ಶಿಡ್ಲಘಟ್ಟ:(vknews.in)ತಾಲ್ಲೂಕಿನ ಜಂಗಮಕೋಟೆ ಹೋಬಳಿ ವ್ಯಾಪ್ತಿಯ ಹೊಸಪೇಟೆ ಗ್ರಾಮದಲ್ಲಿ ಶ್ರೀ ಮುನೇಶ್ವರಸ್ವಾಮಿ ಹಾಗೂ ಶ್ರೀ ಸಪ್ತಮಾತೃಕೆ ದೇವಾಲಯದ ಜೀರ್ಣೋದ್ಧಾರ ಹಾಗೂ ನೂತನ ಶಿಲಾವಿಗ್ರಹ ಪ್ರತಿಷ್ಠಾಪನಾ ಮಹೋತ್ಸವವು ಜೂನ್ 20, ಶುಕ್ರವಾರದಂದು ಗ್ರಾಮಸ್ಥರ ಭಕ್ತಿ ಭಾವದ ನಡುವೆ ವೈಭವೋಪೇತವಾಗಿ ನೆರವೇರಿತು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕೆಪಿಸಿಸಿ ಸಂಯೋಜಕರಾದ ರಾಜೀವ್ ಗೌಡ ರವರು ದೇವಾಲಯ ಅಭಿವೃದ್ಧಿ ಟ್ರಸ್ಟ್ಗೆ ರೂ. 1.5 ಲಕ್ಷದ ಚೆಕ್ ಅನ್ನು ಭಕ್ತ ಸಮುದಾಯದ ಮುಂದೇ ಹಸ್ತಾಂತರಿಸಿದರು. ಬಳಿಕ ಅವರು ದೇವರ ದರ್ಶನ ಪಡೆದು ಮಾತನಾಡಿದ ಅವರು, ಹೊಸಪೇಟೆ ಗ್ರಾಮದಲ್ಲಿ ಮುನೇಶ್ವರಸ್ವಾಮಿ ಹಾಗೂ ಸಪ್ತಮಾತೃಕೆ ದೇವಾಲಯದ ಪುನರ್ ನಿರ್ಮಾಣ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದ್ದು ಈ ಭಗವಂತ ಶಿಡ್ಲಘಟ್ಟ ಕ್ಷೇತ್ರದ ಜನರಿಗೆ ಉತ್ತಮ ಮಳೆ, ಉತ್ತಮ ಆರ್ಥಿಕ ಸ್ಥಿತಿ, ಉತ್ತಮ ಶಿಕ್ಷಣ ಹಾಗೂ ಉತ್ತಮ ಉದ್ಯೋಗಾವಕಾಶ ನೀಡಲಿ ಎಂದು ಹಾರೈಸುತ್ತೇನೆ. ದೇವಸ್ಥಾನದ ಮುಂದಿನ ಅಭಿವೃದ್ಧಿಗೆ ನನಗಿರುವಷ್ಟು ನೆರವು ಕೊಡುತ್ತೇನೆ ಎಂದು ಭರವಸೆ ನೀಡಿದರು.
ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದ ದೇವಾಲಯದಲ್ಲಿ ವಿದ್ಯಾವಂತ ಅರ್ಚಕರ ನೇತೃತ್ವದಲ್ಲಿ ಕಳಶಗಳ ಉತ್ತರಪೂಜೆ, ದೇವರ ಪ್ರಾಣ ಪ್ರತಿಷ್ಠಾಪನೆ, ನೇತ್ರೋನ್ನಿಲನ, ಮಹಾಗಣಹೋಮ, ನವಗ್ರಹ ಹೋಮ, ವಾಸ್ತು ಹೋಮ, ಕಳಾ ಹೋಮ, ಪೂರ್ಣಾಹುತಿ, ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಹಾಗೂ ಮಹಾಮಂಗಳಾರತಿ ಮುಂತಾದ ವೈದಿಕ ವಿಧಿಗಳು ಆಚಾರ ಸಂಪ್ರದಾಯದಂತೆ ವಿಜೃಂಭಣೆಯಿಂದ ನೆರವೇರಿದವು.
ವಿಡಿಯೋ ವೀಕ್ಷಿಸಿ
ಹೊಸಪೇಟೆ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತಾದಿಗಳು ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು. ಭಕ್ತರಿಗಾಗಿ ಅನ್ನ ಸಂತರ್ಪಣೆ, ಕುಡಿಯುವ ನೀರಿನ ವ್ಯವಸ್ಥೆ, ಶಾಮಿಯಾನ, ಕುರ್ಚಿ ಮುಂತಾದ ವ್ಯವಸ್ಥೆಗಳನ್ನು ಸ್ಥಳೀಯ ಯುವಕರು ಹಾಗೂ ಗ್ರಾಮದ ಹಿರಿಯರು ಶ್ರಮದಾನದ ಮೂಲಕ ಸಿದ್ಧಗೊಳಿಸಿದ್ದರು.
ಸ್ಥಳೀಯ ನಾಯಕರುಗಳೊಂದಿಗೆ ಹಿತಚಿಂತಕರು ಹಾಗೂ ದೇವಾಲಯ ಅಭಿವೃದ್ಧಿ ಸಮಿತಿಯ ಪ್ರಮುಖರು ಗ್ರಾಮದಲ್ಲಿ ಇನ್ನಷ್ಟು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಿದ್ದಾರೆ. ದೇವಾಲಯದ ನಿರ್ವಹಣೆಗೆ ವಿಶಿಷ್ಟ ಸಮಿತಿಯನ್ನೂ ರಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ದೇವಾಲಯವನ್ನು ಹೆಚ್ಚು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಲು ಗ್ರಾಮಸ್ಥರು ಶ್ರಮಿಸುವುದಾಗಿ ತಿಳಿಸಿದರು.
ಈ ಧಾರ್ಮಿಕ ಮಹೋತ್ಸವದಲ್ಲಿ ಕೆ. ಗುಡಿಯಪ್ಪ, ಮಂಜುನಾಥ್ ಗೌಡ, ಹೆಚ್.ಎಂ. ಮುನಿಯಪ್ಪ, ಕೃಷ್ಣಪ್ಪ, ದೇವರಾಜ್, ಆಂಜಿನಪ್ಪ ಸೇರಿದಂತೆ ವಿವಿಧ ರಾಜಕೀಯ, ಸಾಮಾಜಿಕ ಮುಖಂಡರು ಹಾಗೂ ಸುತ್ತಮುತ್ತಲಿನ ಹೋಬಳಿ ಗ್ರಾಮಸ್ಥರು ಉಪಸ್ಥಿತರಿದ್ದು ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಸ್ವೀಕರಿಸಿದರು.
ಗ್ರಾಮದ ಹಿರಿಯರು ಹಾಗೂ ಮಹಿಳಾ ಸಂಘಟನೆಗಳ ಸದಸ್ಯರು ಕೂಡಾ ಕಾರ್ಯಕ್ರಮದ ಯಶಸ್ಸಿಗಾಗಿ ತೊಡಗಿದ್ದು, ಗ್ರಾಮಸ್ಥರ ಒಗ್ಗಟ್ಟಿನ ಸಾಕ್ಷಿಯಾಗಿ ಮಹೋತ್ಸವವು ಧಾರ್ಮಿಕ ಹಬ್ಬದಂತೆ ಆಚರಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.