ವರದಿ: ಎನ್. ನಯನ್ ಮಹೇಶ್, ಶಿಡ್ಲಘಟ್ಟ
ಶಿಡ್ಲಘಟ್ಟ:(vknews.in) ಶಿಡ್ಲಘಟ್ಟ ತಾಲೂಕಿನ ಉತ್ತರ ದಿಕ್ಕಿನಲ್ಲಿ ಪಾಪಾಗ್ನಿ ನದಿ ದಡದಲ್ಲಿ ಹಸಿರು ಪ್ರಕೃತಿಯ ಮಡಿಲಿನಲ್ಲಿ ಅಲಂಕರಿಸಿದ ತಲಕಾಯಲಬೆಟ್ಟ, ತಿರುಮಲ ತಿರುಪತಿಯ ಏಳು ಬೆಟ್ಟಗಳ ಸಾಲಿಗೆ ಸೇರಿದ ವಿಶಿಷ್ಟ ತೀರ್ಥ ಕ್ಷೇತ್ರವಾಗಿ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಿದೆ.
ವಿಡಿಯೋ ವೀಕ್ಷಿಸಿ
ತಲಕಾಯಲಬೆಟ್ಟಕ್ಕೆ ಶಿಡ್ಲಘಟ್ಟದಿಂದ ದಿಬ್ಬೂರಹಳ್ಳಿ ಮಾರ್ಗವಾಗಿ ತಲುಪಬಹುದು. ಅಲ್ಲದೇ ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿ ರಾಷ್ಟ್ರೀಯ ಹೆದ್ದಾರಿಯ ಸಾದಲಿ ಕ್ರಾಸ್ ಮೂಲಕ ದಿಬ್ಬೂರಹಳ್ಳಿ ಮಾರ್ಗದಿಂದ ಕೂಡ ತಲುಪಬಹುದಾಗಿದೆ. ಶಿಡ್ಲಘಟ್ಟ ತಾಲೂಕು ಕೇಂದ್ರದಿಂದ ಸುಮಾರು 25 ಕಿಲೋ ಮೀಟರ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾಕೇಂದ್ರದಿಂದ 30 ಕಿಲೋ ಮೀಟರ್ ದೂರದಲ್ಲಿ ಈ ಪವಿತ್ರ ಬೆಟ್ಟ ನೆಲೆಸಿದೆ.
ಬೆಟ್ಟದ ತಪ್ಪಲಿನಲ್ಲಿ ಶ್ರೀಭೂನೀಲಾ ಶ್ರೀದೇವಿ ಸಮೇತ ವೆಂಕಟರಮಣಸ್ವಾಮಿ ದೇವಾಲಯ ಉನ್ನತ ಭಕ್ತಿ ಭಾವನೆಗೆ ಉತ್ತೇಜನ ನೀಡುತ್ತಿದೆ. ಐತಿಹಾಸಿಕ, ಧಾರ್ಮಿಕ ಹಾಗೂ ಪ್ರಕೃತಿವೈಭವದಿಂದ ಕೂಡಿದ ತಲಕಾಯಲಬೆಟ್ಟವು ಭಕ್ತರನ್ನಷ್ಟೇ ಅಲ್ಲದೆ ಪ್ರಕೃತಿಪ್ರಿಯರು ಹಾಗೂ ಪ್ರವಾಸಿಗರಿಗೆ ಹೇಳಿ ಮಾಡಿಸಿದ ತಾಣವಾಗಿದೆ.
ಬೆಟ್ಟದ ಇಳಿಜಾರಿನಲ್ಲಿ ಸುಂದರ ಕಲ್ಯಾಣಿ ಕಾಣುತ್ತದೆ. ಸಂಪೂರ್ಣ ಕಲ್ಲಿನಿಂದ ನಿರ್ಮಿತವಾದ ಈ ಕಲ್ಯಾಣಿಯಲ್ಲಿ ವರ್ಷ ಪೂರ್ತಿ 365 ದಿನಗಳೂ ಸ್ವಚ್ಛ ನೀರು ಲಭ್ಯವಿರುತ್ತದೆ. ಈಜು ಪ್ರಿಯರಿಗೆ ಇದೊಂದು ವಿಶಿಷ್ಟ ಆಕರ್ಷಣೆ. ಪ್ರವಾಸಿಗರು ಇಲ್ಲಿ ನಿರಾಳವಾಗಿ ವಿಹರಿಸಬಹುದಾಗಿದೆ. ಅಲ್ಲದೆ ಬೆಟ್ಟದ ಇಳಿಜಾರಿನಲ್ಲಿರುವ ವಿಶಾಲ ಕೆರೆ ಹಾಗೂ ಅದರ ಸುತ್ತಲಿನ ಹಸಿರು ಪ್ರಾಕೃತಿಕ ನೋಟ ಕಣ್ಣುಗಳಿಗೆ ತಂಪನ್ನು ನೀಡುತ್ತದೆ. ಕೆರೆಕಟ್ಟೆಯ ಮೇಲೆ ನಿಂತು ಸುತ್ತಲೂ ನೋಡುವ ದೃಶ್ಯ ಮನಸ್ಸಿಗೆ ಆನಂದವನ್ನು ನೀಡುತ್ತದೆ.
ಬೆಟ್ಟದ ಚಿಕ್ಕ ಪಥಗಳಲ್ಲಿ ನಡೆದು ಬೆಳೆಯುವ ವಿಳಾಸಿ ಗಿಡ ಮರಗಳು, ಹೂವುಗಳು, ಬಳ್ಳಿಗಳು ಪ್ರಕೃತಿಯ ನೈಸರ್ಗಿಕ ಮೆರವಣಿಗೆಯಂತಿವೆ. ಅಲ್ಲದೇ ಹಕ್ಕಿಗಳ ಚಿಲಿಪಿಲಿ ಸದ್ದು, ಮರೆಯಾದಲ್ಲಿ ಕಾಣಿಸಿಕೊಳ್ಳುವ ಮೊಲಗಳು, ನವಿಲುಗಳು ಕಣ್ತುಂಬಿಕೊಳ್ಳುವ ನೋಟ ಪ್ರವಾಸಿಗರಿಗೆ ಹೊಸ ಅನುಭವ ನೀಡುತ್ತದೆ.
ಬೆಟ್ಟದ ಮೆಟ್ಟಿಲು ವ್ಯವಸ್ಥೆಯಿಂದ ಕಿರಿಯರೂ ವೃದ್ಧರೂ ಸುಲಭವಾಗಿ ಮೇಲಕ್ಕೆ ಏರಿ ದೇವಾಲಯಕ್ಕೆ ಭೇಟಿ ನೀಡಬಹುದು. ಯುವ ಚಾರಣ ಪ್ರಿಯರು ಬೆಟ್ಟದ ಪಥಗಳಲ್ಲಿ ನಡೆ ಸುಂದರ ದೃಶ್ಯಗಳನ್ನು ಅನುಭವಿಸಬಹುದು. ಕುಟುಂಬ ಸಮೇತ ಬರುವವರು ಊಟ ಪಾನೀಯಗಳೊಂದಿಗೆ ಇಲ್ಲಿ ನೆಮ್ಮದಿಯಿಂದ ಸಮಯ ಕಳೆಯಬಹುದು. ಸೆಲ್ಫಿ ಪ್ರಿಯರಿಗೆ ವಿವಿಧ ದೃಶ್ಯ ಸೌಂದರ್ಯದಲ್ಲಿ ಛಾಯಾಚಿತ್ರ ಸೆರೆ ಹಿಡಿಯಲು ಇದು ಅತ್ಯುತ್ತಮ ತಾಣವಾಗಿದೆ.
ಅಲ್ಲದೆ ತಲಕಾಯಲಬೆಟ್ಟದಲ್ಲಿ ಕಲ್ಯಾಣ ಮಂಟಪವಿರುವುದರಿಂದ ಮದುವೆ ಹಾಗೂ ವಿವಿಧ ಶುಭಕಾರ್ಯಗಳನ್ನು ನೆರವೇರಿಸಲು ಅವಕಾಶ ಇದೆ. ಪ್ರವಾಸಿಗರಿಗೆ ವಸತಿ ವ್ಯವಸ್ಥೆಯೂ ಒದಗಿಸಲಾಗಿದೆ. ಹರಕೆ ಹೊತ್ತ ಭಕ್ತರಿಗೆ ಮುಡಿ ಸಮರ್ಪಿಸಲು ಸಂಪೂರ್ಣ ವ್ಯವಸ್ಥೆ ಕಲ್ಪಿಸಲಾಗಿದೆ.
ಇಲ್ಲಿನ ಧಾರ್ಮಿಕ ಮಹತ್ವವು ಸಹ ಅಪಾರವಾಗಿದೆ. ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಈ ಬೆಟ್ಟದ ಹೆಸರಿನಲ್ಲಿ ತೆಲುಗು ಭಾಷೆಯ ಪ್ರಭಾವ ಕಂಡುಬರುತ್ತದೆ. ತಲಕಾಯಲಬೆಟ್ಟವನ್ನು ಹಿಂದಿನ ಕಾಲದಲ್ಲಿ ‘ತಲಕಾಚಿನಕೊಂಡ’, ‘ತಲೆಕಾಯ್ದಬೆಟ್ಟ’ ಎಂದು ಕರೆಯಲಾಗುತ್ತಿತ್ತು. ಕಾಲಾಂತರದಲ್ಲಿ ಇದು ‘ತಲಕಾಯಲಬೆಟ್ಟ’ ಎಂಬ ಹೆಸರಿನಿಂದ ಪ್ರಸಿದ್ಧಿಯುತವಾಗಿದೆ.
ಸ್ಥಳೀಯ ಶ್ರದ್ಧಾಪ್ರಕಾರ ಮಹಾಕಾವ್ಯ ಶ್ರೀರಾಮಾಯಣದ ಕವಿ ಶ್ರೀ ಮಹರ್ಷಿ ವಾಲ್ಮೀಕಿಯ ಬಾಲ್ಯ ಜೀವನ ಇಲ್ಲಿಯೇ ಕಳೆದಿದ್ದು, ಇದೇ ಸ್ಥಳದಲ್ಲಿ ಅವರಿಗೆ ಮೋಕ್ಷ ದೊರೆತಿದೆ ಎಂಬ ಪ್ರತೀತಿ ಇದೆ. ಇದನ್ನು ದೃಢಪಡಿಸುವಂತೆ ಮಹರ್ಷಿಯ ವಾಸಸ್ಥಳವೆಂದು ಹೇಳಲಾಗುವ ಗುಹೆಯಲ್ಲಿ ಅವರ ವಿಗ್ರಹವನ್ನು ಪ್ರತಿಷ್ಠಾಪಿಸಿ ಪ್ರತಿದಿನ ಪೂಜೆ ಪುನಸ್ಕಾರಗಳು ನಡೆಯುತ್ತಿವೆ.
ಹೀಗೆ ವಿಶಿಷ್ಟ ಧಾರ್ಮಿಕ ಹಿನ್ನೆಲೆ, ನೈಸರ್ಗಿಕ ಸೌಂದರ್ಯ ಮತ್ತು ಐತಿಹಾಸಿಕ ಮಹತ್ವವನ್ನು ಒಟ್ಟುಗೂಡಿಸಿಕೊಂಡಿರುವ ತಲಕಾಯಲಬೆಟ್ಟ ಶಿಡ್ಲಘಟ್ಟದ ಉತ್ತರ ದಿಕ್ಕಿನ ಆಕರ್ಷಕ ತೀರ್ಥ ಕ್ಷೇತ್ರವಾಗಿ ಭಕ್ತರನ್ನು ಹಾಗೂ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.