(www.vknews.in) : ದೆಹಲಿಯಲ್ಲಿ ನಡೆದ India AI Impact Summit ನಲ್ಲಿ ಪ್ರದರ್ಶಿಸಲಾದ ಒಂದು ರೋಬೋಟಿಕ್ ನಾಯಿ ಕೇವಲ ತಾಂತ್ರಿಕ ಪ್ರದರ್ಶನವಾಗಿರಲಿಲ್ಲ. ಅದು ಶಿಕ್ಷಣ ವ್ಯವಸ್ಥೆಯ ನೈತಿಕತೆಯ ಮೇಲಿನ ಪ್ರಶ್ನಾರ್ಥಕ ಚಿಹ್ನೆಯಾಗಿತ್ತು. Galgotias University “Orion” ಎಂದು ಪರಿಚಯಿಸಿದ ಆ ಸಾಧನವನ್ನು ವಿದ್ಯಾರ್ಥಿಗಳ ಸ್ವಂತ ಸಂಶೋಧನೆ ಎಂದು ಘೋಷಿಸಿ ಭಾರತದ AI ಸಾಮರ್ಥ್ಯದ ಸಂಕೇತವೆಂದು ವೇದಿಕೆಯಲ್ಲಿ ಹೊಗಳಿಸಲಾಗಿತ್ತು. ಆದರೆ ನಂತರ ಹೊರಬಂದ ವಾಸ್ತವ ಆ ಚಿತ್ರವನ್ನೇ ಧ್ವಂಸಗೊಳಿಸಿತು. ದೇಶಕ್ಕೆ ಹೇಳಿತೀರದ ಮುಜುಗರ ಸೃಷ್ಟಿಯಾಯಿತು. ಭಾರತದ ಸಂಶೋಧನೆ ಎಂದು ಬಿಂಬಿಸಿ ಹೊಗಳಿಸಿಕೊಂಡ ರೊಬೊಟಿಕ್ ನಾಯಿ ಚೀನಾದ Unitree ಕಂಪನಿಯ Unitree Go2 ಎಂಬ ವಾಣಿಜ್ಯ ಉತ್ಪನ್ನವಾಗಿತ್ತು. ಕೆಲವು ಲಕ್ಷ ಕೊಟ್ಟು ಖರೀದಿಸಿದ್ದಾಗಿತ್ತು. ಇದೊಂದೇ ಅಲ್ಲ. ದಕ್ಷಿಣ ಕೊರಿಯಾದ Helsel Group ನಿರ್ಮಿತ Striker V3 ARF ಡ್ರೋನ್ ಅನ್ನು ಕೂಡ ವಿದ್ಯಾರ್ಥಿಗಳ ನಿರ್ಮಾಣವೆಂದು ಪ್ರದರ್ಶಿಸಲಾಗಿತ್ತು. ವಿಚಾರ ಬಹಿರಂಗವಾದ ಬಳಿಕ ಶೃಂಗಸಭೆಯ ವಸ್ತುಪ್ರದರ್ಶನ ವಲಯದಿಂದ ಆ ಸ್ಟಾಲ್ ತೆರವುಗೊಳಿಸಲಾಯಿತು.
ವೇದಿಕೆಯಲ್ಲಿ ದೇಶದ ಹೆಸರಿನಲ್ಲಿ ಘೋಷಿಸಲಾದ ಸಾಧನೆ ಮತ್ತು ನಂತರ ಬಹಿರಂಗವಾದ ವಾಸ್ತವ ನಡುವೆ ಇರುವ ಅಂತರವೇ ಈ ವಿವಾದದ ಗಂಭೀರತೆ. ಪ್ರಶ್ನೆ ಸಾಧನಗಳ ಮೂಲದ ಬಗ್ಗೆ ಮಾತ್ರವಲ್ಲ. ಪ್ರಶ್ನೆ ವಿಶ್ವಾಸದ ಬಗ್ಗೆ. ಈ ವಿಶ್ವವಿದ್ಯಾಲಯ ತನ್ನ ಪ್ರವೇಶ ವ್ಯವಸ್ಥೆಯನ್ನು ಮೆರಿಟ್ ಆಧಾರಿತವೆಂದು ಘೋಷಿಸಿಕೊಂಡು, ಮೀಸಲಾತಿಗೆ ಅವಕಾಶವಿಲ್ಲವೆಂದು ಹೆಮ್ಮೆಪಡುತ್ತದೆ. ಆದರೆ ಮೆರಿಟ್ ಕೇವಲ ಪ್ರವೇಶದ ಮಟ್ಟಿಗೆ ಸೀಮಿತವಾಗಬಹುದೇ. ಸಂಶೋಧನೆಯಲ್ಲಿನ ಪ್ರಾಮಾಣಿಕತೆಯೂ ಅದೇ ಮಾನದಂಡಕ್ಕೆ ಒಳಪಡುವುದಿಲ್ಲವೇ?
ಕೋವಿಡ್ ಸಮಯದಲ್ಲಿ ಸರ್ಕಾರದ “ತಟ್ಟೆ ಬಾರಿಸುವ” ಕರೆಗೆ ವೈಜ್ಞಾನಿಕ ಸಮರ್ಥನೆ ನೀಡಿದ ಪ್ರಬಂಧವನ್ನು ಇದೇ ವಿಶ್ವವಿದ್ಯಾನಿಲಯ ಮಂಡಿಸಿತ್ತು ಎಂಬುದು ನೆನಪಾಗುತ್ತದೆ. ಈ ವಿಶ್ವವಿದ್ಯಾಲಯ ಅಲ್ಪಾವಧಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಆರ್ಥಿಕ ಸಾಮರ್ಥ್ಯವನ್ನು ಹೊಂದುವ ಮಟ್ಟಿಗೆ ಬೆಳವಣಿಗೆಯಾಗಿದ್ದು ಗಮನಾರ್ಹ. AI ಶೃಂಗಸಭೆಯಲ್ಲಿ ದೇಶದ ಪ್ರತಿಷ್ಠಿತ ಐಐಟಿಗಳು ಮತ್ತು ಸಂಶೋಧನಾ ಸಂಸ್ಥೆಗಳಿಗಿಂತಲೂ ಹೆಚ್ಚಿನ ಸ್ಥಳಾವಕಾಶ ಈ ಖಾಸಗಿ ವಿಶ್ವವಿದ್ಯಾಲಯಕ್ಕೆ ನೀಡಲಾಗಿತ್ತು ಎಂಬ ಸಂಗತಿ ಈ ಚರ್ಚೆಯನ್ನು ಮತ್ತಷ್ಟು ಗಂಭೀರಗೊಳಿಸುತ್ತದೆ. ಇದು ಕೇವಲ ಆಯೋಜನಾ ತೀರ್ಮಾನವೇ ಎಂಬ ಪ್ರಶ್ನೆ ಕೇಳಬಹುದು. ಆದರೆ ಘಟನೆಗಳ ಸರಮಾಲೆ ಒಂದು ‘ನಿಕಟ ಸಂಬಂಧ’ದ ವಾಸನೆಯನ್ನು ಹೊರಡಿಸುತ್ತದೆ. ಸರ್ಕಾರದ ನೀತಿಗಳಿಗೆ ಅಕಾಡಮಿಕ್ ಮುದ್ರೆ ಕೊಟ್ಟದ್ದು ಮತ್ತು ಇದೇ ಸಂಸ್ಥೆಗೆ ಸರಕಾರದಿಂದ ದೊರೆಯುತ್ತಿರುವ ಪ್ರಾಮುಖ್ಯತೆಗಳನ್ನು ಕೆಲವರು ವಿಭಿನ್ನ ದೃಷ್ಟಿಯಿಂದ ನೋಡುವುದು ಸಹಜ. ಸರ್ಕಾರದ ನೀತಿಗಳು, ಸಾಲ ಸೌಲಭ್ಯಗಳು, ಪ್ರೋತ್ಸಾಹಗಳು ಮತ್ತು ಸಂಸ್ಥೆಯ ವಿಸ್ತರಣೆಯ ನಡುವೆ ಇರುವ ಸಂಬಂಧದ ಬಗ್ಗೆ ಸಾರ್ವಜನಿಕ ಚರ್ಚೆಗಳು ನಡೆದಿವೆ.
Make in India ಎಂಬ ಘೋಷಣೆ ಆತ್ಮನಿರ್ಭರತೆಯ ವಾಗ್ದಾನ. ಆದರೆ ವಿದೇಶಿ ನಿರ್ಮಿತ ವಸ್ತುಗಳನ್ನು ಹೊಸ ಹೆಸರಿನಲ್ಲಿ ದೇಶೀಯ ಸಾಧನೆ ಎಂದು ಪ್ರಚಾರ ಮಾಡುವಾಗ, ಆ ವಾಗ್ದಾನದ ಅರ್ಥವೇ ಕುಂದುತ್ತದೆ. ಆತ್ಮನಿರ್ಭರತೆ ಕೇವಲ ಘೋಷಣೆಯಲ್ಲಿ ಅಲ್ಲ, ಸಂಶೋಧನಾ ಪ್ರಕ್ರಿಯೆಯಲ್ಲಿ ಗೋಚರಿಸಬೇಕು.
ಜಾಗತಿಕ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸುವುದು ಕೇವಲ ಗೌರವದ ವಿಷಯವಲ್ಲ. ಅದು ಜವಾಬ್ದಾರಿಯ ವಿಷಯ. ಫೇಕ್ ಮೂಲಕ ತಾತ್ಕಾಲಿಕ ಮಿನುಗು ಪಡೆಯಬಹುದು. ಆದರೆ ಅದು ದೇಶದ ಗೌರವಕ್ಕೆ ಶಾಶ್ವತ ಡ್ಯಾಮೇಜ್ ಉಂಟುಮಾಡುತ್ತದೆ. ಈ ಪ್ರಕರಣದಲ್ಲಿ ಹೊಣೆಗಾರಿಕೆ ನಿಗದಿಯಾಗದಿದ್ದರೆ, ಇದು ಕೇವಲ ಒಂದು ಪ್ರದರ್ಶನದ ತಪ್ಪಾಗಿಯೇ ಉಳಿಯುವುದಿಲ್ಲ. ಅದು ದೇಶದ ವಿಶ್ವಾಸಾರ್ಹತೆ ಮತ್ತು ಶಿಕ್ಷಣ ವ್ಯವಸ್ಥೆಯ ನೈತಿಕತೆಯ ಮೇಲಿನ ಗಂಭೀರ ಗಾಯವಾಗಿಯೇ ಉಳಿಯುತ್ತದೆ.
ಉತ್ತರದಾಯಕತೆ ಇಲ್ಲದೆ ಆತ್ಮನಿರ್ಭರತೆ ಸಾಧ್ಯವಿಲ್ಲ. ಪ್ರಾಮಾಣಿಕತೆ ಇಲ್ಲದೆ ಮೆರಿಟ್ ಅರ್ಥಹೀನ. ಈ ಪ್ರಕರಣದಲ್ಲಿ ಜವಾಬ್ದಾರಿ ಸ್ಪಷ್ಟವಾಗದಿದ್ದರೆ, ಇದು ಕೇವಲ ಒಂದು ರೋಬೋಟಿಕ್ ನಾಯಿ ಮತ್ತು ಡ್ರೋನ್ನ ಕಥೆಯಾಗುವುದಿಲ್ಲ. ಅದು ಶಿಕ್ಷಣ ವ್ಯವಸ್ಥೆ ಮತ್ತು ಆಡಳಿತದ ನೈತಿಕ ಮಾನದಂಡಗಳ ಮೇಲಿನ ಗಂಭೀರ ಪ್ರಶ್ನೆಯಾಗಿಯೇ ಉಳಿಯುತ್ತದೆ.
— ಪಿಎಂ ಇಕ್ಬಾಲ್ ಕೈರಂಗಳ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.