ಕೋಲಾರದ ಪಿ.ಸಿ. ಬಡಾವಣೆಯ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಆಟೋ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ. ಜಯದೇವ್ ಕೊಡುಗೆಯಾಗಿ ನೀಡಿದ ಉಚಿತ ಸಮವಸ್ತ್ರಗಳನ್ನು ನಗರ ಠಾಣೆಯ ವೃತ್ತ ನಿರೀಕ್ಷಕ ಲೋಕೇಶ್ ಆಟೋ ಚಾಲಕರಿಗೆ ವಿತರಿಸಿದರು.
ನಗರದ ಪಿ.ಸಿ. ಬಡಾವಣೆಯ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಆಟೋ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ ಭುವನೇಶ್ವರಿ ದೇವಿಯ ಭಾವಚಿತ್ರ ಹಾಗೂ ಕನ್ನಡ ಧ್ವಜಕ್ಕೆ ಪೂಜೆ ಸಲ್ಲಿಸಿ, ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ. ಜಯದೇವ್ ಅವರು ಕೊಡುಗೆಯಾಗಿ ನೀಡಿದ ಸಮವಸ್ತ್ರಗಳನ್ನು ಆಟೋ ಚಾಲಕರಿಗೆ ವಿತರಿಸಿ ಅವರು ಮಾತನಾಡಿದರು.
ಪ್ರಯಾಣಿಕರ ಸುರಕ್ಷತೆ, ಸೌಜನ್ಯಯುತ ವರ್ತನೆ ಮತ್ತು ಪ್ರಾಮಾಣಿಕತೆ ಆಟೋ ಚಾಲಕರ ವೃತ್ತಿಪರತೆಯನ್ನು ಪ್ರತಿಬಿಂಬಿಸುತ್ತವೆ. ಚಾಲಕರು ಪ್ರಯಾಣಿಕರೊಂದಿಗೆ ತಾಳ್ಮೆಯಿಂದ ವರ್ತಿಸುವುದರ ಜತೆಗೆ, ಸರ್ಕಾರ ನಿಗದಿಪಡಿಸಿರುವ ಪ್ರಮಾಣದಲ್ಲಿಯೇ ಆಟೋ ಬಾಡಿಗೆ ಪಡೆಯಬೇಕು. ಹಿರಿಯ ನಾಗರಿಕರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳೊಂದಿಗೆ ಗೌರವ ಮತ್ತು ವಿನಯದಿಂದ ನಡೆದುಕೊಳ್ಳಬೇಕು. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಪ್ರತಿಯೊಬ್ಬ ಚಾಲಕನ ಕರ್ತವ್ಯವಾಗಿದೆ ಎಂದು ತಿಳಿಸಿದರು. ಕನ್ನಡ ಭಾಷೆ, ನಾಡು-ನುಡಿ ಮತ್ತು ಸಂಸ್ಕೃತಿಯ ಉಳಿವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು. ವೃತ್ತಿಯಲ್ಲಿ ಪ್ರಾಮಾಣಿಕತೆ ಮೆರೆದು ಸಮಾಜಕ್ಕೆ ಮಾದರಿಯಾಗಿ ಬದುಕುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಸಾಂಪ್ರದಾಯಿಕ ಆಟೋ ಚಾಲಕರ ಹಿತಾಸಕ್ತಿ ಕಾಪಾಡಲು ಕ್ರಮ ಅಗತ್ಯ: ಗಣೇಶ್ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್. ಗಣೇಶ್ ಮಾತನಾಡಿ, ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗುತ್ತಿರುವ ‘ರಾಪಿಡೋ’ ಬೈಕ್ ಟ್ಯಾಕ್ಸಿ ಸೇವೆಗಳು ಸಾಂಪ್ರದಾಯಿಕ ಆಟೋ ಚಾಲಕರ ಜೀವನೋಪಾಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಈಗಾಗಲೇ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಆಟೋ ಚಾಲಕರು ಬದಲಾಗುತ್ತಿರುವ ಸ್ಪರ್ಧಾತ್ಮಕ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ಕಾಲಕ್ಕೆ ತಕ್ಕಂತೆ ಆಟೋ ಚಾಲಕರು ತಮ್ಮ ಸೇವೆಯಲ್ಲಿ ಪಾರದರ್ಶಕತೆ, ಶಿಸ್ತು ಮತ್ತು ಗ್ರಾಹಕಸ್ನೇಹಿ ಮನೋಭಾವ ಬೆಳೆಸಿಕೊಳ್ಳುವ ಮೂಲಕ ಸಾರ್ವಜನಿಕರ ವಿಶ್ವಾಸ ಗಳಿಸಬೇಕು. ಅದೇ ರೀತಿ ಸಾಂಪ್ರದಾಯಿಕ ಆಟೋ ಚಾಲಕರ ಜೀವನೋಪಾಯ ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ಸರ್ಕಾರವೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಪ್ರತಿವರ್ಷ ಉಚಿತ ಸಮವಸ್ತ್ರ ವಿತರಣೆ: ಕೆ. ಜಯದೇವ್ ಪ್ರತಿವರ್ಷ ಆಟೋ ಚಾಲಕರಿಗೆ ಉಚಿತ ಸಮವಸ್ತ್ರಗಳನ್ನು ಕೊಡುಗೆಯಾಗಿ ನೀಡುತ್ತಿರುವ ಕಾಂಗ್ರೆಸ್ ಮುಖಂಡ ಹಾಗೂ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಕೆ. ಜಯದೇವ್ ಮಾತನಾಡಿ, ಆಟೋ ಚಾಲಕರು ನಮ್ಮ ಊರಿನ ರಸ್ತೆಗಳ ನಿಜವಾದ ಜೀವನಾಡಿಯಾಗಿದ್ದಾರೆ. ಅವರ ಜೀವನೋಪಾಯ ಸುಗಮವಾಗಿ ಸಾಗಲು ಸಮಾಜದ ಪ್ರತಿಯೊಬ್ಬರೂ ಸಹಕಾರ ನೀಡಬೇಕು. ಕನ್ನಡ ರಾಜ್ಯೋತ್ಸವದಂತಹ ವಿಶೇಷ ಸಂದರ್ಭದಲ್ಲಿ ಅವರೊಂದಿಗೆ ಸಂಭ್ರಮ ಹಂಚಿಕೊಳ್ಳುವುದು ಸಂತೋಷದ ಸಂಗತಿಯಾಗಿದೆ ಎಂದರು.
ಕಳೆದ ಹಲವು ವರ್ಷಗಳಿಂದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಆಟೋ ನಿಲ್ದಾಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವುದರ ಜತೆಗೆ ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸುತ್ತಾ ಬಂದಿದ್ದು, ಮುಂದಿನ ವರ್ಷಗಳಲ್ಲಿಯೂ ಈ ಸೇವೆಯನ್ನು ಮುಂದುವರಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ನಗರ ಸಂಚಾರ ಠಾಣೆಯ ಪೊಲೀಸ್ ನಿರೀಕ್ಷಕಿ ಚಂದ್ರಕಲಾ, ಸಮಾಜ ಸೇವಕ ಸೋಮಶೇಖರ್ ಮುದ್ದಪ್ಪ, ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ಆಟೋ ಚಾಲಕರಾದ ಶ್ರೀನಿವಾಸಮೂರ್ತಿ, ಬಾಲಯ್ಯ, ಧರ್ಮ, ಜಗದೀಶ್, ಅಲ್ತಾಫ್, ಪುನೀತ್, ರಾಜೇಶ್, ಶೇಖರ್, ರಾಜಣ್ಣ, ನಾಗೇಶ್, ಅರ್ಜುನ್, ಮುನಿವೆಂಕಟ, ನಾಗೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.