(www.vknews.in) ; ಒಬ್ಬ ಮಗುವಿನ ಶಿಕ್ಷಣವು ಶಾಲೆಯೊಂದರ ಜವಾಬ್ದಾರಿಯಲ್ಲ. ಅದು ಪೋಷಕರು, ಶಿಕ್ಷಕರು, ಎಸ್ಡಿಎಂಸಿ ಮತ್ತು ಸಮಾಜದ ಜಂಟಿ ಹೊಣೆಗಾರಿಕೆ. ಶಾಲೆಗೆ ಮಕ್ಕಳನ್ನು ದಾಖಲಿಸಿ ಪ್ರತಿದಿನ ಕಳುಹಿಸುವುದು ಪೋಷಕರ ಕರ್ತವ್ಯದ ಮೊದಲ ಹೆಜ್ಜೆ ಮಾತ್ರ. ನಿಜವಾದ ಜವಾಬ್ದಾರಿ ಮಗುವಿನ ಶಿಕ್ಷಣದಲ್ಲಿ ನಿರಂತರವಾಗಿ ಭಾಗವಹಿಸುವುದರಿಂದ ಪ್ರಾರಂಭವಾಗಬೇಕಿದೆ.
ಶಿಕ್ಷಕರು ಶಾಲೆಯಲ್ಲಿ ಪಾಠ ಹೇಳಬಹುದು, ಮಾರ್ಗದರ್ಶನ ನೀಡಬಹುದು, ಪ್ರತಿಭೆಯನ್ನು ಗುರುತಿಸಬಹುದು. ಆದರೆ ಮಗುವಿನ ಅಭ್ಯಾಸ, ಶಿಸ್ತು, ಓದುವ ಆಸಕ್ತಿ, ಮೌಲ್ಯಗಳು ಮತ್ತು ವ್ಯಕ್ತಿತ್ವವನ್ನು ಬೆಳೆಸಲು ಪೋಷಕರ ಸಹಕಾರ ಅತ್ಯಗತ್ಯ. ಮನೆ ಮತ್ತು ಶಾಲೆ ಒಂದೇ ಗುರಿಯೊಂದಿಗೆ ಕೆಲಸ ಮಾಡಿದಾಗ ಮಾತ್ರ ಉತ್ತಮ ಫಲಿತಾಂಶ ಸಾಧ್ಯ.
ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಆತಂಕಕಾರಿ ಬೆಳವಣಿಗೆಗಳು ಕಾಣಿಸುತ್ತಿವೆ. ಮಕ್ಕಳ ಕಲಿಕೆ ಕುಸಿದಾಗ, ನಿರಂತರ ಗೈರುಹಾಜರಿ ಇದ್ದಾಗ, ಮನೆಪಾಠ ಮಾಡದಿದ್ದಾಗ ಅಥವಾ ಶಿಸ್ತು ಸಮಸ್ಯೆಗಳ ಬಗ್ಗೆ ತಿಳಿಸಲು ಶಿಕ್ಷಕರು ಪೋಷಕರಿಗೆ ಕರೆ ಮಾಡಿದರೆ, ಕೆಲವರು ಕರೆ ಸ್ವೀಕರಿಸುವುದೇ ಇಲ್ಲ. ಕೆಲವರು ಶಾಲೆಯ ಸಂಖ್ಯೆಯನ್ನೇ ಬ್ಲಾಕ್ ಮಾಡುತ್ತಾರೆ. ಮಗುವಿನ ವಿದ್ಯಾಭ್ಯಾಸದ ಬಗ್ಗೆ ಮಾತನಾಡಲು ಸಮಯವಿಲ್ಲದಿರುವುದು, ಮಗುವಿನ ಭವಿಷ್ಯದ ಮೇಲಿನ ನಿರ್ಲಕ್ಷ್ಯವನ್ನು ತೋರಿಸುತ್ತದೆ.
ಅದೇ ರೀತಿ, ಶಾಲೆಯ ಪೋಷಕರ ಸಭೆ ಎಸ್ಡಿಎಂಸಿ ಸಭೆಗಳು, ಶೈಕ್ಷಣಿಕ ಚಟುವಟಿಕೆಗಳು ಹಾಗೂ ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದ ಸಭೆಗಳಿಗೆ ಹೆಚ್ಚಿನವರು ಹಾಜರಾಗುವುದಿಲ್ಲ. ತಮ್ಮ ಮಗುವಿನ ಪ್ರಗತಿಯ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸುವ ಆಸಕ್ತಿಯನ್ನೂ ತೋರಿಸುವುದಿಲ್ಲ. ಆದರೆ, ಇದೇ ಪೋಷಕರು ಮಕ್ಕಳ ನಡವಳಿಕೆ ಅಥವಾ ಶಿಸ್ತಿನ ಬಗ್ಗೆ ಶಿಕ್ಷಕರು ಕಾನೂನುಬದ್ಧ, ಮಾನವೀಯ ಮತ್ತು ಮಕ್ಕಳ ಹಕ್ಕುಗಳನ್ನು ಗೌರವಿಸುವ ರೀತಿಯಲ್ಲಿ ಸೂಚನೆ ನೀಡಿದಾಗ ಅಥವಾ ಶಿಸ್ತು ಕ್ರಮ ಕೈಗೊಂಡಾಗ, ಸಂಪೂರ್ಣ ವಿಚಾರ ತಿಳಿದುಕೊಳ್ಳುವ ಮುನ್ನವೇ ಕುಟುಂಬದವರೊಂದಿಗೆ ಶಾಲೆಗೆ ಬಂದು ಶಿಕ್ಷಕರನ್ನು ಅವಮಾನಿಸುವುದು, ಬೆದರಿಸುವುದು ಅಥವಾ ಆರೋಪಿಸುವುದು ಹೆಚ್ಚುತ್ತಿರುವುದು ವಿಷಾದನೀಯ.
ಮಕ್ಕಳನ್ನು ಶಾಲೆಗೆ ಕಳುಹಿಸುವುದಷ್ಟೇ ಅಲ್ಲ, ಪೋಷಕರು ತಮ್ಮ ಕರ್ತವ್ಯಗಳನ್ನು ಸಹ ನಿಭಾಯಿಸಬೇಕಾಗಿದೆ ಮಕ್ಕಳನ್ನು ಪ್ರತಿದಿನ ಸಮಯಕ್ಕೆ ಸರಿಯಾಗಿ ಶಾಲೆಗೆ ಕಳುಹಿಸುವುದು. ಮಕ್ಕಳು ನಿಯಮಿತವಾಗಿ ಶಾಲೆಗೆ ಹಾಜರಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳುವುದುಮನೆಪಾಠ, ಓದು ಮತ್ತು ಪರೀಕ್ಷೆಗಳ ಬಗ್ಗೆ ಪ್ರತಿದಿನ ಗಮನಹರಿಸುವುದು. ಶಾಲೆಯಿಂದ ಬರುವ ಕರೆಗಳು, ಸಂದೇಶಗಳು ಹಾಗೂ ಸೂಚನೆಗಳಿಗೆ ತಕ್ಷಣ ಸ್ಪಂದಿಸುವುದು. ಪೋಷಕರ-ಶಿಕ್ಷಕರ ಸಭೆ ಮತ್ತು ಎಸ್ಡಿಎಂಸಿ ಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸುವುದು. ಮಕ್ಕಳ ಕಲಿಕೆಯ ಮಟ್ಟವನ್ನು ಶಿಕ್ಷಕರೊಂದಿಗೆ ನಿಯಮಿತವಾಗಿ ಚರ್ಚಿಸುವುದು. ಶಾಲೆಯ ಶಿಸ್ತು ಮತ್ತು ನಿಯಮಗಳನ್ನು ಗೌರವಿಸಿ ಮಕ್ಕಳಿಗೂ ಪಾಲಿಸಲು ಪ್ರೇರೇಪಿಸುವುದು. ಮಕ್ಕಳಲ್ಲಿ ಉತ್ತಮ ನಡತೆ, ಗೌರವ, ಪ್ರಾಮಾಣಿಕತೆ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸುವುದು.
ಮೊಬೈಲ್, ಟಿವಿ ಮತ್ತು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯನ್ನು ನಿಯಂತ್ರಿಸುವುದು. ಶಾಲೆಯಲ್ಲಿ ಯಾವುದೇ ಸಮಸ್ಯೆ ಇದ್ದರೆ ಎಸ್ಡಿಎಂಸಿ, ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರೊಂದಿಗೆ ಶಾಂತಿಯುತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು. ಮಕ್ಕಳ ಮುಂದೆ ಶಿಕ್ಷಕರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡದೆ, ಶಿಕ್ಷಕರ ಬಗ್ಗೆ ಗೌರವದ ಮನೋಭಾವ ಬೆಳೆಸುವುದು.
ಮಕ್ಕಳು ಪೋಷಕರು ಮತ್ತು ಶಿಕ್ಷಕರಿಬ್ಬರನ್ನೂ ಗಮನಿಸಿ ಕಲಿಯುತ್ತಾರೆ. ಆದ್ದರಿಂದ ಪರಸ್ಪರ ಗೌರವ ಮತ್ತು ಸಹಕಾರವೇ ಮಕ್ಕಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುತ್ತದೆ. ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಗುವಿನ ಶಿಕ್ಷಣದ ಬಗ್ಗೆ ಪ್ರಶ್ನಿಸುವ ಹಕ್ಕಿದೆ. ಆದರೆ ಅದರ ಜೊತೆಗೆ ತಮ್ಮ ಜವಾಬ್ದಾರಿಯನ್ನೂ ನಿಷ್ಠೆಯಿಂದ ನಿರ್ವಹಿಸುವ ಕರ್ತವ್ಯವಿದೆ.
ಶಾಲೆಯ ಕರೆಗಳಿಗೆ ಸ್ಪಂದಿಸದಿರುವುದು, ಸಭೆಗಳಿಗೆ ಬಾರದಿರುವುದು, ಮಕ್ಕಳ ಕಲಿಕೆಯ ಬಗ್ಗೆ ಆಸಕ್ತಿ ತೋರದಿರುವುದು ಮತ್ತು ನಂತರ ಎಲ್ಲಾ ಹೊಣೆಗಾರಿಕೆಯನ್ನು ಶಿಕ್ಷಕರ ಮೇಲೆಯೇ ಹಾಕುವುದು ನ್ಯಾಯಸಮ್ಮತವಲ್ಲ.
ಅದೇ ಸಮಯದಲ್ಲಿ, ಶಿಕ್ಷಕರು ಸಹ ಮಕ್ಕಳಿಗೆ ಯಾವುದೇ ರೀತಿಯ ದೈಹಿಕ ಶಿಕ್ಷೆ ಅಥವಾ ಅವಮಾನಕರ ಶಿಕ್ಷೆ ನೀಡಬಾರದು. ಶಿಸ್ತು ಕ್ರಮಗಳು ಯಾವಾಗಲೂ ಮಕ್ಕಳ ಘನತೆ, ಸುರಕ್ಷತೆ ಮತ್ತು ಹಕ್ಕುಗಳನ್ನು ಗೌರವಿಸುವ ರೀತಿಯಲ್ಲಿರಬೇಕು. ಸಮಸ್ಯೆಗಳನ್ನು ಸಂವಾದ, ಮಾರ್ಗದರ್ಶನ ಮತ್ತು ಪರಸ್ಪರ ಸಹಕಾರದ ಮೂಲಕ ಪರಿಹರಿಸುವುದು ಶಿಕ್ಷಣದ ನಿಜವಾದ ಮಾರ್ಗ.
ಶಿಕ್ಷಕರು ಪಾಠ ಹೇಳುತ್ತಾರೆ. ಪೋಷಕರು ಬದುಕನ್ನು ರೂಪಿಸುತ್ತಾರೆ. ಈ ಎರಡೂ ಒಂದಾದಾಗ ಮಾತ್ರ ಒಳ್ಳೆಯ ಪ್ರಜೆ, ಒಳ್ಳೆಯ ವಿದ್ಯಾರ್ಥಿ ಮತ್ತು ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಶಾಲೆಗೆ ಮಕ್ಕಳನ್ನು ಕಳುಹಿಸುವುದು ಪೋಷಕರ ಕರ್ತವ್ಯದ ಆರಂಭ ಮಾತ್ರ; ಮಗುವಿನ ಕಲಿಕೆ, ನಡವಳಿಕೆ ಮತ್ತು ಭವಿಷ್ಯದ ಬಗ್ಗೆ ನಿರಂತರವಾಗಿ ಕಾಳಜಿ ವಹಿಸುವುದೇ ನಿಜವಾದ ಪೋಷಕರ ಜವಾಬ್ದಾರಿ.
ಮೊಯ್ದಿನ್ ಕುಟ್ಟಿ ರಾಜ್ಯ ಸಂಚಾಲಕರು ಕರ್ನಾಟಕ ರಾಜ್ಯ SDMC ಸಮನ್ವಯ ಕೇಂದ್ರ ವೇದಿಕೆ (ರಿ.)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.