ಕೋಲಾರ (www.vknews.in): ಹವಾಮಾನ ವೈಪರೀತ್ಯ, ಮಳೆಯ ಅನಿಶ್ಚಿತತೆ, ದೀರ್ಘಕಾಲದ ಒಣಹವೆ ಹಾಗೂ ಹೆಚ್ಚುತ್ತಿರುವ ತಾಪಮಾನದಿಂದ ತೋಟಗಾರಿಕೆ ಬೆಳೆಗಳು ಬರ ಮತ್ತು ತೇವಾಂಶದ ಕೊರತೆಯ ಒತ್ತಡಕ್ಕೆ ಒಳಗಾಗುತ್ತಿವೆ. ವಿಶೇಷವಾಗಿ ಮಾವು, ದ್ರಾಕ್ಷಿ, ಸಿಟ್ರಸ್ ಹಾಗೂ ತರಕಾರಿ ಬೆಳೆಗಳಲ್ಲಿ ನೀರಿನ ಕೊರತೆಯಿಂದ ಸಸ್ಯಗಳ ಬೆಳವಣಿಗೆ, ಹೂ ಬಿಡುವಿಕೆ, ಕಾಯಿ ಕಟ್ಟುವಿಕೆ ಮತ್ತು ಇಳುವರಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ ರೈತರು ಬರದ ಪರಿಣಾಮವನ್ನು ಕಡಿಮೆ ಮಾಡಲು ವೈಜ್ಞಾನಿಕ ನೀರಾವರಿ ಪದ್ಧತಿಗಳು, ಮಳೆನೀರು ಕೊಯ್ಲು, ಮಣ್ಣಿನ ತೇವಾಂಶ ಸಂರಕ್ಷಣೆ, ಸೂಕ್ತ ತಳಿಗಳ ಆಯ್ಕೆ ಹಾಗೂ ಸಮತೋಲಿತ ಪೋಷಕಾಂಶ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದು ಐಸಿಎಆರ್–ಕೃಷಿ ವಿಜ್ಞಾನ ಕೇಂದ್ರ, ಕೋಲಾರದ ಮಣ್ಣು ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಅನಿಲ್ ಕುಮಾರ್ ಎಸ್. ಸಲಹೆ ನೀಡಿದ್ದಾರೆ.
ಹನಿ ನೀರಾವರಿ ಮತ್ತು ಮೈಕ್ರೋ ಸ್ಪ್ರಿಂಕ್ಲರ್ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ನೀರಿನ ವ್ಯರ್ಥ ಬಳಕೆಯನ್ನು ತಡೆದು ಸಸ್ಯಗಳ ಬೇರು ವಲಯಕ್ಕೆ ಅಗತ್ಯ ಪ್ರಮಾಣದ ನೀರನ್ನು ತಲುಪಿಸಬಹುದು. ಹೂ ಬಿಡುವಿಕೆ, ಕಾಯಿ ಕಟ್ಟುವಿಕೆ ಮತ್ತು ಕಾಯಿ ಬೆಳವಣಿಗೆಯ ನಿರ್ಣಾಯಕ ಹಂತಗಳಲ್ಲಿ ಸಮಯಕ್ಕೆ ಸರಿಯಾಗಿ ನೀರಾವರಿ ಒದಗಿಸುವುದು ಮುಖ್ಯವಾಗಿದೆ.
ಮಳೆಗಾಲದಲ್ಲಿ ಲಭ್ಯವಾಗುವ ನೀರನ್ನು ಕೃಷಿ ಹೊಂಡಗಳು, ಚೆಕ್ಡ್ಯಾಂಗಳು ಹಾಗೂ ಇತರ ಮಳೆನೀರು ಸಂಗ್ರಹಣಾ ವ್ಯವಸ್ಥೆಗಳ ಮೂಲಕ ಸಂರಕ್ಷಿಸಿ ಬೇಸಿಗೆಯಲ್ಲಿ ಬಳಸಿಕೊಳ್ಳಬೇಕು. ಮಣ್ಣಿನ ತೇವಾಂಶ ಕಾಪಾಡಲು ಒಣ ಎಲೆಗಳು, ಭತ್ತದ ಹುಲ್ಲು ಮತ್ತು ಬೆಳೆ ಅವಶೇಷಗಳಿಂದ ಮಲ್ಚಿಂಗ್ ಮಾಡಬೇಕು. ಇದರಿಂದ ನೀರಿನ ಆವಿಯಾಗುವಿಕೆ ಕಡಿಮೆಯಾಗಿ ಮಣ್ಣಿನ ಫಲವತ್ತತೆ ಸುಧಾರಿಸುತ್ತದೆ.
ಸ್ಥಳೀಯ ಮಣ್ಣು, ಹವಾಮಾನ ಮತ್ತು ನೀರಿನ ಲಭ್ಯತೆಗೆ ಅನುಗುಣವಾಗಿ ಬರ ನಿರೋಧಕ ಗುಣ ಹೊಂದಿರುವ ಸೂಕ್ತ ತಳಿಗಳನ್ನು ಆಯ್ಕೆ ಮಾಡಬೇಕು. ತೋಟಗಳಲ್ಲಿ ಒಣಗಿದ ಹಾಗೂ ರೋಗಪೀಡಿತ ಕೊಂಬೆಗಳನ್ನು ವೈಜ್ಞಾನಿಕವಾಗಿ ಕತ್ತರಿಸುವುದರ ಜೊತೆಗೆ ಅಗತ್ಯವಿರುವ ಕಡೆ ನೆರಳು ಬಲೆ ಮತ್ತು ಗಾಳಿತಡೆ ಮರಗಳನ್ನು ಬೆಳೆಸುವುದು ಸಹಕಾರಿ.
ಮಣ್ಣಿನ ಆರೋಗ್ಯ ಸುಧಾರಣೆಗೆ ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಎರೆಹುಳು ಗೊಬ್ಬರ ಹಾಗೂ ಸೂಕ್ತ ಗುಣಮಟ್ಟದ ಬಯೋಚಾರ ಬಳಕೆ ಮಾಡಬಹುದು. ಹೈಡ್ರೋಜೆಲ್, ಕಡಲಕಳೆ ಸಾರ, ಕಾಯೋಲಿನ್ ಆಧಾರಿತ ಉತ್ಪನ್ನಗಳು ಮತ್ತು ಮೈಕೋರೈಜಾ ಜೈವಿಕ ಗೊಬ್ಬರಗಳನ್ನು ಕೃಷಿ ತಜ್ಞರ ಶಿಫಾರಸಿನಂತೆ ಬಳಸುವುದರಿಂದ ಬರದ ಒತ್ತಡವನ್ನು ಎದುರಿಸಲು ಸಹಾಯವಾಗುತ್ತದೆ.
ಅಲ್ಲದೆ, ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಪೊಟ್ಯಾಶಿಯಂ ಸೇರಿದಂತೆ ಅಗತ್ಯ ಪೋಷಕಾಂಶಗಳನ್ನು ಸಮತೋಲಿತವಾಗಿ ಒದಗಿಸಬೇಕು. ಬೆಳೆಗಳ ನಿರ್ಣಾಯಕ ಹಂತಗಳಲ್ಲಿ ಮಣ್ಣಿನ ತೇವಾಂಶವನ್ನು ಪರಿಶೀಲಿಸಿ ಸೂಕ್ತ ಸಮಯದಲ್ಲಿ ನೀರಾವರಿ ನೀಡುವುದು ಅತ್ಯಗತ್ಯ.
ರೈತರು ಬೇಸಿಗೆ ಆರಂಭವಾಗುವ ಮುನ್ನವೇ ನೀರಿನ ಲಭ್ಯತೆ ಕುರಿತು ಯೋಜನೆ ರೂಪಿಸಿಕೊಂಡು ಕೃಷಿ ಹೊಂಡಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಲಭ್ಯವಿರುವ ಮಳೆನೀರನ್ನು ಸಂಗ್ರಹಿಸಿ, ನೀರನ್ನು ಮಿತವಾಗಿ ಬಳಸುವ ಮೂಲಕ ತೋಟಗಾರಿಕೆ ಬೆಳೆಗಳ ಉತ್ಪಾದಕತೆಯನ್ನು ಕಾಪಾಡಿಕೊಳ್ಳಬಹುದು.
ವೈಜ್ಞಾನಿಕ ನೀರಾವರಿ, ಮಣ್ಣಿನ ಆರೋಗ್ಯ ಸುಧಾರಣೆ, ಸಾವಯವ ಪದಾರ್ಥಗಳ ಹೆಚ್ಚಳ ಮತ್ತು ಸಮಗ್ರ ಬೆಳೆ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಂಡರೆ ಬರದಿಂದ ಉಂಟಾಗುವ ನಷ್ಟವನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ಡಾ. ಅನಿಲ್ ಕುಮಾರ್ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.