಾಯಿ ಮಡದಿ ಮಕ್ಕಳನ್ನು ಪೋಷಿಸುತ್ತಿದ್ದಾರೆ. ಅದರ ಜೊತೆಗೆ ಮಾನವೀಯ ಸೇವೆಯಲ್ಲಿ ಕೂಡ ತೊಡಗಿಸಿ ಕೊಂಡಿದ್ದಾರೆ. ವಯೋವೃದ್ದ ತಂದೆ ತಾಯಿಗಳ ಆರೈಕೆಯಲ್ಲಿ ಮುಸ್ಲಿಮ್ ಯುವಕರದ್ದು ಎತ್ತಿದ ಕೈ.
ವೃದ್ದಾಶ್ರಮದಲ್ಲಿ ಮುಸ್ಲಿಂ ಹೆತ್ತವರನ್ನು ಕಾಣ ಸಿಗುವುದು ಬಹಳ ಅಪರೂಪ. ಇಂತಹದನ್ನು ಪ್ರೇರೇಸುವುದು ಸಾಮಾಜಿಕ ಕರ್ತವ್ಯವಾಗಿದೆ. ಯುವ ಸಮೂಹವನ್ನು ಬಳಸಿ ಕೊಳ್ಳದ ದೇಶಕ್ಕಾಗಲಿ ಸಮುದಾಯಕ್ಕಾಗಲಿ ಅಭಿವೃದ್ದಿ ಪಥದಲ್ಲಿ ಸಾಗಲಿಕ್ಕಾಗದು ಎಂದು ಅಭಿಪ್ರಾಯ ಪಟ್ಟ ಎಸ್.ಬಿ. ದಾರಿಮಿ ಉಸ್ತಾದ್, ಊರ ಪರವೂರ ದಾನಿಗಳ ಸಹಾಯ ಸಹಕಾರದಿಂದ ಸುಮಾರು ನಾನೂರು ವಿಧ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಊಟ ವಸತಿ ಕಲ್ಪಿಸಿ ಮತ ಬೌತಿಕ ಜ್ಞಾನ ನೀಡುವ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರಿನಲ್ಲಿ ಕಾರ್ಯಾಚರಿಸುತ್ತಿರುವುದು ಜಿಲ್ಲೆಯ ಮುಸ್ಲಿಮರಿಗೆ ಅಭಿಮಾನದ ಸಂಗತಿ ಎಂದರು.
ಮುಂದುವರಿದು ಮಾತನಾಡಿದ ಅವರು “ಈದ್ ಆಚರಿಸುವ ಮುಸ್ಲಿಮರು ಇತರ ಸಮುದಾಯದ ಜೊತೆಗೂ ಈದ್ ಸಂತಸವನ್ನು ಹಂಚುವ ಮೂಲಕ ಉತ್ತಮ ಭಾಂದವ್ಯ ಸ್ಥಾಪಿಸಿ ಶಾಂತಿಯುತ ಸಮಾಜವನ್ನು ನಿರ್ಮಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಬೇಕು. ಸೃಷ್ಟಿಕರ್ತ ಅಲ್ಲಾಹು ವಿನಿಗೆ ಹತ್ತಿರವಾಗಲು ಮಾನವನ ಸೇವೆಯೇ ಬಹಳ ಮುಖ್ಯವಾಗುತ್ತದೆ. ಮನುಷ್ಯನನ್ನು ಬಿಟ್ಟು ಸೃಷ್ಟಿಕರ್ತನಿಗೆ ಹತ್ತಿರವಾಗ ಬಯಸಿದರೆ ಅದು ನಡೆಯದ ಮಾತು ಎಂದು ದಾರಿಮಿ ಉಸ್ತಾದರು ಮಾರ್ಮಿಕವಾಗಿ ನುಡಿದರು.
✍ ಝುಹ್ರಿ ಪುಣಚ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.