(www.vknews.in) : ಮಂಗಳೂರಿನ ಕೂಳೂರು ಬ್ರಿಡ್ಜ್ ಹಾಗೂ ತಣ್ಣೀರುಬಾವಿ ತಿರುವು ಇದೀಗ ಸಾವಿನ ತಿರುವಾಗಿ ಮಾರ್ಪಟ್ಟಿದೆ. ಇಲ್ಲಿ ದಿನದಿಂದ ದಿನಕ್ಕೆ ಅಪಘಾತಗಳು ಹೆಚ್ಚಾಗುತ್ತಿದ್ದು, ಹಲವಾರು ಅಮೂಲ್ಯ ಜೀವಗಳು ಬಲಿಯಾಗಿವೆ. ಆದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹಾಗೂ ಜಿಲ್ಲಾಡಳಿತ ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೆ ಕಣ್ಣು ಮುಚ್ಚಿ ಕುಳಿತಿರುವುದಕ್ಕೆ SDPI ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಈ ಕುರಿತು ಮಾತನಾಡಿದ SDPI ಮಂಗಳೂರು ಉತ್ತರ ಕ್ಷೇತ್ರ ಅಧ್ಯಕ್ಷ ಉಸ್ಮಾನ್ ಗುರುಪುರ ಅವರು, “ಕೂಳೂರು ಬ್ರಿಡ್ಜ್ ನಿಂದ ತಣ್ಣೀರುಬಾವಿ ಕಡೆಗೆ ತಿರುಗುವ ಜಾಗ ಅತ್ಯಂತ ಅಪಾಯಕಾರಿ. ರಸ್ತೆ ವಿನ್ಯಾಸದಲ್ಲೇ ದೋಷವಿದೆ. ಸೂಚನಾ ಫಲಕಗಳಿಲ್ಲ, ಸ್ಪೀಡ್ ಬ್ರೇಕರ್ ಇಲ್ಲ, ರಿಫ್ಲೆಕ್ಟರ್ ಇಲ್ಲ, ಸ್ಟ್ರೀಟ್ ಲೈಟ್ ಕೂಡ ಸರಿಯಿಲ್ಲ. ರಾತ್ರಿ ವೇಳೆ ವಾಹನ ಸವಾರರಿಗೆ ಏನೂ ಕಾಣುವುದಿಲ್ಲ. ಇದು ಅಪಘಾತದ ತಾಣವಲ್ಲ, ಇದು NHAI ಯ ನಿರ್ಲಕ್ಷ್ಯದಿಂದ ಸೃಷ್ಟಿಯಾದ ಸಾವಿನ ಕೂಪ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಇಲ್ಲಿ ಅಪಘಾತವಾಗಿ ಇನ್ನೆಷ್ಟು ಶವಗಳು ಬಿದ್ದರೆ NHAI ಎಚ್ಚೆತ್ತುಕೊಳ್ಳುತ್ತದೆ? ಇನ್ನೆಷ್ಟು ಕುಟುಂಬಗಳು ಅನಾಥವಾಗಬೇಕು?” ಎಂದು ಅವರು ಪ್ರಶ್ನಿಸಿದರು.
SDPI ಆಗ್ರಹಗಳು:
1. ಕೂಳೂರು ಬ್ರಿಡ್ಜ್ – ತಣ್ಣೀರುಬಾವಿ ತಿರುವಿನಲ್ಲಿ ಕೂಡಲೇ ವೈಜ್ಞಾನಿಕ ರೀತಿಯಲ್ಲಿ ರಸ್ತೆ ದುರಸ್ತಿ ಮಾಡಬೇಕು. 2. ಅಪಘಾತ ತಡೆಗಟ್ಟಲು ಸ್ಪೀಡ್ ಬ್ರೇಕರ್, ರಂಬಲ್ ಸ್ಟ್ರಿಪ್, ರಿಫ್ಲೆಕ್ಟರ್, ಸೂಚನಾ ಫಲಕ ಹಾಗೂ ಸ್ಟ್ರೀಟ್ ಲೈಟ್ ಅಳವಡಿಸಬೇಕು. 3. ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ NHAI ಯಿಂದ ಸೂಕ್ತ ಪರಿಹಾರ ನೀಡಬೇಕು. 4. ಅಪಘಾತಗಳ ಬಗ್ಗೆ ಶ್ವೇತಪತ್ರ ಹೊರಡಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
“ಈ ಬಗ್ಗೆ NHAI ಕ್ರಮ ಕೈಗೊಳ್ಳದಿದ್ದರೆ, SDPI ವತಿಯಿಂದ ಕೂಳೂರು ಬ್ರಿಡ್ಜ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ರಸ್ತೆ ತಡೆ ಮಾಡಲಾಗುವುದು” ಎಂದು ಉಸ್ಮಾನ್ ಗುರುಪುರ ಎಚ್ಚರಿಕೆ ನೀಡಿದರು.
– ಉಸ್ಮಾನ್ ಗುರುಪುರ, ಅಧ್ಯಕ್ಷರು SDPI ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸಮಿತಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.