(www.vknews.in) : ಯಾವುದೇ ರಾಷ್ಟ್ರದ ಸಂವಿಧಾನ ಮತ್ತು ಕಾನೂನುಗಳು ಪರಿಣಾಮಕಾರಿಯಾಗಿ ಜಾರಿಯಾಗಬೇಕಾದರೆ, ಜನಸಾಮಾನ್ಯರಿಗೆ ಕಾನೂನಿನ ಅರಿವು ಅತ್ಯವಶ್ಯಕ. ಈ ದೃಷ್ಟಿಯಿಂದ, ಸ-ಆದಿಯಾ ಕಾನೂನು ಕಾಲೇಜಿನ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಲು ನನಗೆ ಅತ್ಯಂತ ಸಂತೋಷ ಮತ್ತು ಹೆಮ್ಮೆಯೆನಿಸುತ್ತದೆ.
ಇದು ಒಂದು ಕೇವಲ ಔಪಚಾರಿಕ ಕಾರ್ಯಕ್ರಮವಲ್ಲ, ಇದು ಒಂದು ಮಹತ್ವಪೂರ್ಣ ಶೈಕ್ಷಣಿಕ ಕ್ರಾಂತಿಯ ಶುಭಾರಂಭವಾಗಿದೆ. ಇಂದು ನಾವು ಮೌಲ್ಯಗಳು, ಸಾಮಾಜಿಕ ನ್ಯಾಯ ಮತ್ತು ಜ್ಞಾನಾಧಾರಿತವಾಗಿರುವ ಭವಿಷ್ಯಕ್ಕೆ ಶಿಲಾನ್ಯಾಸ ಮಾಡುತ್ತಿದ್ದೇವೆ.
ಇಲ್ಲಿ ಉದಯಿಸಲಿರುವ ಕಾಲೇಜು ಕೇವಲ ಇಟ್ಟಿಗೆ ಮತ್ತು ಸಿಮೆಂಟ್ನ ರಚನೆಯಲ್ಲ – ಇದು ನ್ಯಾಯ ದೇಗುಲ , ಕಾನೂನು ಚಿಂತಕರ ಶಕ್ತಿ ಕೇಂದ್ರ, ಯುವ ಮನಸ್ಸುಗಳಲ್ಲಿ *ಕಾನೂನನ್ನು ಜೀವಂತವಾಗಿರಿಸುವ, ಸಾಂವಿಧಾನಿಕ ಚೇತನವನ್ನು ಬೆಳಗಿಸುವ ಶಕ್ತಿ ಕೇಂದ್ರ.
ಈ ಪವಿತ್ರ ಶಿಕ್ಷಣ ಕ್ಷೇತ್ರದಿಂದ ಮುಂದಿನ ದಿನಗಳಲ್ಲಿ ಉದಯಿಸಲಿದ್ದಾರೆ – ಸತ್ಯಕ್ಕಾಗಿ ಹೋರಡುವ ವಕೀಲರು, – ನ್ಯಾಯ ಮತ್ತು ಸಮಾನತೆಯನ್ನು ಎತ್ತಿಹಿಡಿಯುವ ಪ್ರಜ್ಞಾವಂತ ನ್ಯಾಯಮೂರ್ತಿಗಳು, – ಧ್ವನಿ ಇಲ್ಲದವರ ಧ್ವನಿಯಾಗುವ ದೀನ ದುರ್ಬಲರ ಪರವಾಗಿ ನಿಲ್ಲುವ ನಿಸ್ವಾರ್ಥ ಸಮಾಜ ಸುಧಾರಕರು, ಮತ್ತು – ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವ ಮೌಲ್ಯಗಳಿಗಾಗಿ ಹೋರಡುವ ಜವಾಬ್ದಾರಿಯುತ ನಾಗರಿಕರು.
ವಕೀಲಿ ಕೇವಲ ವೃತ್ತಿ ಮಾತ್ರವಲ್ಲ, ಅದು ಒಂದು ಧ್ಯೇಯ. ಇದು ಕೇವಲ ಮೊಕದ್ದಮೆಗಳನ್ನು ಜಯಿಸುವ ಹಾದಿ ಅಲ್ಲ, ವ್ಯಕ್ತಿಗಳನ್ನು ಸಬಲೀಕರಣಗೊಳಿಸುವ ಮತ್ತು ಸಮಾಜಗಳನ್ನು ಪರಿವರ್ತಿಸುವ ವಿಮೋಚನೆಯ ಬೆಳಕು.
ಆದ್ದರಿಂದ, ಕಾನೂನು ಕಾಲೇಜುಗಳು ಕೇವಲ ಶೈಕ್ಷಣಿಕ ಸಂಸ್ಥೆಗಳಲ್ಲ; ಅವು ಸಾಮಾಜಿಕ ಪರಿವರ್ತನೆಯ ವೇಗವರ್ಧಕಗಳು. ಅವು ವಿದ್ಯಾರ್ಥಿಗಳಿಗೆ ವಿಮರ್ಶಾತ್ಮಕವಾಗಿ ಚಿಂತಿಸಲು, ನಿರ್ಭಯವಾಗಿ ಪ್ರಶ್ನಿಸಲು, ವಿವೇಕಬದ್ಧವಾಗಿ ತರ್ಕಿಸಲು ಮತ್ತು ಮುಖ್ಯವಾಗಿ ನ್ಯಾಯ ಮತ್ತು ಸತ್ಯದ ಪರವಾಗಿ ಸ್ಥಿರವಾಗಿ ನಿಲ್ಲಲು ಪ್ರೇರೇಪಣೆ ನೀಡುತ್ತದೆ. ಭವಿಷ್ಯದ ದಿನಗಳಲ್ಲಿ ಮುಗ್ಧರ ರಕ್ಷಣೆ, ವ್ಯವಸ್ಥಿತ ಅನ್ಯಾಯದ ವಿರುದ್ಧ ಹೋರಡುವ ಧೈರ್ಯ, ಅಥವಾ ರಾಷ್ಟ್ರದ ಕಾನೂನು ರೂಪಿಸುವ ಸಾಮರ್ಥ್ಯ — ಈ ಎಲ್ಲ ಶಕ್ತಿಗಳ ಉಗಮ ಈ ಕಟ್ಟಡದೊಳಗಿನ ತರಗತಿಗಳಲ್ಲಿ ರೂಪುಗೊಳ್ಳಲಿವೆ.
ಜಾಮಿಯಾ ಸ-ಆದಿಯಾ ಅರೇಬಿಯಾ ಉತ್ತರ ಕೇರಳದಲ್ಲಿ ಭರವಸೆ, ಜ್ಞಾನ ಮತ್ತು ಸಾಮಾಜಿಕ ಸೇವೆಯ ಉಜ್ವಲ ಪ್ರತೀಕವಾಗಿ ರೂಪುಗೊಂಡಿದೆ. ಮೂರು ದಶಕಗಳಿಗೂ ಹೆಚ್ಚು ಕಾಲ ಸಮಾಜಕ್ಕೆ ಅಮೂಲ್ಯ ಸೇವೆ ಸಲ್ಲಿಸುತ್ತಾ, ಜನರ ನಂಬಿಕೆಗೆ ಪಾತ್ರವಾಗಿದೆ. ಈ ಧಾರ್ಮಿಕ ಹಾಗೂ ಶೈಕ್ಷಣಿಕ ಪರಂಪರೆಯ ತಳಹದಿಯನ್ನು ಬಲಪಡಿಸಿದವರು ತಾಜುಲ್ ಉಲಮಾ ಉಳ್ಳಾಳ ತಂಙಳ್, ನೂರುಲ್ ಉಲಮಾ ಎಂ.ಎ.ಉಸ್ತಾದ್ ಹಾಗೂ ಕಲ್ಲಟ್ರ ಅಬ್ದುಲ್ ಖಾದರ್ ಹಾಜಿ ಅವರು. ಅವರ ದೂರದರ್ಶಿತ್ವ ಮತ್ತು ಮಾರ್ಗದರ್ಶನ, ಅದಕ್ಕೆ ಪೂರಕವಾಗಿ ಜನಾಬ್ ಎಂ. ಎ. ಅಬ್ದುಲ್ ಖಾದರ್ ಮುಸ್ಲಿಯಾರ್, ವಿಶ್ವವಿಖ್ಯಾತ ಮತ-ಬೌತಿಕ ಸಂಸ್ಥೆಯ ರೂವಾರಿ ಶೈಖುನಾ ಎ.ಪಿ.ಉಸ್ತಾದ್ ಹಾಗೂ ಕುಂಬೋಳ್ ತಂಙಳ್ ರವರ ರಚನಾತ್ಮಕ ಮತ್ತು ಕ್ರಿಯಾತ್ಮಕ ನಾಯಕತ್ವದ ಫಲವಾಗಿ, ಜಾಮಿಯಾ ಸ-ಅದಿಯಾ ಇಂದು ಭಾರತದ ಅತ್ಯಂತ ಗೌರವಾನ್ವಿತ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಒಂದಾಗಿ ಬೆಳೆಯಲು ಸಾಧ್ಯವಾಯಿತು.
ಜಾಮಿಯಾ ಸ-ಅದಿಯಾ” ಕೇವಲ ಒಂದು ಸಂಸ್ಥೆಯಲ್ಲ — ಇದು ಶೈಕ್ಷಣಿಕ ಸಬಲೀಕರಣದ ಜೀವಂತ ಸಾಕ್ಷಿ. ಇದು ಮುಂದಿನ ಪೀಳಿಗೆಗೆ ಒಂದು ಮಾರ್ಗದರ್ಶಕ ಬೆಳಕಾಗಿದೆ. ಇಂತಹ ಹಿರಿಮೆಗೆ ಈ ಸಂಸ್ಥೆ ಪಾತ್ರವಾಗುವಂತೆ ಮಾಡಿದ ಪ್ರತಿಯೊಬ್ಬರೂ ಶ್ಲಾಘನೀಯರು. ಇಂದು ಅವರ ಅವಿರತ ಪರಿಶ್ರಮ ಮತ್ತು ತ್ಯಾಗಕ್ಕೆ ನಾವೆಲ್ಲರೂ ಹೃತ್ಪೂರ್ವಕವಾಗಿ ಚಪ್ಪಾಳೆಯ ಮೂಲಕ ಅಭಿನಂದಿಸೋಣ.
ಈಗ ನಾವು ಸಾದಿಯಾ ಕಾನೂನು ಕಾಲೇಜಿನ ಶಿಲಾನ್ಯಾಸದ ಮೂಲಕ ಒಂದು ಸಣ್ಣ ಬೀಜವನ್ನು ಬಿತ್ತುತ್ತಿದ್ದೇವೆ. ಮುಂದೆ ಇದು ಜ್ಞಾನದ ಭವ್ಯ ಆಲದ ಮರವಾಗಿ ಬೆಳೆದು, ತನ್ನ ನೆರಳಿನಲ್ಲಿ ಸತ್ಯ, ನ್ಯಾಯ ಮತ್ತು ಸಮಾನತೆಗೆ ಆಸರೆಯಾಗುವುದು ಎನ್ನುವ ವಿಶ್ವಾಸ ನನಗಿದೆ.
ಸ-ಆದಿಯಾ ಕಾನೂನು ಕಾಲೇಜು ವಿದ್ಯಾರ್ಥಿಗಳಿಗೆ ಕಾನೂನನ್ನು ಕೇವಲ ಒಂದು ವಿಷಯವಾಗಿ ಅಧ್ಯಯನ ಮಾಡಿಸದೆ, ಅದನ್ನು ಅವರ ಜೀವನ ಶೈಲಿಯಾಗಿಸಿ, ಸದೃಢ ಸಮಾಜದ ರೂವಾರಿಗಳನ್ನಾಗಿ ರೂಪಿಸಲಿ ಹಾಗೂ ಭವಿಷ್ಯದ ದಿನಗಳಲ್ಲಿ ಈ ಸಂಸ್ಥೆಯು ಕಾನೂನು ತಾರ್ಕಿಕತೆಯ ನಳಂದ, ಸತ್ಯದ ತಕ್ಷಶಿಲೆ ಮತ್ತು ಸಾಂವಿಧಾನಿಕ ಜ್ಞಾನದ ಕಾಶಿ ಎಂದು ಖ್ಯಾತಿ ಪಡೆಯಲಿ ಎಂದು ಹಾರೈಸುತ್ತೇನೆ.
ನಾವೆಲ್ಲರೂ ಒಟ್ಟಾಗಿ ಎಲ್ಲರ ಉನ್ನತಿ, ಎಲ್ಲರಿಗೂ ಸಮಾನ ಅವಕಾಶ, ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಉದ್ದೇಶದ ಸಫಲತೆಗೆ ಪ್ರಯತ್ನಿಸೋಣ. ಈ ಐತಿಹಾಸಿಕ ದಿನವನ್ನು ಸಾಧ್ಯವಾಗಿಸಲು ತೆರೆಮರೆಯಲ್ಲಿ ಮತ್ತು ಮುಂಚೂಣಿಯಲ್ಲಿ ಅವಿರತವಾಗಿ ಶ್ರಮಿಸಿದ ಎಲ್ಲರಿಗೂ ನಾನು ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ವಿಶೇಷ, ಅರ್ಥಪೂರ್ಣ ಮತ್ತು ಪರಿವರ್ತನಾತ್ಮಕವಾದ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ ಗೌರವಿಸಿದ್ದಕ್ಕಾಗಿ ಕೃತಜ್ಞತೆಗಳನ್ನರ್ಪಿಸುತ್ತಾ ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.