ಶ್ರೀನಿವಾಸಪುರ (www.vknews.in): ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಳೆದ ಸುಮಾರು ಹತ್ತು ವರ್ಷಗಳಿಂದ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸಿದ್ದ ಡಾ. ದಿವಾಕರ್ ಪ್ರಸಾದ್ ಅವರು ರಾಮನಗರ ಜಿಲ್ಲಾ ಆಸ್ಪತ್ರೆಗೆ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ವರ್ಗದವರು ಆತ್ಮೀಯವಾಗಿ ಸನ್ಮಾನಿಸಿ ಭಾವಪೂರ್ಣ ಬೀಳ್ಕೊಡುಗೆ ನೀಡಿದರು.
ಡಾ.ದಿವಾಕರ್ ಪ್ರಸಾದ್ ಅವರು ತಮ್ಮ ಸೇವಾ ಅವಧಿಯಲ್ಲಿ ಸಾವಿರಾರು ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡಿ ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದರು. ಗ್ರಾಮೀಣ ಹಾಗೂ ಬಡ ಕುಟುಂಬಗಳ ಮಕ್ಕಳಿಗೆ ಅವರು ತೋರಿದ ಸೇವಾಭಾವ, ಮಾನವೀಯತೆ ಮತ್ತು ಕರ್ತವ್ಯನಿಷ್ಠೆ ಎಲ್ಲರಿಗೂ ಮಾದರಿಯಾಗಿತ್ತು. ರೋಗಿಗಳೊಂದಿಗೆ ಸದಾ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದ ಅವರು, ಪೋಷಕರಿಗೆ ಮಕ್ಕಳ ಆರೋಗ್ಯದ ಬಗ್ಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಿದ್ದರು. ತುರ್ತು ಪರಿಸ್ಥಿತಿಗಳಲ್ಲಿಯೂ ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಿ ಅನೇಕ ಮಕ್ಕಳ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ಆಸ್ಪತ್ರೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಆಸ್ಪತ್ರೆಯಲ್ಲಿ ಸರ್ಕಾರದಿಂದ ದೊರೆಯುವ ವಿವಿಧ ಆರೋಗ್ಯ ಸೌಲಭ್ಯಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವಲ್ಲಿ ಡಾ. ದಿವಾಕರ್ ಪ್ರಸಾದ್ ಅವರು ಪ್ರಮುಖ ಪಾತ್ರವಹಿಸಿದ್ದರು. ವಿಶೇಷವಾಗಿ ಮಕ್ಕಳ ಆರೋಗ್ಯ ತಪಾಸಣೆ, ಲಸಿಕಾ ಕಾರ್ಯಕ್ರಮಗಳು ಹಾಗೂ ಗ್ರಾಮೀಣ ಭಾಗದ ಆರೋಗ್ಯ ಜಾಗೃತಿ ಕಾರ್ಯಗಳಲ್ಲಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ತಮ್ಮ ಸರಳ ವ್ಯಕ್ತಿತ್ವ, ಸೇವಾಭಾವ ಮತ್ತು ಕರ್ತವ್ಯಪ್ರಜ್ಞೆಯಿಂದ ಸಹೋದ್ಯೋಗಿಗಳ ಗೌರವಕ್ಕೂ ಪಾತ್ರರಾಗಿದ್ದರು. ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ಅವರು, ಡಾ. ದಿವಾಕರ್ ಪ್ರಸಾದ್ ಅವರು ಸಾರ್ವಜನಿಕ ಆಸ್ಪತ್ರೆಯ ಉತ್ತಮ ವೈದ್ಯರಲ್ಲಿ ಒಬ್ಬರಾಗಿದ್ದು, ತಮ್ಮ ಸೇವೆಯಿಂದ ಜನರ ಹೃದಯದಲ್ಲಿ ವಿಶೇಷ ಸ್ಥಾನ ಗಳಿಸಿದ್ದಾರೆ. ಅವರ ವರ್ಗಾವಣೆ ಆಸ್ಪತ್ರೆ ಹಾಗೂ ಸಾರ್ವಜನಿಕರಿಗೆ ನಷ್ಟವಾದರೂ, ಅವರು ಇನ್ನಷ್ಟು ಉತ್ತಮ ಸೇವೆ ಸಲ್ಲಿಸಲಿ ಎಂಬುದು ನಮ್ಮ ಹಾರೈಕೆ, ಎಂದು ತಿಳಿಸಿದರು.
ಸನ್ಮಾನ ಕಾರ್ಯಕ್ರಮದಲ್ಲಿ ಡಾ. ಉಮಾಶಂಕರ್, ಡಾ. ಮಂಜುನಾಥ್, ಡಾ. ವರಲಕ್ಷ್ಮಿ, ಡಾ. ರಮಣನ್, ಡಾ. ಸುರೇಶ್, ಡಾ. ವೀಣಾ, ಡಾ. ವೆಂಕಟೇಶ್, ಡಾ. ಆಶಾ, ಡಾ. ಸಂಗೀತಾ, ಡಾ. ಚೈತನ್ಯ, ಡಾ. ದೀಪಾ, ಡಾ. ನಿರಂಜನ್ ಹಾಗೂ ಡಾ. ಸುಶ್ಮಿತಾ ಸೇರಿದಂತೆ ಎಲ್ಲಾ ವೈದ್ಯಾಧಿಕಾರಿಗಳು ಭಾಗವಹಿಸಿದ್ದರು. ನರ್ಸಿಂಗ್ ಅಧಿಕಾರಿಗಳಾದ ಪ್ರಮೀಳಾ, ಕವಿತಾ, ಅನಿತಾ ಮತ್ತು ಉಮಾ ಮಹೇಶ್ವರಿ, ಫಾರ್ಮಸಿ ಅಧಿಕಾರಿಗಳಾದ ಮೊಹಮ್ಮದ್ ಅಲಿ ಹಾಗೂ ಕಲ್ಲೇಶ್ ಕುಮಾರ್, ಪ್ರಯೋಗಶಾಲಾ ತಂತ್ರಜ್ಞ ಅಧಿಕಾರಿ ವಿ. ಶಿವಕುಮಾರ್ ಅವರು ಶಾಂತಿ ಸ್ವರೂಪ ಬುದ್ಧನ ಮೂರ್ತಿ ನೀಡಿ ಡಾ. ದಿವಾಕರ್ ಪ್ರಸಾದ್ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಡಾ. ದಿವಾಕರ್ ಪ್ರಸಾದ್ ಅವರ ಮುಂದಿನ ಸೇವಾ ಜೀವನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.