ಬೆಂಗಳೂರು (www.vknews.in) : ಮಹಿಳೆಯ ಸುರಕ್ಷತೆಯ ಗ್ಯಾರಂಟಿಯನ್ನು ರಾಜ್ಯ ಸರಕಾರ ಕೊಡುವುದು ಯಾವಾಗ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಮಹಿಳಾ ವಿಭಾಗದ ಅಧ್ಯಕ್ಷೆ ಸಬೀಹಾ ಪಟೇಲ್ ಅವರು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಕೊಲೆ ಪ್ರಕರಣಗಳಿಗೆ ಕೊನೆ ಎಂದು? ದೇಶ ಸ್ವಾತಂತ್ರ್ಯವಾಗಿ 76 ವರ್ಷಗಳಾದರೂ ಇನ್ನೂ ಮಹಿಳೆಯರಿಗೆ ತನ್ನ ಮಾನ, ಪ್ರಾಣ ಹಾಗೂ ಸ್ವಾತಂತ್ರ್ಯವಾಗಿ ಜೀವಿಸುವ ಹಕ್ಕನ್ನು ಒದಗಿಸುವುದರಲ್ಲಿ ಸರಕಾರಗಳು ಸಂಪೂರ್ಣ ರೀತಿಯಲ್ಲಿ ವಿಫಲವಾಗಿವೆ ಎಂದು ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಕಳೆದ ಎರಡು ದಶಕಗಳಿಂದ ನಿರಂತರ ನಡೆಯುತ್ತಿರುವ ಮಹಿಳೆಯರ ಅತ್ಯಾಚಾರ, ಕೊಲೆ, ದೌರ್ಜನ್ಯ, ಸ್ವಾಭಾವಿಕ ಮರಣಗಳು, ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ನಾಪತ್ತೆಯಾಗಿರುವ ಹಲವಾರು ಪ್ರಕರಣಗಳು ದಾಖಲಾಗಿದ್ದರೂ ಸರಕಾರ ಇದಕ್ಕೆ ತೀವ್ರವಾದ ತನಿಖೆ ನಡೆಸುವುದರಲ್ಲಿ ವಿಫಲವಾಗಿದೆ. ಜುಲೈ 3ರಂದು ವ್ಯಕ್ತಿಯೊಬ್ಬನು ಸಾಕ್ಷ ಸಮೇತ ದೂರು ಸಲ್ಲಿಸಿದರೂ ತಕ್ಷಣವೇ ಸರಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹಲವಾರು ಶವಗಳನ್ನು ಅಲ್ಲಿ ಸಮಾಧಿ ಮಾಡಲಾಗಿದೆ. ಹಲವಾರು ಹೋರಾಟಗಾರರು ರಾಜಕೀಯ ಪಕ್ಷಗಳು ಒತ್ತಡವನ್ನು ಹಾಕಿದ ಮೇಲೆ ಸರಕಾರ ಇದೀಗ ಎಸ್ ಐ ಟಿ ರಚನೆಗೆ ಆದೇಶ ನೀಡಿದೆ.
ಈ ಪ್ರಕರಣಗಳ ಬಗ್ಗೆ ಎಸ್ ಐ ಟಿ ರಚಿಸಿದ ಸರಕಾರ ಪಾರದರ್ಶಕತೆಯಿಂದ ಅತ್ಯಂತ ತೀವ್ರವಾಗಿ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಧರ್ಮಸ್ಥಳದ ಭಾಗದಲ್ಲಿ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಮುಂದೆ ಇಂತಹ ಅತ್ಯಾಚಾರ ಕೊಲೆ ಪ್ರಕರಣಗಳಾಗದೆ ಮಹಿಳೆಯರಿಗೆ ರಕ್ಷಣೆ ನೀಡಬೇಕೆಂದು ರಾಜ್ಯ ಮಹಿಳಾ ವಿಭಾಗ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಸರಕಾರಕ್ಕೆ ಆಗ್ರಹಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.