ಕೋಲಾರ (www.vknews.in): ಪತ್ರಿಕೋದ್ಯಮದ ಮೌಲ್ಯಗಳನ್ನು ಗೌರವಿಸುವ ಹಾಗೂ ಹಿರಿಯ ಪತ್ರಕರ್ತರ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಜುಲೈ 1ರಂದು ಪತ್ರಿಕಾ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲು ಸಜ್ಜಾಗಿದೆ. ಇದೇ ಸಂದರ್ಭದಲ್ಲಿ 2026ನೇ ಸಾಲಿನ ವಾರ್ಷಿಕ ಪತ್ರಿಕೋದ್ಯಮ ಪ್ರಶಸ್ತಿಗಳ ಪ್ರದಾನ, ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಂಘದ ಸರ್ವ ಸದಸ್ಯರ ಸಭೆ ಆಯೋಜಿಸಲಾಗಿದೆ.
ನಗರದ ಪತ್ರಕರ್ತರ ಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಸಮಾರಂಭವನ್ನು ಸಂಸದ ಎಂ. ಮಲ್ಲೇಶ್ ಬಾಬು ಉದ್ಘಾಟಿಸಲಿದ್ದಾರೆ. ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಪತ್ರಕರ್ತರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ವಾರ್ಷಿಕ ಪ್ರಶಸ್ತಿ ಪುರಸ್ಕೃತ ಪತ್ರಕರ್ತರನ್ನು ಸನ್ಮಾನಿಸಲಿದ್ದಾರೆ.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಖಜಾಂಚಿ ಹಾಗೂ ಜಿಲ್ಲಾ ಉಸ್ತುವಾರಿ ಎಂ. ವಾಸುದೇವಹೊಳ್ಳ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ವಿ. ಮುನಿರಾಜು, ಸಂಘದ ನಿಕಟಪೂರ್ವ ಅಧ್ಯಕ್ಷ ಬಿ.ವಿ. ಗೋಪಿನಾಥ್ ಹಾಗೂ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲೆಯ ಹಿರಿಯ ಪತ್ರಕರ್ತರ ಹೆಸರಿನಲ್ಲಿ ಸ್ಥಾಪಿಸಲಾದ ವಾರ್ಷಿಕ ಪ್ರಶಸ್ತಿಗಳನ್ನು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಪತ್ರಕರ್ತರಿಗೆ ಪ್ರದಾನ ಮಾಡಲಾಗುತ್ತದೆ. ಜೊತೆಗೆ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಗುತ್ತದೆ.
2026ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರು ಜಿ. ನಾರಾಯಣಸ್ವಾಮಿ ಸ್ಮಾರಕ ಪ್ರಶಸ್ತಿಗೆ ಉದಯವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರ ಕೆ.ಎಸ್. ಗಣೇಶ್, ಕೆ.ಆರ್. ಕೃಷ್ಣಸ್ವಾಮಿ ಸ್ಮಾರಕ ಪ್ರಶಸ್ತಿಗೆ ವಿಜಯಧ್ವನಿ ದಿನಪತ್ರಿಕೆಯ ಸಂಪಾದಕ ಅಬ್ಬಣಿ ಶಂಕರ್, ಬಿ.ವಿ. ನರಸಿಂಹಮೂರ್ತಿ ಸ್ಮಾರಕ ಪ್ರಶಸ್ತಿಗೆ ಉದಯಮಿತ್ರ ದಿನಪತ್ರಿಕೆಯ ಸಂಪಾದಕ ಎ. ಸದಾನಂದ, ಕೆ. ಪ್ರಹ್ಲಾದರಾವ್ ಸ್ಮಾರಕ ಪ್ರಶಸ್ತಿಗೆ ಸಂಜೆವಾಣಿ ದಿನಪತ್ರಿಕೆಯ ಮಾಲೂರು ತಾಲೂಕು ವರದಿಗಾರ ಎಸ್. ನಾರಾಯಣಸ್ವಾಮಿ, ಬಿ. ಆರ್ಮುಗಂ ಸ್ಮಾರಕ ಪ್ರಶಸ್ತಿಗೆ ಈಸಂಜೆ ದಿನಪತ್ರಿಕೆಯ ಕೆ.ಜಿ.ಎಫ್ ತಾಲೂಕು ವರದಿಗಾರ ಹೆಚ್. ದೊರೈ ಅರಸು, ಬಿ.ಎನ್. ಗುರುಪ್ರಸಾದ್ ಸ್ಮಾರಕ ಪ್ರಶಸ್ತಿಗೆ ವಿಜಯವಾಣಿ ದಿನಪತ್ರಿಕೆಯ ಹಿರಿಯ ವರದಿಗಾರ ಎನ್. ಮುನಿವೆಂಕಟೇಗೌಡ, ಎಂ. ಮಲ್ಲೇಶ್ ಸ್ಮಾರಕ ಪ್ರಶಸ್ತಿಗೆ ಅಂತರಗಂಗೆ ದಿನಪತ್ರಿಕೆಯ ಜಿಲ್ಲಾ ವರದಿಗಾರ ಎನ್. ರಾಮು, ಎಂ.ಜಿ. ಪ್ರಭಾಕರ ಸ್ಮಾರಕ ಪ್ರಶಸ್ತಿಗೆ ಶಂಕರವಾಹಿನಿ ಚಾನೆಲ್ ಜಿಲ್ಲಾ ವರದಿಗಾರ ಎಂ. ಸುಬ್ರಮಣಿ (ಪಲ್ಲವಿಮಣಿ), ಸಿ.ಎಂ. ರಂಗಾರೆಡ್ಡಿ ಸ್ಮಾರಕ ಪ್ರಶಸ್ತಿಗೆ ಜೀ ಕನ್ನಡ ವಾಹಿನಿಯ ಜಿಲ್ಲಾ ವರದಿಗಾರ ಕೆ.ಎನ್. ಮಹೇಶ್, ವಿ.ಎಂ. ನಾಗಪ್ಪ ಸ್ಮಾರಕ ಪ್ರಶಸ್ತಿಗೆ ಅಂತರಗಂಗೆ ದಿನಪತ್ರಿಕೆಯ ಮುಳಬಾಗಿಲು ತಾಲೂಕು ವರದಿಗಾರ ಜಮ್ಮನಹಳ್ಳಿ ಕೃಷ್ಣಪ್ಪ, ಹಾಗೂ ಹೆಚ್.ಎನ್. ಸೋಮಶೇಖರಗೌಡ ಸ್ಮಾರಕ ಪ್ರಶಸ್ತಿಗೆ ಕೋಲಾರಕಿರಣ ದಿನಪತ್ರಿಕೆಯ ಶ್ರೀನಿವಾಸಪುರ ತಾಲೂಕು ವರದಿಗಾರ ಎಸ್. ವೇಣುಗೋಪಾಲ್ ಆಯ್ಕೆಯಾಗಿದ್ದಾರೆ.
ಇದೇ ದಿನ ಮಧ್ಯಾಹ್ನ 2 ಗಂಟೆಗೆ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಎಸ್.ಕೆ. ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಸರ್ವ ಸದಸ್ಯರ ಸಭೆ ನಡೆಯಲಿದೆ. ಸಂಘದ ಚಟುವಟಿಕೆಗಳು, ಸದಸ್ಯರ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಮುಂದಿನ ಕಾರ್ಯಯೋಜನೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಸದಸ್ಯರು ಕಡ್ಡಾಯವಾಗಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸುವಂತೆ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಹಾಗೂ ಖಜಾಂಚಿ ಬಿ.ಎಲ್. ರಾಜೇಂದ್ರಸಿಂಹ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.