ಮಂಗಳೂರು (www.vknews.in) : ತಾಲೂಕಿನ ಈಶ್ವರಮಂಗಲದಲ್ಲಿ ಜಾನುವಾರು ಸಾಗಾಟ ವಾಹನ ಚಾಲಕನ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿ ಶಾಸಕ ಅಶೋಕ್ ರೈ ನೀಡಿರುವ ಹೇಳಿಕೆಗೆ ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಭೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ದ.ಕ ಜಿಲ್ಲೆಯಲ್ಲಿ ಇತ್ತೀಚೆಗೆ ಜಾನುವಾರು ಸಾಗಾಟಕ್ಕೆ ಸಂಬಂಧಿಸಿ ನಡೆದಿರುವ ಅನಪೇಕ್ಷಿತ ಘಟನೆಗಳಿಗೆ ಸಂಬಂಧಿಸಿ ನಗರದ ಕಾಂಗ್ರೆಸ್ ಭವನದಲ್ಲಿ ಅಲ್ಪಸಂಖ್ಯಾತ ಘಟಕದ ನಾಯಕರು ಮತ್ತು ಮುಸ್ಲಿಂ ಮುಖಂಡರು ಕೆ.ಕೆ ಶಾಹುಲ್ ಹಮೀದ್ ನೇತೃತ್ವದಲ್ಲಿ ಸಭೆ ನಡೆಸಿದರು. ಈ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಮತ್ತು ಅಲ್ಪಸಂಖ್ಯಾತ ಘಟಕದ ಪ್ರಮುಖರು ಭಾಗಿಯಾಗಿದ್ದರು. ಸಭೆಯಲ್ಲಿ ಈಶ್ವರಮಂಗಲದ ಶೂಟೌಟ್ ಪ್ರಕರಣ ಪ್ರಸ್ತಾಪವಾಗಿದ್ದು, ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಲು ಸರ್ಕಾರವನ್ನು ಆಗ್ರಹಿಸುವಂತೆ ಮುಖಂಡರು ಒತ್ತಾಯಿಸಿದರು. ಈ ಸಂಬಂಧ ಪಕ್ಷದ ಜಿಲ್ಲಾ ಮುಖಂಡರ ಜೊತೆ ಮಾತುಕತೆ ನಡೆಸುವಂತೆ ಒತ್ತಾಯ ಕೇಳಿಬಂದಿದೆ
ಸಭೆಯಲ್ಲಿ ಮಾತನಾಡಿದ ಮಂಗಳೂರಿನ ಓರ್ವ ಮಾಜಿ ಕಾರ್ಪೊರೇಟರ್, ಈಶ್ವಮಂಗಲದಲ್ಲಿ ಶೂಟೌಟ್ ನಡೆದಾಗ ಅದನ್ನು ಬೆಂಬಲಿಸಿ ಶಾಸಕ ಅಶೋಕ್ ಅವರಾಡಿದ್ದ ಮಾತುಗಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ. ಈ ಸಲ ಕಾಲಿಗೆ ಗುಂಡಿಗೆ ಹೊಡೆದಿದ್ದೇವೆ, ಮುಂದೆ ದೇಹದ ಬೇರೆ ಕಡೆಗೂ ಗುಂಡುಬೀಳಬಹುದು ಎಂದು ಎಚ್ಚರಿಕೆ ನೀಡಿರುವ ಅಶೋಕ್ ರೈ ಮತ್ತಷ್ಟು ಪ್ರಚೋದನೆ ಮಾಡಿದ್ದಾರೆ,
ಅಶೋಕ್ ರೈ ಅವರಿಗೆ ಬಿದ್ದ 65 ಸಾವಿರ ಮತಗಳಲ್ಲಿ 50 ಸಾವಿರ ಮುಸ್ಲಿಮರ ಮತಗಳಿವೆ, ಮುಸ್ಲಿಮರ ಮತಗಳಿಂದ ಶಾಸಕರಾಗಿರುವ ಅಶೋಕ್ ರೈ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಜೊತೆ ಸೇರಿಕೊಂಡು ಗುಂಡು ಹೊಡೆಯುವ ಮಾತುಗಳನ್ನಾಡುತ್ತಿದ್ದಾರೆ, ಇಂತಹ ನಾಯಕರ ಮುಂದೆ ನಮ್ಮ ಅಹವಾಲು ಸಲ್ಲಿಸಿದರೆ ಪ್ರಯೋಜನ ಏನು? ಇವರಿಂದ ಮುಸ್ಲಿಂ ಸಮುದಾಯ ಯಾವ ನ್ಯಾಯ ನಿರೀಕ್ಷೆ ಮಾಡಬಹುದು? ಎಂದು ಅವರು ಏರುಧ್ವನಿಯಲ್ಲಿ ಪ್ರಶ್ನಿಸಿದರು ಎಂದು ತಿಳಿದುಬಂದಿದೆ.
ಇದೇ ವೇಳೆ ಅಶೋಕ್ ರೈ ಪರವಾಗಿ ಸುದ್ದಿಗೋಷ್ಠಿ ನಡೆಸಿದ ಪುತ್ತೂರು ಮತ್ತು ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ನ ಮುಸ್ಲಿಂ ಮುಖಂಡರ ಮೇಲೆ ಕೆಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ನೂರುದ್ದೀನ್ ಸಾಲ್ಮರ, ಎಸ್ಡಿಪಿಐ ನಾಯಕರು ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಪಕ್ಷ ಮತ್ತು ಶಾಸಕ ಅಶೋಕ್ ರೈ ಅವರ ಮೇಲೆ ಆರೋಪ ಹೊರಿಸಿದ್ದರಿಂದ ಪಕ್ಷಕ್ಕೆ ಹಾನಿಯಾಗಿತ್ತು. ಪಕ್ಷದ ಹಿತದೃಷ್ಠಿಯಿಂದ ಡ್ಯಾಮೇಜ್ ಕಂಟ್ರೋಲ್ ಮಾಡಲು ನಾವು ಉತ್ತರ ನೀಡಬೇಕಾದ ಅನಿವಾರ್ಯತೆ ಎದುರಾಯಿತು, ಹಾಗಾಗಿ ಸುದ್ದಿಗೋಷ್ಠಿ ನಡೆಸಿದೆವು ಎಂದು ಸಮಜಾಯಿಷಿ ನೀಡಿದರು.
ಸಮುದಾಯದ ಪರ ನಿಲ್ಲುವ ಮುಸ್ಲಿಂ ಮುಖಂಡರನ್ನು ಭಿನ್ನಮತೀಯರು ಎಂದು ಹಣೆಪಟ್ಟಿ ಕಟ್ಟುತ್ತಿದ್ದಾರೆ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತವಾಗಿದ್ದು, ಜಿಲ್ಲೆಯಲ್ಲಿ ಸರಣಿ ಹತ್ಯೆಗಳು ನಡೆದಾಗ ಕೆ.ಕೆ ಶಾಹುಲ್ ಹಮೀದ್ ತನ್ನ ಸಮುದಾಯದ ಪರ ಬಲವಾಗಿ ನಿಂತಿದ್ದಕ್ಕೆ ಅವರನ್ನು ಬಂಡಾಯ ನಾಯಕ ಎಂದು ಬಿಂಬಿಸಿ ಅವರನ್ನು ಪಕ್ಷದಲ್ಲಿ ಕಡೆಗಣಿಸುವ ಪ್ರಯತ್ನಗಳು ನಡೀತು ಎಂದು ಸಭೆಯಲ್ಲಿ ಕೆಲವರು ಅಸಮಾಧಾನ ತೋಡಿಕೊಂಡರು ಎಂದು ತಿಳಿದುಬಂದಿದೆ.
ಸಭೆಯಲ್ಲಿ ನೋವು ತೋಡಿಕೊಂಡ ಸುಹೈಲ್ ಕಂದಕ್, ಮುಸ್ಲಿಂ ಸಮುದಾಯದ ಪರ ಕಾಂಗ್ರೆಸ್ನಲ್ಲಿರುವ ಮುಸ್ಲಿಂ ನಾಯಕರು ಧ್ವನಿ ಎತ್ತಿದರೆ ಅಂಥವರಿಗೆ ಎಸ್ಡಿಪಿಐ ಎಂದು ಹಣೆಪಟ್ಟಿ ಕಟ್ಟುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ. ಜಿಲ್ಲೆಯ ಅಲ್ಪಸಂಖ್ಯಾತರ ಸಮಸ್ಯೆಗಳು ಪರಿಹಾರವಾಗಬೇಕಾದರೆ ಜಿಲ್ಲಾ ಅಲ್ಪಸಂಖ್ಯಾತ ಘಟಕದ ನಿಯೋಗ ಕೆಪಿಸಿಸಿ ಅಧ್ಯಕ್ಷರು ಮತ್ತು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚೆ ನಡೆಸಬೇಕು ಎಂದು ಶಬೀರ್ ಸಿದ್ದಕಟ್ಟೆ ಸಲಹೆ ನೀಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.