(www.vknews.in) ; ಶಾಲೆಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಧ್ವಜಾರೋಹಣವನ್ನು ಗೌರವಪೂರ್ವಕವಾಗಿ ಹಾಗೂ ನಿಯಮಾನುಸಾರವಾಗಿ ನಡೆಸುವುದು ಅತ್ಯಂತ ಮಹತ್ವದ್ದಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರವು ಕಾಲಕಾಲಕ್ಕೆ ಅಗತ್ಯವಾದ ಆದೇಶಗಳು, ಸುತ್ತೋಲೆಗಳು ಹಾಗೂ ಮಾರ್ಗಸೂಚಿಗಳನ್ನು ಹೊರಡಿಸುತ್ತಾ ಬರುತ್ತಿದೆ. ಆದ್ದರಿಂದ ಧ್ವಜಾರೋಹಣದ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ SDMC ಸದಸ್ಯರು, ಶಾಲಾ ಮುಖ್ಯಸ್ಥರು, ಶಿಕ್ಷಕರು ಹಾಗೂ ಧ್ವಜಾರೋಹಣ ಮಾಡುವ ಅಧಿಕೃತ ವ್ಯಕ್ತಿಗಳು ತಿಳಿದುಕೊಳ್ಳುವುದು ಅಗತ್ಯ.
ಧ್ವಜಾರೋಹಣದ ಸಂದರ್ಭದಲ್ಲಿ ಗಮನಿಸಬೇಕಾದ ಪ್ರಮುಖ ಅಂಶ, ಇಲ್ಲಿ ಒಂದು ವಿಷಯವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಕೆಲವು ಕಡೆಗಳಲ್ಲಿ ನಾನು ಕಂಡ ಒಂದು ಪದ್ಧತಿಯ ಬಗ್ಗೆ ಎಲ್ಲರ ಗಮನಕ್ಕೆ ತರುತ್ತಾ ಇದ್ದೇನೆ. ಕಾರ್ಯಕ್ರಮ ಆರಂಭವಾಗುವ ಮೊದಲು ಧ್ವಜವನ್ನು ಧ್ವಜಸ್ತಂಭಕ್ಕೆ ಕಟ್ಟಿ, ಹಗ್ಗದ ಮೂಲಕ ಮೇಲ್ಭಾಗಕ್ಕೆ ಸಂಪೂರ್ಣವಾಗಿ ಎಳೆದು, ಅಲ್ಲಿ ಕಟ್ಟಿಹಿಡಿದು ಇಡಲಾಗುತ್ತದೆ. ನಂತರ ಧ್ವಜಾರೋಹಣ ಮಾಡಲು ನೇಮಿಸಲಾದ ಅಧಿಕೃತ ವ್ಯಕ್ತಿ ಬಂದು ಕೇವಲ ಆ ಕಟ್ಟನ್ನು ಅಥವಾ ಹಗ್ಗವನ್ನು ಬಿಡಿಸುತ್ತಾರೆ. ಆಗ ಧ್ವಜವು ಅರಳಿ ಕಾಣಿಸಿಕೊಳ್ಳುತ್ತದೆ.
ಕೆಲವು ಕಡೆಗಳಲ್ಲಿ ಈ ರೀತಿಯ ಕ್ರಮವನ್ನು ಧ್ವಜಾರೋಹಣದ ವಿಧಾನವೆಂದು ಅನುಸರಿಸುತ್ತಿರುವುದು ಕಂಡುಬರುತ್ತದೆ. ಆದರೆ ಧ್ವಜಾರೋಹಣದ ಸಂದರ್ಭದಲ್ಲಿ ಧ್ವಜವನ್ನು ನಿಗದಿತ ಸಮಯದಲ್ಲಿ ಅಧಿಕೃತ ವ್ಯಕ್ತಿಯಿಂದಲೇ ಗೌರವಪೂರ್ವಕವಾಗಿ ಮೇಲಕ್ಕೆ ಏರಿಸಿ, ನಂತರ ಧ್ವಜವನ್ನು ಅರಳಿಸುವ ರೀತಿಯಲ್ಲಿ ಕಾರ್ಯಕ್ರಮವನ್ನು ನಡೆಸುವುದು ಸೂಕ್ತ. ಆದ್ದರಿಂದ ಕಾರ್ಯಕ್ರಮಕ್ಕೂ ಮುನ್ನವೇ ಧ್ವಜವನ್ನು ಮೇಲಕ್ಕೆ ಎಳೆದು ಕಟ್ಟಿ ಇಟ್ಟು, ನಂತರ ಅಧಿಕೃತ ವ್ಯಕ್ತಿಯಿಂದ ಕೇವಲ ಕಟ್ಟನ್ನು ಬಿಡಿಸುವ ಪದ್ಧತಿಯನ್ನು ತಪ್ಪಿಸಿ, ನಿಗದಿತ ಸಮಯದಲ್ಲಿ ಅಧಿಕೃತ ವ್ಯಕ್ತಿಯೇ ಧ್ವಜವನ್ನು ಮೇಲಕ್ಕೆ ಏರಿಸುವ ವ್ಯವಸ್ಥೆ ಮಾಡುವುದು ಸೂಕ್ತ.
ಆದರಿಂದ SDMC ಸದಸ್ಯರು ಗಮನಿಸಬೇಕಾದದ್ದು SDMC ಎಂದರೆ ಕೇವಲ ಶಾಲೆಯ ಕಟ್ಟಡ, ಮೂಲಸೌಕರ್ಯ, ಅಭಿವೃದ್ಧಿ ನೋಡಿಕೊಳ್ಳುವ ಸಮಿತಿ ಮಾತ್ರವಲ್ಲ. ಶಾಲೆಯಲ್ಲಿ ನಡೆಯುವ ರಾಷ್ಟ್ರೀಯ ಹಬ್ಬಗಳ ಆಚರಣೆಯೂ ಮಕ್ಕಳಿಗೆ ಒಂದು ಜೀವಂತ ಶೈಕ್ಷಣಿಕ ಅನುಭವವಾಗಿದೆ. ಆದ್ದರಿಂದ SDMC ಅಧ್ಯಕ್ಷರು ಹಾಗೂ ಸದಸ್ಯರು ಧ್ವಜಾರೋಹಣದ ಸಂದರ್ಭದಲ್ಲಿ: ಧ್ವಜವನ್ನು ಸರಿಯಾದ ರೀತಿಯಲ್ಲಿ ಸಿದ್ಧಪಡಿಸಲಾಗಿದೆಯೇ? ಧ್ವಜವನ್ನು ಮುಂಚಿತವಾಗಿ ಮೇಲಕ್ಕೆ ಎಳೆದು ಕಟ್ಟಿ ಇಡಲಾಗಿದೆಯೇ? ಧ್ವಜಾರೋಹಣ ಮಾಡುವ ಅಧಿಕೃತ ವ್ಯಕ್ತಿಯೇ ಧ್ವಜವನ್ನು ಮೇಲಕ್ಕೆ ಏರಿಸುತ್ತಾರೆಯೇ? ರಾಷ್ಟ್ರಧ್ವಜದ ಗೌರವ ಮತ್ತು ಶಿಸ್ತು ಕಾಪಾಡಲಾಗುತ್ತಿದೆಯೇ? ಎಂಬುದನ್ನು ಗಮನಿಸಲೇ ಬೇಕಿದೆ
ಯಾಕೆಂದರೆ ಮಕ್ಕಳಿಗೆ ನಾವೇ ಮಾದರಿಯಾಗಿರುವ ಕಾರಣ ಶಾಲೆಯಲ್ಲಿ ದೊಡ್ಡವರು ಮಾಡುವ ಪ್ರತಿಯೊಂದು ಕೆಲಸವನ್ನೂ ಮಕ್ಕಳು ಗಮನಿಸುತ್ತಾರೆ. ನಾವು ಒಂದು ರೀತಿಯಲ್ಲಿ ಮಾಡಿ, ಅದನ್ನೇ ಸರಿಯಾದ ವಿಧಾನವೆಂದು ಮಕ್ಕಳಿಗೆ ತೋರಿಸಿದರೆ, ಅವರು ಮುಂದಿನ ದಿನಗಳಲ್ಲಿ ಅದನ್ನೇ ಅನುಸರಿಸುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ರಾಷ್ಟ್ರಧ್ವಜದ ಗೌರವ, ಧ್ವಜಾರೋಹಣದ ವಿಧಾನ ಮತ್ತು ರಾಷ್ಟ್ರೀಯ ಶಿಸ್ತಿನ ವಿಚಾರದಲ್ಲಿ ನಾವು ಮಕ್ಕಳಿಗೆ ಸರಿಯಾದ ಮಾದರಿಯಾಗಬೇಕು. ಸಣ್ಣದಾಗಿ ಕಾಣುವ ಇಂತಹ ವಿಷಯಗಳಲ್ಲಿಯೂ ಅರಿವು, ಜವಾಬ್ದಾರಿ ಮತ್ತು ಎಚ್ಚರಿಕೆ ಅಗತ್ಯ.
ಈ ಸಮಯದಲ್ಲಿ ಒಂದು ಪ್ರಶ್ನೆ — ನಿಮ್ಮ ಶಾಲೆಯಲ್ಲಿ ಧ್ವಜಾರೋಹಣ ಹೇಗೆ ನಡೆಯಿತು? ನಿಮ್ಮ ಶಾಲೆ ಅಥವಾ ಕಚೇರಿಯಲ್ಲಿ ಈ ಬಾರಿ ಧ್ವಜಾರೋಹಣ ಮಾಡಿದ್ದೀರಾ?
ಮಾಡಿದ್ದರೆ, ಒಮ್ಮೆ ಯೋಚಿಸಿ ನೋಡಿ… ಆ ಧ್ವಜವನ್ನು ನಿಗದಿತ ಸಮಯದಲ್ಲಿ ಅಧಿಕೃತ ವ್ಯಕ್ತಿಯೇ ಮೇಲಕ್ಕೆ ಏರಿಸಿದ್ದಾರೆಯೇ? ಅಥವಾ ಧ್ವಜವನ್ನು ಮೊದಲೇ ಮೇಲಕ್ಕೆ ಎಳೆದು ಕಟ್ಟಿ ಇಟ್ಟು, ಧ್ವಜಾರೋಹಣ ಮಾಡಲು ನೇಮಿಸಿದ ಅಧಿಕೃತ ವ್ಯಕ್ತಿಯಿಂದ ನಂತರ ಕೇವಲ ಕಟ್ಟನ್ನು ಬಿಡಿಸಲಾಗಿದೆಯೇ? ಒಮ್ಮೆ ನಿಮ್ಮ ಶಾಲೆ/ಕಚೇರಿಯಲ್ಲಿ ನಡೆದ ಧ್ವಜಾರೋಹಣದ ಕ್ರಮವನ್ನು ನೀವೇ ಪರಿಶೀಲಿಸಿ ನೋಡಿ.
ಇದು ಯಾರನ್ನೂ ತಪ್ಪು ಹಿಡಿಯುವ ಉದ್ದೇಶದಿಂದ ಕೇಳುತ್ತಿರುವ ಪ್ರಶ್ನೆಯಲ್ಲ. ಸರಿಯಾದ ವಿಧಾನವನ್ನು ತಿಳಿದುಕೊಂಡು, ಅರಿವಿನ ಕೊರತೆಯಿಂದ ನಡೆಯಬಹುದಾದ ತಪ್ಪುಗಳು ಮುಂದಿನ ದಿನಗಳಲ್ಲಿ ಮರುಕಳಿಸದಂತೆ ನೋಡಿಕೊಳ್ಳುವ ಉದ್ದೇಶದಿಂದ ಕೇಳುತ್ತಿರುವ ಪ್ರಶ್ನೆ.
ರಾಷ್ಟ್ರಧ್ವಜ — ನಮ್ಮ ಹೆಮ್ಮೆ, ನಮ್ಮ ಜವಾಬ್ದಾರಿ ರಾಷ್ಟ್ರಧ್ವಜ ಕೇವಲ ಒಂದು ಬಾವುಟವಲ್ಲ. ಅದು ನಮ್ಮ ಸ್ವಾತಂತ್ರ್ಯ, ಸಾರ್ವಭೌಮತ್ವ, ಏಕತೆ ಮತ್ತು ರಾಷ್ಟ್ರೀಯ ಗೌರವದ ಸಂಕೇತ. ಆದ್ದರಿಂದ ಧ್ವಜಾರೋಹಣದಂತಹ ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ನಾವು ತೋರಿಸುವ ಪ್ರತಿಯೊಂದು ನಡೆ ಮಕ್ಕಳಿಗೆ ಒಂದು ಸಂದೇಶವಾಗುತ್ತದೆ.
ನಾವು ಮಕ್ಕಳಿಗೆ ಹೇಳುವುದಕ್ಕಿಂತ, ನಾವು ಮಾಡುವುದನ್ನು ಮಕ್ಕಳು ಹೆಚ್ಚು ಕಲಿಯುತ್ತಾರೆ. ಹೀಗಾಗಿ ಮುಂದಿನ ರಾಷ್ಟ್ರೀಯ ಹಬ್ಬದಿಂದಲೇ ಸರಿಯಾದ ಅರಿವಿನೊಂದಿಗೆ, ನಿಯಮಾನುಸಾರವಾಗಿ ಮತ್ತು ಅತ್ಯಂತ ಗೌರವಪೂರ್ವಕವಾಗಿ ರಾಷ್ಟ್ರಧ್ವಜಾರೋಹಣ ನಡೆಸೋಣ.
Moidin Kutti State President Karnataka State SDMC Co-Ordination Central Forum(R.)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.