(www.vknews.in) ; ಇಂದು ಸಮಾಜದಲ್ಲಿ ಒಂದು ವಿಚಿತ್ರ ಮನೋಭಾವ ಬೆಳೆಯುತ್ತಿದೆ. ಶಿಕ್ಷಣದ ಗುಣಮಟ್ಟವನ್ನು ಶಾಲೆಯ ಕಟ್ಟಡದ ಭವ್ಯತೆ, ಇಂಗ್ಲಿಷ್ ಮೀಡಿಯಂ ಎಂಬ ಹೆಸರಿನ ಆಕರ್ಷಣೆ ಅಥವಾ ಹೆಚ್ಚಿನ ಶುಲ್ಕದೊಂದಿಗೆ ತಾಳೆಹಾಕುವ ಪ್ರವೃತ್ತಿ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಸಾವಿರಾರು ರೂಪಾಯಿಗಳ ಶುಲ್ಕ ವಸೂಲಿ ಮಾಡುವ ಖಾಸಗಿ ಶಿಕ್ಷಣ ಸಂಸ್ಥೆಗಳ ಕಡೆಗೆ ಪೋಷಕರು ಆಕರ್ಷಿತರಾಗುತ್ತಿದ್ದಾರೆ.
ಆದರೆ ಒಂದು ಕ್ಷಣ ಯೋಚಿಸೋಣ. ನಮ್ಮ ದೇಶದ ಸಂವಿಧಾನವು 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕನ್ನು ನೀಡಿದೆ. ಸರ್ಕಾರವು ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿ ಶಾಲಾ ಕಟ್ಟಡಗಳು, ತರಬೇತಿ ಪಡೆದ ಶಿಕ್ಷಕರು, ಉಚಿತ ಪಠ್ಯಪುಸ್ತಕಗಳು, ಸಮವಸ್ತ್ರ, ಬಿಸಿಯೂಟ, ಹಾಲು, ವಿದ್ಯಾರ್ಥಿವೇತನ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ.
ಇಂತಹ ಸಂದರ್ಭದಲ್ಲಿ ಸಾಮಾನ್ಯ ಮತ್ತು ಮಧ್ಯಮ ವರ್ಗದ ಕುಟುಂಬಗಳು ತಮ್ಮ ಆದಾಯದ ಬಹುಪಾಲನ್ನು ದುಬಾರಿ ಖಾಸಗಿ ಶಾಲೆಗಳ ಶುಲ್ಕಕ್ಕೆ ಮೀಸಲಿಡುವುದು ಎಷ್ಟು ಅಗತ್ಯ ಎಂಬ ಪ್ರಶ್ನೆ ಮೂಡುತ್ತದೆ. ಕೆಲವೊಮ್ಮೆ ಶಿಕ್ಷಣಕ್ಕಿಂತಲೂ ಪ್ರತಿಷ್ಠೆಗಾಗಿ ಶಾಲೆಗಳನ್ನು ಆಯ್ಕೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಮುದಾಯದ ಹೆಸರಿನಲ್ಲಿ ನಡೆಯುವ ಕೆಲವು ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ರೂಪಾಯಿ ಶುಲ್ಕ ವಸೂಲಿ ಮಾಡುತ್ತಿದ್ದರೆ, ಅದೇ ಶಿಕ್ಷಣವನ್ನು ಸರಕಾರಿ ಶಾಲೆಗಳು ಉಚಿತವಾಗಿ ಅಥವಾ ಅತಿ ಕಡಿಮೆ ವೆಚ್ಚದಲ್ಲಿ ನೀಡಲು ಪ್ರಯತ್ನಿಸುತ್ತಿವೆ. ಶಿಕ್ಷಣ ಸೇವೆಯಾಗಬೇಕೇ ಹೊರತು ವ್ಯಾಪಾರವಾಗಬಾರದು. ಶಿಕ್ಷಣ ಸಂಸ್ಥೆಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಬೇಕು; ಪೋಷಕರ ಆರ್ಥಿಕ ಶೋಷಣೆಗೆ ಕಾರಣವಾಗಬಾರದು.
ಇಂದು ಸರಕಾರಿ ಶಾಲೆಗಳಲ್ಲಿ ಉತ್ತಮ ಮೂಲಸೌಕರ್ಯ, ಡಿಜಿಟಲ್ ತರಗತಿಗಳು, ತರಬೇತಿ ಪಡೆದ ಶಿಕ್ಷಕರು ಹಾಗೂ ವಿವಿಧ ಶೈಕ್ಷಣಿಕ ಯೋಜನೆಗಳು ಲಭ್ಯವಿವೆ. ಅನೇಕ ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ವೈದ್ಯರು, ಇಂಜಿನಿಯರ್ಗಳು, ಆಡಳಿತಾಧಿಕಾರಿಗಳು ಹಾಗೂ ವಿಜ್ಞಾನಿಗಳಾಗಿ ಹೊರಹೊಮ್ಮಿರುವ ಉದಾಹರಣೆಗಳು ನಮ್ಮ ಮುಂದಿವೆ.
ಹೀಗಿರುವಾಗ, ಕೇವಲ ಇಂಗ್ಲಿಷ್ ಮೀಡಿಯಂ ಎಂಬ ಹೆಸರಿಗಾಗಿ ಅಥವಾ ಸಾಮಾಜಿಕ ಪ್ರತಿಷ್ಠೆಗಾಗಿ ದುಬಾರಿ ಶಿಕ್ಷಣ ಸಂಸ್ಥೆಗಳಿಗೆ ಹಣ ಸುರಿದು ಅವುಗಳನ್ನು ಇನ್ನಷ್ಟು ದೊಡ್ಡ “ಆನೆಗಳಾಗಿ” ಬೆಳೆಸುವ ಅಗತ್ಯವಿದೆಯೇ ಎಂಬುದನ್ನು ಪ್ರತಿಯೊಬ್ಬ ಪೋಷಕರೂ ಆತ್ಮಾವಲೋಕನ ಮಾಡಿಕೊಳ್ಳಬೇಕು.
ನಿಜವಾದ ಶಿಕ್ಷಣವು ಶಾಲೆಯ ಶುಲ್ಕದಲ್ಲಿಲ್ಲ; ಶಿಕ್ಷಕರ ಬದ್ಧತೆ, ವಿದ್ಯಾರ್ಥಿಯ ಆಸಕ್ತಿ, ಪೋಷಕರ ಪ್ರೋತ್ಸಾಹ ಮತ್ತು ಕಲಿಕೆಯ ವಾತಾವರಣದಲ್ಲಿದೆ. ಸಮಾಜದ ಅಭಿವೃದ್ಧಿಗೆ ಶಿಕ್ಷಣ ಅಗತ್ಯ, ಆದರೆ ಶಿಕ್ಷಣದ ಹೆಸರಿನಲ್ಲಿ ನಡೆಯುವ ಅತಿಯಾದ ವ್ಯಾಪಾರೀಕರಣವನ್ನು ಪ್ರಶ್ನಿಸುವುದು ಕೂಡ ಅಷ್ಟೇ ಅಗತ್ಯ.
ಮೋಯ್ದಿನ್ ಕುಟ್ಟಿ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ (ರಿ.)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.