ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕಾದರೆ ಶಿಕ್ಷಕರ ವೃತ್ತಿಪರ ಸಾಮರ್ಥ್ಯ ಮತ್ತು ಬೋಧನಾ ಕೌಶಲ್ಯ ನಿರಂತರವಾಗಿ ಅಭಿವೃದ್ಧಿಯಾಗಬೇಕು – ಮೊಯ್ದಿನ್ ಕುಟ್ಟಿ
(www.vknews.in) ; ಶಿಕ್ಷಣ ವ್ಯವಸ್ಥೆಯಲ್ಲಿ ಗುಣಮಟ್ಟವನ್ನು ಕಾಪಾಡಲು ಶಿಕ್ಷಕರ ಅರ್ಹತೆ, ಬೋಧನಾ ಸಾಮರ್ಥ್ಯ ಮತ್ತು ವೃತ್ತಿಪರ ನೈಪುಣ್ಯತೆ ಅತ್ಯಂತ ಪ್ರಮುಖವಾಗಿವೆ. ಶಿಕ್ಷಕರಿಗೆ ಅಗತ್ಯವಾದ ಶೈಕ್ಷಣಿಕ ಅರ್ಹತೆ ಹಾಗೂ ಬೋಧನಾ ಕೌಶಲ್ಯವಿರುವುದು ಮಕ್ಕಳ ಕಲಿಕಾ ಪ್ರಗತಿಗೆ ಪೂರಕವಾಗುತ್ತದೆ. ಈ ನಿಟ್ಟಿನಲ್ಲಿ TET ಅರ್ಹತೆಯನ್ನು ಕಡ್ಡಾಯಗೊಳಿಸಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ವೇದಿಕೆಯ ರಾಜ್ಯ ಅಧ್ಯಕ್ಷರಾದ ಮೊಯ್ದಿನ್ ಕುಟ್ಟಿ ತಿಳಿಸಿದ್ದಾರೆ.
ಕೇವಲ ನೇಮಕಾತಿ ಸಂದರ್ಭದಲ್ಲಿ ಅಥವಾ ಸೇವೆಯಲ್ಲಿರುವಾಗ ಒಂದು ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದರಿಂದ ಮಾತ್ರ ಶಿಕ್ಷಕರ ವೃತ್ತಿಪರ ಸಾಮರ್ಥ್ಯವನ್ನು ನಿರಂತರವಾಗಿ ಅಳೆಯಲು ಸಾಧ್ಯವಿಲ್ಲ. ಬದಲಾಗುತ್ತಿರುವ ಶಿಕ್ಷಣ ಪದ್ಧತಿ, ಹೊಸ ಬೋಧನಾ ತಂತ್ರಜ್ಞಾನ, ಮಕ್ಕಳ ಮನೋವೈಜ್ಞಾನಿಕ ಬೆಳವಣಿಗೆ, ಕಲಿಕಾ ಸಾಮರ್ಥ್ಯ ಮತ್ತು ಹೊಸ ಪಠ್ಯಕ್ರಮಗಳಿಗೆ ಅನುಗುಣವಾಗಿ ಶಿಕ್ಷಕರು ತಮ್ಮ ಜ್ಞಾನ ಹಾಗೂ ಬೋಧನಾ ಕೌಶಲ್ಯವನ್ನು ನಿರಂತರವಾಗಿ ನವೀಕರಿಸಿಕೊಳ್ಳುವುದು ಅತ್ಯಗತ್ಯ.
ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರಿಗೆ ಪ್ರತಿವರ್ಷ ವಾರ್ಷಿಕ ಶಿಕ್ಷಕರ ನೈಪುಣ್ಯತೆ ಮತ್ತು ವೃತ್ತಿಪರ ಸಾಮರ್ಥ್ಯ ಮೌಲ್ಯಮಾಪನ ಪರೀಕ್ಷೆ ನಡೆಸುವಂತೆ ಸರ್ಕಾರಕ್ಕೆ ವೇದಿಕೆ ಆಗ್ರಹಿಸುತ್ತದೆ.
ಈ ಪರೀಕ್ಷೆಯು ಶಿಕ್ಷಕರನ್ನು ಶಿಕ್ಷಿಸುವ ಅಥವಾ ಕೇವಲ ಉತ್ತೀರ್ಣ-ಅನುತ್ತೀರ್ಣ ಎಂದು ವಿಂಗಡಿಸುವ ವ್ಯವಸ್ಥೆಯಾಗಬಾರದು. ಬದಲಾಗಿ ಶಿಕ್ಷಕರಲ್ಲಿರುವ ಬೋಧನಾ ಸಾಮರ್ಥ್ಯ, ವಿಷಯ ಜ್ಞಾನ, ಮಕ್ಕಳೊಂದಿಗೆ ಸಂವಹನ, ತರಗತಿ ನಿರ್ವಹಣೆ, ಕಲಿಕಾ ಫಲಿತಾಂಶ ಸುಧಾರಿಸುವ ಸಾಮರ್ಥ್ಯ ಹಾಗೂ ಹೊಸ ಶಿಕ್ಷಣ ವಿಧಾನಗಳನ್ನು ಅಳವಡಿಸಿಕೊಳ್ಳುವ ಕೌಶಲ್ಯವನ್ನು ಮೌಲ್ಯಮಾಪನ ಮಾಡುವ ವೈಜ್ಞಾನಿಕ ವ್ಯವಸ್ಥೆಯಾಗಬೇಕು.
ಶಾಲೆಗಳಲ್ಲಿ ಉತ್ತಮ ಕಟ್ಟಡ, ಮೂಲಸೌಕರ್ಯ, ಸ್ಮಾರ್ಟ್ ಕ್ಲಾಸ್ ಮತ್ತು ಆಧುನಿಕ ಸೌಲಭ್ಯಗಳಿರುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾಗಿ ಸಮರ್ಥ ಶಿಕ್ಷಕರಿರುವುದು ಅಗತ್ಯ. ಶಾಲೆಯ ನಿಜವಾದ ಗುಣಮಟ್ಟವನ್ನು ನಿರ್ಧರಿಸುವುದು ಮಕ್ಕಳ ಕಲಿಕಾ ಪ್ರಗತಿಯಾಗಿದೆ. ಆದ್ದರಿಂದ ಶಿಕ್ಷಕರ ತರಬೇತಿ, ಅರ್ಹತೆ ಮತ್ತು ಕಾರ್ಯಕ್ಷಮತೆಯ ಮೌಲ್ಯಮಾಪನಕ್ಕೆ ಸರ್ಕಾರ ವಿಶೇಷ ಆದ್ಯತೆ ನೀಡಬೇಕು.
ವಾರ್ಷಿಕ ನೈಪುಣ್ಯತೆ ಪರೀಕ್ಷೆಯ ಆಧಾರದ ಮೇಲೆ ಶಿಕ್ಷಕರಿಗೆ ಅಗತ್ಯವಿರುವ ಮರುತರಬೇತಿ, ವಿಷಯಾಧಾರಿತ ಕಾರ್ಯಾಗಾರಗಳು ಹಾಗೂ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮೌಲ್ಯಮಾಪನದಲ್ಲಿ ಮಕ್ಕಳ ಸಾಮಾಜಿಕ ಮತ್ತು ಕಲಿಕಾ ಹಿನ್ನೆಲೆ ಹಾಗೂ ಶಾಲೆಗಳಲ್ಲಿನ ಮೂಲಸೌಕರ್ಯ ಕೊರತೆಗಳನ್ನೂ ಪರಿಗಣಿಸಬೇಕು.
ಸುಪ್ರೀಂ ಕೋರ್ಟ್ನ 01-09-2025ರ ತೀರ್ಪಿನ ಬಳಿಕ 29-05-2026ರ ಮರುಪರಿಶೀಲನಾ ತೀರ್ಪಿನಲ್ಲಿ ಅರ್ಹ ಶಿಕ್ಷಕರಿಗೆ TET ಉತ್ತೀರ್ಣರಾಗಲು 31-08-2028ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದ್ದು, ವರ್ಷಕ್ಕೆ ಎರಡು ಬಾರಿ TET ನಡೆಸಲು ನ್ಯಾಯಾಲಯ ಸಲಹೆ ನೀಡಿದೆ.
ವೇದಿಕೆಯ ಪ್ರಮುಖ ಆಗ್ರಹಗಳು:
ಶಿಕ್ಷಕರ ಹಕ್ಕುಗಳು ಮತ್ತು ಗೌರವಕ್ಕೆ ಧಕ್ಕೆಯಾಗದ ರೀತಿಯಲ್ಲಿ, ಮಕ್ಕಳ ಶೈಕ್ಷಣಿಕ ಹಿತಾಸಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ಇಂತಹ ಸುಧಾರಣೆಗಳನ್ನು ಜಾರಿಗೆ ತರಬೇಕು. ಶಿಕ್ಷಕರ ಸಾಮರ್ಥ್ಯ ವೃದ್ಧಿಸುವುದರಿಂದಲೇ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಲು ಸಾಧ್ಯ.
“ಶಿಕ್ಷಕರ ಅರ್ಹತೆ, ನಿರಂತರ ನೈಪುಣ್ಯತೆ ಮತ್ತು ಮಕ್ಕಳ ಕಲಿಕಾ ಪ್ರಗತಿ – ಇವು ಗುಣಮಟ್ಟದ ಶಿಕ್ಷಣದ ಮೂರು ಪ್ರಮುಖ ಆಧಾರಸ್ತಂಭಗಳು. ಶಿಕ್ಷಕರನ್ನು ಗೌರವಿಸುವುದರ ಜೊತೆಗೆ ಅವರ ವೃತ್ತಿಪರ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸುವ ಜವಾಬ್ದಾರಿಯೂ ಶಿಕ್ಷಣ ವ್ಯವಸ್ಥೆಯ ಮೇಲಿದೆ” ಎಂದು ಮೊಯ್ದಿನ್ ಕುಟ್ಟಿ ಅಭಿಪ್ರಾಯಪಟ್ಟಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.