ಉಪ್ಪಿನಂಗಡಿ (www.vknews.in): ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ (DKSC) ಉಪ್ಪಿನಂಗಡಿ ಘಟಕದ ಜನರಲ್ ಮೀಟಿಂಗ್ ಜಿ.ಎಂ. ಕುಂಞಿ ಜೋಗಿಬೆಟ್ಟು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಘಟಕದ ಅಡ್ವೈಸರ್ ಇಬ್ರಾಹಿಂ ದುಬಾಯ್ ಅವರು ಸ್ವಾಗತಿಸಿದರು. DKSC ಜಿಲ್ಲಾ ಕಾರ್ಯದರ್ಶಿ ಇಸ್ಹಾಕ್ ಬೊಳ್ಳಾಯಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಉಪ್ಪಿನಂಗಡಿ ಘಟಕಕ್ಕೂ DKSCಗೂ ಇರುವ ನಂಟಿನ ಕುರಿತು ವಿವರಿಸಿದರು.
ಸಂಘಟನೆಯ ಬೆಳವಣಿಗೆಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ ಕಾನ್ಸ ಮುಹಮ್ಮದ್ ಹಾಜಿಯವರ ತ್ಯಾಗ ಮತ್ತು ಸೇವೆಯನ್ನು ಸ್ಮರಿಸಿದ ಅವರು, ಅವರ ನಿಧನ ನಮಗೆಲ್ಲರಿಗೂ ಪಾಠವಾಗಿದೆ ಎಂದರು. ಜನ್ನತುಲ್ ಮಹಲ್ನ 101ನೇ ಕಬ್ರ್ನಲ್ಲಿ ಅವರು ಅಂತ್ಯವಿಶ್ರಮ ಪಡೆಯುತ್ತಿರುವುದು ದೀನಿ ರಂಗದಲ್ಲಿ ಸೇವೆ ಸಲ್ಲಿಸಿದವರಿಗೆ ದೊರೆಯುವ ಪ್ರತಿಫಲದ ಸಂಕೇತವಾಗಿದೆ ಎಂದು ತಿಳಿಸುತ್ತಾ ಅಲ್ಲಾಹನ ನಾಮದಿಂದ ಸಭೆಯನ್ನು ಉದ್ಘಾಟಿಸಿದರು.
ಘಟಕದ ಉಸ್ತುವಾರಿ ಬದ್ರು ಹಾಜಿ ಅವರು ಮಾತನಾಡಿ, ಜಿಲ್ಲಾ ಸಮಿತಿ ಹಾಗೂ ಘಟಕದ ನಡುವಿನ ಬಾಂಧವ್ಯ ಮತ್ತು ಪರಸ್ಪರ ಸಹಕಾರದ ಮಹತ್ವವನ್ನು ವಿವರಿಸಿದರು. ಜಿಲ್ಲಾ ಫೈನಾನ್ಸ್ ಕಾರ್ಯದರ್ಶಿ ಮಾತನಾಡಿ, ಸಂಘಟನೆ ಮತ್ತಷ್ಟು ಬಲಿಷ್ಠವಾಗಿ ಬೆಳೆಯಬೇಕಾದರೆ ಕಾರ್ಯಕರ್ತರ ಸಕ್ರಿಯ ಸ್ಪಂದನೆ ಮತ್ತು ಸಹಕಾರ ಅತ್ಯಗತ್ಯ ಎಂದರು.
ಜಿಲ್ಲಾಧ್ಯಕ್ಷರಾದ ಸಯ್ಯಿದ್ ಮುಖ್ತಾರ್ ತಂಙಳ್ ಅವರು ನಸೀಹತ್ ಹಾಗೂ ಉಪದೇಶ ನೀಡುತ್ತಾ, “ಎಷ್ಟು ಜನರು ಸೇರಿದ್ದಾರೆ ಎಂಬ ಲೆಕ್ಕ ಮುಖ್ಯವಲ್ಲ; ನಾವು ಮಾಡುವ ಕೆಲಸಗಳು ಇಖ್ಲಾಸಿನಿಂದ ಕೂಡಿರಬೇಕು. ಸದಾ ಒಳಿತಿನ ಕೆಲಸಗಳನ್ನು ಮಾಡಬೇಕು. ಜನರಿಗೆ ಒಳಿತನ್ನೇ ಬಯಸಿ ಅಲ್ಲಾಹನ ಪ್ರೀತಿಗೆ ಪಾತ್ರರಾಗಬೇಕು” ಎಂದು ಕರೆ ನೀಡಿದರು.
“1995ರಲ್ಲಿ ನೆಟ್ಟ ಗಿಡ ಇಂದು ಹೆಮ್ಮರವಾಗಿ ಬೆಳೆದಿದೆ. ಇದು ಇನ್ನಷ್ಟು ಬೆಳೆಯಬೇಕಾಗಿದೆ. ಸಂಘಟನೆಯ ಮುಂದಿನ ಬೆಳವಣಿಗೆಗೆ ನಿಮ್ಮೆಲ್ಲರ ಸೇರುವಿಕೆ, ಸಹಕಾರ ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಗತ್ಯ” ಎಂದು ತಿಳಿಸಿದ ಅವರು, ಅಂದಿನಿಂದ ಇಂದಿನವರೆಗೆ ಸಂಘಟನೆಗೆ ಸಹಾಯ, ಸಹಕಾರ ನೀಡಿದ ಎಲ್ಲರಿಗೂ ದುಆ ಮಾಡಿದರು.
ಅಧ್ಯಕ್ಷೀಯ ಭಾಷಣದಲ್ಲಿ ಜಿ.ಎಂ. ಕುಂಞಿ ಜೋಗಿಬೆಟ್ಟು ಅವರು, ಎಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಿದಾಗ ಮಾತ್ರ ಸಂಘಟನೆ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು. ಸಭೆಯಲ್ಲಿ ಸಂಘಟನೆಯ ಮುಂದಿನ ಕಾರ್ಯಚಟುವಟಿಕೆಗಳು ಹಾಗೂ ಘಟಕದ ಬಲವರ್ಧನೆ ಕುರಿತು ಚರ್ಚಿಸಲಾಯಿತು. ಕಳೆದ ಸಮಿತಿಯಲ್ಲಿ 15 ಸದಸ್ಯರಿದ್ದು, ಇಂದಿನ ಸಭೆಯಲ್ಲಿ 8 ಹೊಸ ಸದಸ್ಯರನ್ನು ಸೇರಿಸಿಕೊಳ್ಳಲಾಯಿತು.
ಹೊಸ ಸಮಿತಿಯಲ್ಲಿ ಫಯಾಝ್ ಜೋಗಿಬೆಟ್ಟು ಅವರನ್ನು ಕಾರ್ಯದರ್ಶಿಯಾಗಿ ಹಾಗೂ ಮುಹಮ್ಮದ್ ಅಗ್ನಾಡಿ ಅವರನ್ನು ಫೈನಾನ್ಸ್ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು. ಸಭೆಯ ನಿರೂಪಣೆ ಹಾಗೂ ಧನ್ಯವಾದವನ್ನು ಇಬ್ರಾಹಿಂ ದುಬಾಯ್ ನೆರವೇರಿಸಿದರು. ಕೊನೆಯಲ್ಲಿ ಮೌಲಿದ್ ನೂರೆ ಮದೀನಾ ಕಾರ್ಯಕ್ರಮ ನಡೆಯಿತು.
ವರದಿ;ಮೊಯ್ದಿನ್ ಕುಟ್ಟಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.